Advertisement

ಟಿವಿ ಇತಿಹಾಸದ ಹೊಸ ಅಧ್ಯಾಯ “ಟ್ರಾನ್ಸ್‌ ಪರೆಂಟ್ ಟಿವಿ”

06:57 PM Jun 23, 2021 | Team Udayavani |

ನೀವು ಸ್ವಿಚ್ ಆಫ್ ಆಗಿರುವ ಟಿವಿ ಮುಂದೆ ಕುಳಿತುಕೊಂಡಿರುವಾಗ, ಅದರೊಳಗೆ ಯಾವೆಲ್ಲಾ ಯಂತ್ರಾಂಶಗಳು ಇವೆ, ಏನೆಲ್ಲಾ ತಂತ್ರಜ್ಞಾನಗಳನ್ನು ಬಳಸಿದ್ದಾರೆ, ಒಂದು ಟಿವಿ ಪೆಟ್ಟಿಗೆಯೊಳಗೆ ಏನೆಲ್ಲಾ ಇದೆ ಎಂಬುವುದು ಹೊರಗಿನಿಂದಲೇ ಕಾಣುವಂತಾದರೆ ಚೆನ್ನಾಗಿರುತ್ತಿತ್ತು ಎಂದು ನೀವು ಒಂದಲ್ಲ ಒಂದು ದಿನ ಆಶಿಸಿರುವಿರಿ. ಈ ತಂತ್ರಜ್ಞಾನ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ. ಆದರೆ ನಿಮ್ಮ ಆಸೆಯನ್ನೂ ಮೀರಿದ ಟಿವಿ ತಂತ್ರಜ್ಞಾನವೊಂದು ನಮ್ಮ ಮುಂದೆ ಬಂದಿದೆ. ಅದುವೇ ಟ್ರಾನ್ಸ್ಪರೆಂಟ್ (ಪಾರದರ್ಶಕ) ಟಿವಿ!

Advertisement

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳು ಸಾಕಷ್ಟು ಜನಪ್ರಿಯವಾಗಿವೆ. ಹೇಗೆ ಕೀಪ್ಯಾಡ್ ಮೊಬೈಲ್ ಫೋನ್ ನಿಂದ ಸ್ಮಾರ್ಟ್‌ಫೋನ್‌ಗಳು ಬಂದವೋ, ಹಾಗೆಯೇ ಚೌಕಾಕಾರದ ಟಿವಿ ಡಬ್ಬಿ ಹೋಗಿ ಸ್ಮಾರ್ಟ್ ಟಿವಿಗಳು ಎಲ್ಲರ ಮನೆಯೊಳಗೂ ಪ್ರವೇಶ ಪಡೆದವು. ಹೊಸ ಟಿವಿ ಕೊಂಡುಕೊಳ್ಳುವುದು ಎಂದಾಗ ತಲೆಗೆ ಬರುವುದೇ ಸ್ಲಿಂ ಆಗಿರುವ ಸ್ಮಾರ್ಟ್ ಟಿವಿಗಳು. ಇದೀಗ ಆ ಸ್ಮಾರ್ಟ್ ಟಿವಿಯೂ ಅಭಿವೃದ್ಧಿ ಕಂಡಂತೆ, ಟ್ರಾನ್ಸ್ಪರೆಂಟ್ ಟಿವಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಮುಂದಿನ ಪೀಳಿಗೆಯ ಎಲ್‌ಇಡಿ ಟಿವಿ ಎಂದೇ ಜನಪ್ರಿಯತೆ ಪಡೆಯುತ್ತಿದೆ.

ಟ್ರಾನ್ಸ್‌ ಪರೆಂಟ್ ಟಿವಿ ಎಂದರೇನು ?

