Advertisement

ಶ್ರೀಕೃಷ್ಣನಂತೆ ಅವಲಕ್ಕಿ ಪ್ರಿಯ ಸ್ವಾಮೀಜಿ

08:23 PM Dec 29, 2019 | mahesh |

ಉಡುಪಿ: ಪೇಜಾವರ ಶ್ರೀಗಳು ಯಾವುದೇ ಕನಸು ಕಂಡರೂ ಅದನ್ನು ತಲುಪುವ ತವಕ ಅವರಲ್ಲಿತ್ತು. 89ರ ಹರೆಯದಲ್ಲೂ ಅವರು ಕನಸುಗಳ ಹಿಂದೆ ಓಡುತ್ತಿದ್ದರು. ಅವರಲ್ಲಿ ನಾವು ಪುಟ್ಟ ಮಗುವನ್ನು ಕಂಡಿದ್ದೇವೆ ಎಂದು ಪೇಜಾವರ ಶ್ರೀಗಳಿಂದ ಪಾಠ ಕಲಿಯುತ್ತಿರುವ ಹಾಗೂ ಕಲಿತಿರುವ ಶಿಷ್ಯ ವೃಂದ ಉದಯವಾಣಿಯೊಂದಿಗಿನ ಸಂದರ್ಶನದಲ್ಲಿ ಹೇಳಿದ ಮಾತುಗಳು.

Advertisement

ಕಾಗೆ ಓಡಿಸಲು ಕೆಲಸಗಾರ!
ಪೇಜಾವರ ಶ್ರೀಪಾದರ 5ನೆಯ ಪರ್ಯಾಯ ಅವಧಿಯಲ್ಲಿ ಮಧ್ವ ಸರೋವರದಲ್ಲಿ ಒಮ್ಮೆ ಸ್ನಾನಕ್ಕೆ ತೆರಳಿದಾಗ ಕಾಗೆಗಳು ಆಹಾರಕ್ಕಾಗಿ ಮೀನು ಹಿಡಿಯುತ್ತಿರುವುದು ಗಮನಿಸಿ ಓಡಿಸುವ ಪ್ರಯತ್ನ ಮಾಡಿದ್ದರು. ಆ ಸಂದರ್ಭ ಶಿಷ್ಯರನ್ನು ಕರೆಸಿ ಓಡಿಸಿದರು. ಅನಂತರ ಒಬ್ಬ ಕೆಲಸಗಾರನನ್ನು ನೇಮಿಸಿ ಕಾಗೆಗಳಿಗೆ ಬೇರೆ ಆಹಾರ ಹಾಕಿ ಮೀನು ಹಿಡಿಯದಂತೆ ಎಚ್ಚರವಹಿಸಬೇಕು ಎಂದು ಆಜ್ಞೆ ಮಾಡಿದರು.

ವಿದ್ಯಾರ್ಥಿಗಳ ಮೇಲೆ ಪ್ರೀತಿ
ಪರ್ಯಾಯ ಅವಧಿಯಲ್ಲಿ ಶ್ರೀಪಾದರು ಮಲಗುವ ಸಂದರ್ಭದಲ್ಲಿ ಮೂರು ಮಂದಿ ಬಾಲಕರು ಕನಕಮಂಟಪದಲ್ಲಿ ಓಡಾಡುತ್ತಿರುವುದನ್ನು ಕಂಡು ತನ್ನ ಬಳಿ ಕರೆಸಿಕೊಂಡು ಏನು ವಿಷಯ ಎಂದು ಪ್ರೀತಿಯಿಂದ ಕೇಳಿದರು. ಆ ಸಂದರ್ಭ ಸರಕಾರಿ ವಿದ್ಯಾರ್ಥಿಗಳ ಹಾಸ್ಟೆಲ್‌ ವಾರ್ಡನ್‌ ಜತೆ ಜಗಳ ಮಾಡಿ ಬಂದಿರುವುದಾಗಿ ಹೇಳಿದರು. ಅಂದು ಸ್ವಾಮೀಜಿ ಮಕ್ಕಳನ್ನು ತನ್ನ ಕೋಣೆಯಲ್ಲಿ ಮಲಗಿಸಿಕೊಂಡು, ಹಾಸ್ಟೆಲ್‌ ವಾರ್ಡನ್‌ ಕರೆಸಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಬಾರದು ಹಾಗೂ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಾಣಿಗಳಿಗೆ ಆಹಾರ ನೀಡುವ ಪರಿಪಾಠ
ಶ್ರೀಪಾದರು ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡದೆ ಫ‌ಲಾಹಾರ ಸೇವಿಸುತ್ತಿರಲಿಲ್ಲ. ಪೂಜೆಯ ಬಳಿಕ ಗೋವುಗಳಿಗೆ ಆಹಾರ ನೀಡುತ್ತಿದ್ದರು. ಅವರ ಪರ್ಯಾಯ ಅವಧಿಯಲ್ಲಿ ಮಧ್ವ ಸರೋವರದಲ್ಲಿ ನಿತ್ಯ 100ರಿಂದ 200 ಪಾರಿವಾಳಗಳು ಮುಂಜಾನೆ ಬರುತ್ತಿದ್ದವು. ಶ್ರೀಗಳು ಅವುಗಳಿಗೆ ತಪ್ಪದೇ ಧಾನ್ಯಗಳನ್ನು ಹಾಕುತ್ತಿದ್ದರು. ಒಮ್ಮೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೂ ಶಿಷ್ಯರಿಗೆ ಪಾರಿವಾಳಗಳಿಗೆ ಆಹಾರ ಹಾಕುವಂತೆ ಹೇಳಿದ್ದರು.

