Advertisement

ಒಮ್ಮೆ ಟ್ರೈ ಮಾಡಿ…ಸ್ವಾದಿಷ್ಟಕರವಾದ ಅವಲಕ್ಕಿ ಮಸಾಲೆ ರೊಟ್ಟಿ ಮಾಡುವ ಸರಳ ವಿಧಾನ…

06:06 PM Dec 09, 2022 | ಶ್ರೀರಾಮ್ ನಾಯಕ್ |

ಅವಲಕ್ಕಿ ಮಸಾಲೆ ರೊಟ್ಟಿ ಒಮ್ಮೆ ಮಾಡಿ ತಿಂದರೆ ಸಾಕು ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ ಅಷ್ಟು ಚೆನ್ನಾಗಿರುತ್ತದೆ ಮಾತ್ರವಲ್ಲದೇ ಆರೋಗ್ಯಕ್ಕೂ ಇದು ಒಳ್ಳೆಯ ರೆಸಿಪಿ. ಅದುವೇ ಅವಲಕ್ಕಿಯಿಂದ ಮಾಡುವ ಮಸಾಲೆ ರೊಟ್ಟಿ. ಅವಲಕ್ಕಿಯಿಂದ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು .ಉದಾಃ ಮೊಸರು ಅವಲಕ್ಕಿ ದೋಸೆ, ಒಗ್ಗರಣೆ ಅವಲಕ್ಕಿ, ಅವಲಕ್ಕಿ ವಡೆ, ಅವಲಕ್ಕಿ ಕಿಚಿಡಿ ಹೀಗೆ ಹತ್ತು ಹಲವು.

Advertisement

ಅವಲಕ್ಕಿಯಲ್ಲಿ ವಿಟಮಿನ್‌ ಬಿ ಜತೆಗೆ ವಿಟಮಿನ್‌ ಎ,ಕಬ್ಬಿಣಾದಂಶ, ಕ್ಯಾಲ್ಸಿಯಂ ಇರುವುದರಿಂದ ಆರೋಗ್ಯಕ್ಕೂ ಇದು ತುಂಬಾನೇ ಒಳ್ಳೆಯದು. ಅಂದ ಹಾಗೆ ನಾವಿಲ್ಲಿ ಅವಲಕ್ಕಿ ಮಸಾಲ ರೊಟ್ಟಿ ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ. ನೀವು ಸಹ ಮನೆಯಲ್ಲೇ ಒಂದು ಸಲ ಟ್ರೈ ಮಾಡಿ ನೋಡಿ ಹೇಗಿತ್ತು ಅಂತ ಕಾಮೆಂಟ್‌ ಮೂಲಕ ತಿಳಿಸಿ..

ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾದ ಅವಲಕ್ಕಿ ಮಸಾಲೆ ರೊಟ್ಟಿ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ….

ಬೇಕಾಗುವ ಸಾಮಗ್ರಿಗಳು
ತೆಳು ಅವಲಕ್ಕಿ-ಅರ್ಧ ಕಪ್‌, ಅಕ್ಕಿ ಹಿಟ್ಟು-ಅರ್ಧ ಕಪ್‌, ಸಣ್ಣಗೆ ಹೆಚ್ಚಿದ ಈರುಳ್ಳಿ-1, ಜೀರಿಗೆ -ಅರ್ಧ ಚಮಚ,ತೆಂಗಿನ ತುರಿ-2 ಚಮಚ, ಖಾರದ ಪುಡಿ-1ಚಮಚ, ಧನಿಯಾ ಪುಡಿ-1ಚಮಚ, ಎಣ್ಣೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು -ಸ್ವಲ್ಪ, ಕರಿಬೇವಿನ ಎಲೆ-ಸ್ವಲ್ಪ, ಬಿಸಿ ನೀರು-ಬೆರೆಸಲು,ಉಪ್ಪು-ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ತೆಳು ಅವಲಕ್ಕಿಯನ್ನು ಹಾಕಿ ಒಂದು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಅವಲಕ್ಕಿಯನ್ನು ನೀರಿನಿಂದ ತೆಗೆದು ಇನ್ನೊಂದು ಪಾತ್ರೆಗೆ ವರ್ಗಾಯಿಸಿ(ದಪ್ಪ ಅವಲಕ್ಕಿ ಆದರೆ 10ನಿಮಿಷ ನೀರಿನಲ್ಲಿ ನೆನೆಸಿಡಿ). ನಂತರ ಅದಕ್ಕೆ ಈರುಳ್ಳಿ,ಅಕ್ಕಿ ಹಿಟ್ಟು ,ಜೀರಿಗೆ,ತೆಂಗಿನ ತುರಿ, ಖಾರದ ಪುಡಿ, ಧನಿಯಾ ಪುಡಿ ಸೇರಿಸಿ ಅವಲಕ್ಕಿಯನ್ನು ಆದಷ್ಟು ಹಿಸುಕಿ ಚೆನ್ನಾಗಿ ಮಿಶ್ರಣ ಮಾಡಿ. ತದನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆ , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬಿಸಿ ನೀರನ್ನು ಸೇರಿಸುತ್ತಾ ದಪ್ಪ ಹಿಟ್ಟನ್ನಾಗಿ ಮಾಡಿಕೊಳ್ಳಿ.ಆಮೇಲೆ ಬಟರ್‌ ಪೇಪರ್‌ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ, ಚೆಂಡಿನ ಗಾತ್ರದ ಹಿಟ್ಟನ್ನು ಅದಕ್ಕೆ ಹಾಕಿ ನಿಧಾನವಾಗಿ ಕೈಯಿಂದ ಹರಡಿ ಇಟ್ಟುಕೊಳ್ಳಿ (ಬಟರ್‌ ಪೇಪರ್‌ ಬದಲು ಬಾಳೆಎಲೆ ಬಳಸಬಹುದು).ನಂತರ ಒಂದು ಕಾವಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಾಡಿಟ್ಟ ರೊಟ್ಟಿ ಹಾಕಿ ಎರಡೂ ಬದಿಗಳಲ್ಲಿ ಚೆನ್ನಾಗಿ ಕಾಯಿಸಿರಿ.

Advertisement

ಈಗ ರುಚಿಕರವಾದಂತಹ ಅವಲಕ್ಕಿ ಮಸಾಲ ರೊಟ್ಟಿ ರೆಡಿಯಾಗಿದೆ.ಇದು ತೆಂಗಿನಕಾಯಿ ಚಟ್ನಿ ಜೊತೆ ಸವಿಯಿರಿ.

Advertisement

Udayavani is now on Telegram. Click here to join our channel and stay updated with the latest news.

Next