ಹೆಸರೇ ಹೇಳುವಂತೆ ಇದೊಂದು ಪಾರದರ್ಶಕ (ಟ್ರಾನ್ಸ್‌ ಪರೆಂಟ್) ಗಾಜು ಇರುವ ಟಿವಿ ಆಗಿದ್ದು, ಗಾಜಿನಲ್ಲಿಯೇ ಟಿವಿಗೆ ಬೇಕಾದ ಯಂತ್ರಾಂಶಗಳು ಅಡಕವಾಗಿರುತ್ತದೆ. ಆದರೆ ಇದು ನಮ್ಮ ಕಣ್ಣಿಗೆ ಕಾಣುವುದಿಲ್ಲ ಹಾಗೂ ಹೊರಗಿನಿಂದ ಟಿವಿ ಆಫ್ ಇದ್ದರೆ, ನೇರವಾಗಿ ಟಿವಿ ಹಿಂದೆ, ಕೊಠಡಿಯ ಚಿತ್ರಣ ಕಾಣುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಮನೆಯ ಕಿಟಕಿಯ ಕನ್ನಡಿಯಲ್ಲಿಯೇ ಟಿವಿ ಕಂಡಂತೆ. ಅದಲ್ಲದೆ, ಇದು ಕೆಳಗೆ ಬಿದ್ದರೂ ಗಾಜು ಒಡೆದು ಹೋಗುವುದಿಲ್ಲ.

ಇದನ್ನೂ ಓದಿ : ಭಾರತಕ್ಕೆ ಹಸ್ತಾಂತರ ಆದೇಶ: ನೀರವ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬ್ರಿಟನ್ ಹೈಕೋರ್ಟ್

Advertisement

ಟಿವಿ ಸ್ವಿಚ್ ಆಫ್ ಮಾಡಿದಾಗ ನೀವು ಅದರ ಹಿಂದಿನ ಎಲ್ಲವನ್ನೂ ವೀಕ್ಷಿಸಬಹುದು. ಟಿವಿ ಸ್ವಿಚ್ ಆನ್ ಆಗುವವರೆಗೆ ಅವು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತವೆ. ಹಾಗೆಯೇ, ನೀವು ಟಿವಿಯನ್ನು ಆನ್ ಮಾಡಿದಾಗ, ಅದರಲ್ಲಿ ಬರುವ ದೃಶ್ಯಗಳು ಗಾಳಿಯಲ್ಲಿ ತೇಲುವಂತೆ ಕಾಣುತ್ತದೆ. ಇದು ನಿಜವಾಗಿಯೂ ರೋಮಾಂಚನಗೊಳಿಸುತ್ತದೆ. ನೀವು ಹೆಚ್ಚು ಬೆಳಕು ಇರುವ ಕೋಣೆಯಲ್ಲಿ ಕುಳಿತರೂ ದೃಶ್ಯಗಳು ಇನ್ನಷ್ಟು  ಪ್ರಕಾಶಮಾನವಾಗಿ ಕಾಣುತ್ತದೆ.

ಪಾರದರ್ಶಕ ಟಿವಿ ಬ್ರಾಂಡ್‌ಗಳು

ಮೊಟ್ಟಮೊದಲ ಸಾಮೂಹಿಕ-ಉತ್ಪಾದಿತ ಸ್ಮಾರ್ಟ್ ಟಿವಿಯನ್ನು ಮಾರುಕಟ್ಟೆಗೆ ತಂದ ಶಿಯೋಮಿ ಕಂಪನಿಯು, ಅದರ ಟ್ರಾನ್ಸ್‌ಪರೆಂಟ್ ಆವೃತ್ತಿಯಾದ ಎಂಐ ಟಿವಿ ಎಲ್‌ಯುಎಕ್ಸ್ ಅನ್ನು ಹೊರತಂದಿದೆ. ಈ ಸ್ಮಾರ್ಟ್ ಟಿವಿಯನ್ನು ಆಗಸ್ಟ್ 2020 ರಲ್ಲಿ ಮಾರುಕಟ್ಟೆಗೆ ಬಿಡಲಾಯಿತು. ಇದು ಮೀಡಿಯಾ ಟೆಕ್ 9850 ಕಸ್ಟಮ್-ನಿರ್ಮಿತ ಟಿವಿ ಚಿಪ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದರೊಳಗೆ, 20 ಆಪ್ಟಿಮೈಸೇಶನ್ ಆಲ್ಗೋರಿದಮ್‌ಗಳು ಮತ್ತು ಮೀಸಲಾದ ಆಪ್ಟಿಮೈಸೇಶನ್ ಇವೆ. 120 ಹರ್ಟ್ಜ್ ಡಿಸ್ಪ್ಲೇ ರಿಫ್ರೆಶ್ ರೇಟ್ ಜೊತೆಗೆ, ಈ ಸ್ಮಾರ್ಟ್ ಟಿವಿ ಉತ್ತಮ ಆಡಿಯೊ ಗುಣಮಟ್ಟವನ್ನೂ ಹೊಂದಿದೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯವು $7723 ರಿಂದ ಪ್ರಾರಂಭವಾಗುತ್ತದೆ. ಅದು ಅಂದಾಜು 5,72,176 ರೂಪಾಯಿಯ ಹತ್ತಿರವಿದೆ. ಇದುವರೆಗೆ, ಇದುವೇ ಅತ್ಯಂತ ಕಡಿಮೆ ಬೆಲೆ ಬಾಳುವ ಟ್ರಾನ್ಸ್‌ಪರೆಂಟ್ ಟಿವಿ ಆಗಿದೆ.