ಎಸಿ, ಫ್ಯಾನ್‌ ಕಾಣದ ಚಿಕ್ಕ ಕೋಣೆ
ಪೇಜಾವರ ಶ್ರೀಪಾದರ ಕೋಣೆ ಅವರು ನಡೆಸುತ್ತಿರುವ ಸನ್ಯಾಸ ಜೀವನದ ಸರಳತೆಯನ್ನು ಎತ್ತಿ ತೋರುತ್ತದೆ. ಪುಟ್ಟ ಕೋಣೆಯಲ್ಲಿ ಒಂದು ಮರದ ಮಂಚ. ಅದಕ್ಕೆ ಎಸಿ ಆಗಲಿ ಫ್ಯಾನ್‌ ವ್ಯವಸ್ಥೆ ಇಲ್ಲ. ಕೇವಲ ಅವರನ್ನು ನೋಡಲು ಬರುವವರಿಗಾಗಿ ಒಂದು ಚಿಕ್ಕ ವಾಲ್‌ ಫ್ಯಾನ್‌ ಹಾಕಿದ್ದಾರೆ. ಇದೇ ಮಂಚ ಪರ್ಯಾಯ ಕಾಲದಲ್ಲಿ ಬಡಗುಮಾಳಿಗೆಗೆ ಸ್ಥಳಾಂತರಗೊಳ್ಳುತ್ತಿತ್ತು. ಕೋಣೆ ಪ್ರವೇಶಿಸಿದ ಭಕ್ತರಿಗೆ ಶಾಂತಿ, ಸಮಾಧಾನದ ಅನುಭವ ಉಂಟಾಗುತ್ತದೆ.

Advertisement

ಸೊಳ್ಳೆ ಸಾಯಿಸುವಂತಿಲ್ಲ!
ಶ್ರೀಗಳು ಮೈಮೇಲೆ ಸೊಳ್ಳೆ ಕುಳಿತರೆ ಎಂದೂ ಹೊಡೆದು ಸಾಯಿಸಿದವರಲ್ಲ. ಒಮ್ಮೆ ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಯೊಬ್ಬರು ಸೊಳ್ಳೆಯನ್ನು ಸಾಯಿಸಲು ಸಿದ್ಧರಾದಾಗ ಶ್ರೀಪಾದರು ಹೊಡೆಯದಂತೆ ತಡೆದರು. ಸೊಳ್ಳೆಗೂ ಒಂದು ಕುಟುಂಬವಿದೆ. ಅದರ ತಂದೆ ತಾಯಿ ಅದಕ್ಕಾಗಿ ಕಾಯುತ್ತದೆ. ಸಾಧ್ಯವಾದರೆ ಅದನ್ನು ಓಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತಿದ್ದರು.

ಹಾಲು, ಅವಲಕ್ಕಿ ಮೇಲೆ ಪ್ರೀತಿ
ಶ್ರೀಕೃಷ್ಣನಿಗೆ ಅವಲಕ್ಕಿ ಪ್ರಿಯವಂತೆ. ಬಡ ಸುಧಾಮ- ಕೃಷ್ಣನ ನಡುವಿನ ಅವಲಕ್ಕಿ ಕಥೆ ಎಲ್ಲರಿಗೂ ಗೊತ್ತಿದೆ. ಹಾಗೆಯೇ ಶ್ರೀಪಾದರಿಗೆ ಅವಲಕ್ಕಿ ಅಂದರೆ ಎಲ್ಲಿಲ್ಲದ ಪ್ರೀತಿ. ಹಾಲು ಅವಲಕ್ಕಿ ನೀಡಿದರೆ ಸಾಕು ಪ್ರೀತಿಯಿಂದ ಸೇವಿಸುತ್ತಿದ್ದರು. ಪೂರ್ವಾಶ್ರಮದ ತಾಯಿ ಮಾಡುವ ಹುಳಿಸಾರನ್ನು ಶ್ರೀಗಳು ನೆನಪಿಸಿಕೊಳ್ಳುತ್ತಿದ್ದರು. ಶಿಷ್ಯರು ಆಹಾರದ ಬಗ್ಗೆ ವಿವರಿಸಿದರೆ ಕೌತುಕದಿಂದ ಕೇಳಿ, ಮರುದಿನ ತಯಾರಿಸುವಂತೆ ಬಾಣಸಿಗರಿಗೆ ಹೇಳುತ್ತಿದ್ದರು. ನಾವೆಲ್ಲ ಎಲ್ಲ ಹಣ್ಣುಗಳನ್ನು ಒಟ್ಟಾಗಿ ಸೇವಿಸಿದರೆ, ಅವರು ಮಾತ್ರ ಹಣ್ಣುಗಳನ್ನು ಸ್ವಲ್ಪವೇ ಪ್ರತ್ಯೇಕವಾಗಿ ಸೇವಿಸುತ್ತಿದ್ದರು. ಪ್ರತಿಯೊಂದು ಹಣ್ಣಿಗೆ ಅದರದ್ದೇ ಆದ ರುಚಿ ಇರುತ್ತದೆ. ಕೆಲವುದಕ್ಕೆ ಕೆಲವು ರುಚಿ ಹೆಚ್ಚು, ಕೆಲವು ರುಚಿ ಕಡಿಮೆ ಕಡಿಮೆ ಇರುತ್ತದೆ. ಒಂದರಲ್ಲಿ ಕಡಿಮೆ ರುಚಿ ಇರುವ ಅಂಶ ಬೇರೆ ಹಣ್ಣುಗಳಲ್ಲಿ ಹೆಚ್ಚಿಗೆ ಇರುತ್ತದೆ ಎಂದು ಶಿಷ್ಯರಿಗೆ ಹಣ್ಣುಗಳ ವಿಶೇಷತೆ ವಿವರಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next