ಜಗಳೂರು: ಪಟ್ಟಣದ ಇಮಾಂ ಮತ್ತು ಇಂದಿರಾ ಬಡಾವಣೆಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ನೀರಿನ ಸಮಸ್ಯೆಯಿಂದ ನಿವಾಸಿಗಳು ಹೈರಾಣಾಗಿ ಹೋಗಿದ್ದಾರೆ. ತಿಂಗಳು ಎರಡು ತಿಂಗಳಿಗೊಮ್ಮೆ ಶಾಂತಿ ಸಾಗರದ ಕುಡಿಯುವ ನೀರು ಪೂರೈಕೆಯಾದರೆ ಈ ಬಡಾವಣೆಗಳ ನಿವಾಸಿಗಳಿಗೆ ಸಂಭ್ರಮವೋ ಸಂಭ್ರಮ. ಬಡವರಿಗಂತೂ ಕುಡಿಯುವ ನೀರು ಬಂದರೆ ಮನೆಯಲ್ಲಿ ಹಬ್ಬದ ವಾತಾವರಣ.
ಎರಡು-ಮೂರು ದಿನಕ್ಕೊಮ್ಮೆ ಬಿಡುವ ಬೋರ್‌ವೆಲ್ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಇಲ್ಲಿನ
ನಿವಾಸಿಗಳಿಂದ ಕೇಳಿ ಬರುತ್ತಿದೆ. ಈ ಬೋರ್ ವೆಲ್ ನೀರು ಹಿಡಿಯಲು ಸಹ ನಾ ಮುಂದು ತಾ ಮುಂದು ಎಂಬ ಪೈಪೋಟಿ ಇಲ್ಲಿ ಸಾಮಾನ್ಯವಾಗಿದೆ. ಸಾರ್ವಜನಿಕ ನಳಗಳ ಮುಂದೆ ರಾಶಿ ರಾಶಿ ಕೊಡಗಳು ಕಾಣಸಿಗುತ್ತವೆ. ಸರದಿಯಂತೆ ನೀರು ಹಿಡಿದುಕೊಂಡರೆ ಸರಿ. ಸರದಿಯ ನಿಯಮ ಉಲ್ಲಂಘನೆಯಾದರೆ ಜಗಳಾಟ, ವಾಗ್ವಾದ ಗ್ಯಾರಂಟಿ.
ಬಡಾವಣೆಯಲ್ಲಿನ ನೀರಿನ ಸಮಸ್ಯೆಯಿಂದಾಗಿ ಸ್ವಂತ ಮನೆ ಇರುವವರೇ ಕೆಲವರು ಮನೆ ಖಾಲಿ ಮಾಡಿ ಬೇರೆ ಬಡಾವಣೆಗಳ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದ ಇತರರು ಸಮಸ್ಯೆಗೆ ಒಗ್ಗಿಕೊಂಡು ಅಧಿಕಾರಿಗಳಿಗೆ ಹಿಡಿ ಶಾಪಹಾಕಿ ಬದುಕುತ್ತಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳ ಸಮಸ್ಯೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ
ಗೊತ್ತಿದ್ದರೂ ಕೂಡ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ. ಬೋರ್‌ವೆಲ್ ಕೊರೆದು ಪೈಪ್‌ಲೈನ್
ಅಳವಡಿಸಿದ ಕೂಡಲೇ ನೀರು ಕೊಡುತ್ತೇವೆ ಎಂದು ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಕಳೆದ ಮೂರು ವರ್ಷಗಳಿಂದ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಇಮಾಂ ಹಾಗೂ ಇಂದಿರಾ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.