ಇದರ ನಂತರ, ಎಲ್‌ಜಿ ಸಹ ತನ್ನ ಸ್ಮಾರ್ಟ್ ಟ್ರಾನ್ಸ್‌ಪರೆಂಟ್ ಟಿವಿ ಹೆಸರಿನ ಎಲ್‌ಜಿ ಟ್ರಾನ್ಸ್‌ಪರೆಂಟ್ ಒಎಲ್‌ಇಡಿ ಸಿಗ್ನೇಜ್ 55” ಇಂಚಿನ ಡಿಸ್ಪ್ಲೇ ಹೊಂದಿರುವ ಟಿವಿಯನ್ನು ಹೊರತಂದಿತು. ಈ ಟ್ರಾನ್ಸ್‌ಪರೆಂಟ್ ಟಿವಿಯ ಬೆಲೆ $25,000 ದಿಂದ ಪ್ರಾರಂಭವಾಗುತ್ತದೆ. ಶಿಯೋಮಿಯ ಟ್ರಾನ್ಸ್‌ಪರೆಂಟ್ ಟಿವಿಗಿಂತ ಹೆಚ್ಚು ಬೆಲೆ ಇದ್ದರೂ, ಇದರಲ್ಲಿ ಹಲವಾರು ಸ್ಮಾರ್ಟ್ ವೈಶಿಷ್ಟ್ಯಗಳು ಇವೆ ಮತ್ತು ಹೊಸ ತಂತ್ರಜ್ಞಾನಗಳನ್ನೂ ಅಳವಡಿಸಲಾಗಿದೆ ಎಂದು ಎಲ್‌ಜಿ ಹೇಳಿಕೊಂಡಿದೆ.

ಆದ್ದರಿಂದ, ಈ ಟ್ರಾನ್ಸ್‌ಪರೆಂಟ್ ಟಿವಿಗಳನ್ನು ಮುಂದಿನ ಪೀಳಿಗೆಯ ಟಿವಿ ಮತ್ತು ಟಿವಿ ಉದ್ಯಮದ ಭವಿಷ್ಯ ಎಂದೇ ಹೇಳಬಹುದು. ಹೊಸ ಯಂತ್ರಾಂಶಗಳು ಇರುವುದರಿಂದ, ಇದು ಸ್ವಲ್ಪ ದುಬಾರಿಯಾಗಿ ಕಂಡರೂ, ಮುಂದಿನ ದಿನಗಳಲ್ಲಿ ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ಬರಬಹುದು ಎಂದು ನಿರೀಕ್ಷಿಸಬಹುದು.

ಟ್ರಾನ್ಸ್‌ಪರೆಂಟ್ ಟಿವಿಗಳು ಎರಡು ಪ್ರಮುಖ ಯಂತ್ರಾಂಶಗಳಿಂದ ರಚಿಸಲ್ಪಡುತ್ತವೆ. ಒಂದು ಎಲ್‌ಸಿಡಿ ಮತ್ತೊಂದು ಒಎಲ್‌ಇಡಿ. ಇವೆರಡೂ ಪ್ರತ್ಯೇಕವಾಗಿ, ಎರಡು ರೀತಿಯ ಟ್ರಾನ್ಸ್ಪರೆಂಟ್ ಟಿವಿಗಳ ಉತ್ಪಾದನೆಗೆ ಸಹಕಾರಿಯಾಗಿವೆ.

ಟ್ರಾನ್ಸ್ಪರೆಂಟ್ ಎಲ್‌ಸಿಡಿ ಸ್ಕ್ರೀನ್ (ಪರದೆ) ಹೇಗೆ ಕಾರ್ಯನಿರ್ವಹಿಸುತ್ತವೆ?

ಎಲ್ಲಾ ಎಲ್‌ಸಿಡಿ ಪರದೆಗಳು ಟ್ರಾನ್ಸ್‌ಪರೆಂಟ್ ಆಗಿಯೇ ಇರುತ್ತದೆ. ಅಂದರೆ, ಈಗಿನ ಸ್ಮಾರ್ಟ್ ಟಿವಿಯಲ್ಲಿರುವ ಸ್ಕ್ರೀನ್ ಅನ್ನು ಅದರ ಬಾಡಿಯಿಂದ ಬೇರ್ಪಡಿಸಿದರೆ ಅದು ಟ್ರಾನ್ಸ್ಪರೆಂಟ್ ಆಗಿಯೇ ಇರುತ್ತದೆ. ಆದರೆ, ಆನ್ ಮಾಡಿದಾಗ ಏನೂ ಡಿಸ್ಪ್ಲೇ ಕಾಣುವುದಿಲ್ಲ. ಆದರೆ, ಈ ಟ್ರಾನ್ಸ್‌ಪರೆಂಟ್ ಟಿವಿಯ ಸ್ಕ್ರೀನ್ ಡಿಸ್ಪ್ಲೇ ಕಾಣುತ್ತದೆ. ಈಗಿರುವ ಎಲ್‌ಸಿಡಿ ಸ್ಕ್ರೀನ್‌ಗಳು ಟ್ರಾನ್ಸ್‌ಪರೆಂಟ್ ಆಗಿದ್ದರೂ ದೃಶ್ಯಗಳು ಕಾಣಲ್ಲ, ಏಕೆಂದರೆ ಅವು ತಮ್ಮದೇ ಆದ ಬೆಳಕನ್ನು ಉತ್ಪಾದಿಸುವುದಿಲ್ಲ.

ಆದರೆ ಈಗ ತಂತ್ರಜ್ಞಾನದಲ್ಲಿ ಆಗಿರುವ ಸುಧಾರಣೆಯೊಂದಿಗೆ, ಎಲ್‌ಸಿಡಿ ಸ್ಕ್ರೀನ್ ತಯಾರಕರು ಈಗ ಹೈಬ್ರಿಡ್ ಡಿಸ್ಪ್ಲೇ ವ್ಯವಸ್ಥೆಗಳನ್ನು ರಚಿಸಲು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅಂದರೆ, ಎಲ್‌ಸಿಡಿ ಸ್ಕ್ರೀನ್‌ಗಳಿಗೆ ಶಕ್ತಿ ತುಂಬಲು ಟ್ರಾನ್ಸ್‌ಪರೆಂಟ್ ಎಲ್‌ಇಡಿಗಳನ್ನು ಬಳಸಲಾಗುತ್ತಿದೆ. ಎಲ್‌ಸಿಡಿ ಸ್ಕ್ರೀನ್‌ಗಳಲ್ಲಿ ಟ್ರಾನ್ಸ್‌ಪರೆಂಟ್ ಒಎಲ್‌ಇಡಿ ಬ್ಯಾಕ್‌ಲೈಟ್ ಅಳವಡಿಸಿ ಆಗುವ ಸಮ್ಮಿಲನದಿಂದ ಇತರ ಬೆಳಕಿನ ಮೂಲಗಳ ಅಗತ್ಯತೆಯನ್ನು ನಿವಾರಿಸುತ್ತದೆ.

ಟ್ರಾನ್ಸ್ಪರೆಂಟ್ ಒಎಲ್‌ಇಡಿ ಪರದೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಒಎಲ್‌ಇಡಿ ಡಿಸ್ಪ್ಲೇಯು ಎರಡು ಗಾಜಿನ ಸ್ಕ್ರೀನ್‌ಗಳ ನಡುವೆ ಇರಲಿದ್ದು, ಮಧ್ಯದಲ್ಲಿ ಒಂದೆರಡು ಟ್ರಾನ್ಸ್‌ಪರೆಂಟ್ ಪ್ಲಾಸ್ಟಿಕ್ ಲೇಯರ್‌ಗಳನ್ನು ಹೊಂದಿದೆ. ಪ್ರದರ್ಶನಗಳನ್ನು ಎರಡು ಪದರಗಳ ಗಾಜಿನ ನಡುವೆ ಸ್ಯಾಂಡ್‌ವಿಚ್ ಮಾಡಿದ ಪಾರದರ್ಶಕ ಪ್ಲಾಸ್ಟಿಕ್‌ನ ಒಂದೆರಡು ಪದರಗಳಿಂದ ಮಾಡಲಾಗಿದ್ದು, ವಾಹಕ ಪದರದಲ್ಲಿ ಚಲಿಸುವ ಮೂಲಕ ಹೊರಸೂಸುವ ಪದರದಲ್ಲಿ ಬೆಳಕನ್ನು ಉತ್ಪಾದಿಸುತ್ತವೆ.

ಎಲ್‌ಸಿಡಿ ಡಿಸ್ಪ್ಲೇಯಂತೆ, ಒಎಲ್‌ಇಡಿ ಡಿಸ್ಪ್ಲೇಗಳು ಸ್ವಾಭಾವಿಕವಾಗಿ ಟ್ರಾನ್ಸ್ಪರೆಂಟ್ ಅಲ್ಲದಿದ್ದರೂ, ಒಎಲ್‌ಇಡಿಗೆ ಹೆಚ್ಚುವರಿ ಬೆಳಕು ಅಗತ್ಯ ಇಲ್ಲದಿರುವುದರಿಂದ ಟಿವಿ ತಯಾರಕರು ಎಲ್‌ಸಿಡಿಗಿಂತ ಒಎಲ್‌ಇಡಿಯನ್ನೇ ಜಾಸ್ತಿ ಬೆಂಬಲಿಸುತ್ತಾರೆ. ಒಎಲ್‌ಇಡಿಗಳು ತಮ್ಮದೇ ಆದ ಬೆಳಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ.

ನೀವು ಈಗ ಪಾರದರ್ಶಕ ಟಿವಿ ಖರೀದಿಸಬಹುದೇ?

ಶಿಯೋಮಿ ತನ್ನ ಟ್ರಾನ್ಸ್ಪರೆಂಟ್ ಟಿವಿಗಳನ್ನು ಆಗಸ್ಟ್ ೨೦೨೦ ರಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿತು ಮತ್ತು ಅಂದಿನಿಂದ ಖರೀದಿಗೆ ಲಭ್ಯವಿದೆ. ಆದರೆ ಅವು ದುಬಾರಿಯಾಗಿದೆ. ಅತ್ಯಂತ ಕಡಿಮೆ ಮೊತ್ತ ಎಂದರೆ ಅದು 5 ಲಕ್ಷ ರೂಪಾಯಿ!

ಇಲ್ಲಿ ಏಳುವ ಪ್ರಶ್ನೆಯೆಂದರೆ ಇದರ ಅಗತ್ಯತೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಟಿವಿಯಿಟ್ಟು ಏನು ಪ್ರಯೋಜನ? ನಮ್ಮಲ್ಲೂ ಒಂದು ಇರಲಿ ಎಂದು ಶೋಕಿಗೆ ಇಡಬಹುದಷ್ಟೇ ಬಿಟ್ಟರೆ ಸ್ಮಾರ್ಟ್ ಟಿವಿಗಿಂತ ಭಿನ್ನವಾದ ಯಾವುದೇ ವೈಶಿಷ್ಟ್ಯಗಳು ಇದರಲ್ಲಿಲ್ಲ. ಮುಂದಿನ ದಿನಗಳಲ್ಲಿ ಹೊಸ ಹೊಸ ವೈಶಿಷ್ಟ್ಯಗಳು ಬಂದರೆ, ಮಾರುಕಟ್ಟೆಯಲ್ಲಿ ಟ್ರಾನ್ಸ್ಪರೆಂಟ್ ಟಿವಿಗಳಿಗೆ ಬೇಡಿಕೆ ಹೆಚ್ಚಾದರೂ ಅಚ್ಚರಿಯಿಲ್ಲ.

– ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಕಾಂಗ್ರೆಸ್ಸಿಗರು ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸುತ್ತಿದ್ದಾರೆ : ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next