ಬೆಂಗಳೂರು: ಯುವತಿಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಪರ್ಸ್‌ನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಿ ಆಟೋಚಾಲಕ ಶ್ರೀಕಂಠಯ್ಯ ಪ್ರಾಮಾಣಿಕತೆ ಮೆರೆದಿದ್ದಾರೆ.
ಶ್ರೀಕಂಠಯ್ಯ ಅವರ ಪ್ರಾಮಾಣಿಕತೆಯನ್ನು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಅಲ್ಲದೆ, ಕಳೆದುಹೋಗಿದ್ದ ಪರ್ಸ್ ಹಿಂತಿರುಗಿಸಿದ್ದಕ್ಕೆ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿನಿ ಭಕ್ತಿಮಂತ್ರಿ ಅವರು ಶ್ರೀಕಂಠಯ್ಯ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಶನಿವಾರ ಸಂಜೆ ಮಹದೇವಪುರದ ಹತ್ತಿರದ ಮಾಲ್ನ ಬಳಿ ಭಕ್ತಿಮಂತ್ರಿ ಅವರು ಶ್ರೀಕಂಠಯ್ಯ ಅವರ ಆಟೋ ಹತ್ತಿ ಪ್ರಯಾಣಿಸಿ ಆಟೋ ಇಳಿದುಹೋಗಿದ್ದರು. ಅವರು ಆಟೋ ಇಳಿದು ಹೋದ ಬಳಿಕ ಶ್ರೀಕಂಠಯ್ಯ ಕೂಡ ಹಾಗೆಯೇ ಆಟೋ ಓಡಿಸಿದ್ದಾರೆ. ಈ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಸೀಟ್‌ನಲ್ಲಿಯೇ ಪರ್ಸ್ ಇರುವುದನ್ನು ನೋಡಿ, ಆ ಪರ್ಸ್‌ನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಿದ್ದರು. ಬಳಿಕ ಪೊಲೀಸರು ಪರ್ಸ್‌ನಲ್ಲಿದ್ದ ಮೊಬೈಲ್ ನಂಬರ್ ಪಡೆದು, ಭಕ್ತಿಮಂತ್ರಿ ಅವರಿಗೆ ಕರೆ ಮಾಹಿತಿ ನೀಡಿ ಕರೆಸಿದ್ದಾರೆ. ಬಳಿಕ ಶ್ರೀಕಂಠಯ್ಯ ಅವರಿಂದಲೇ ಪರ್ಸ್ ವಾಪಸ್ ಕೊಡಿಸಿದ್ದಾರೆ.
ಪ್ರಯಾಣಿಕರ ಪರ್ಸ್ ವಾಪಸ್ ತಂದುಕೊಟ್ಟು ಪ್ರಾಮಾಣಿಕತೆ ಮೆರೆದ ಶ್ರೀಕಂಠಯ್ಯ ಅವರ ಕಾರ್ಯಯನ್ನು ಪೊಲೀಸರು ಮುಕ್ತಕಂಠದಿಂದ ಶ್ಲಾಘಿಸಿದ್ದು, ಅವರ ಈ ಕಾರ್ಯ ಉಳಿದವರಿಗೂ ಮಾದರಿಯಾಗುವಂತಹದ್ದು ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಶ್ರೀಕಂಠಯ್ಯ, ಸುಮಾರು 25 ವರ್ಷಗಳಿಂದ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಬೇರೆಯವರ ವಸ್ತು ನಮ್ಮದಲ್ಲ ಎಂಬ ಧ್ಯೇಯ ಪಾಲಿಸುತ್ತಿದ್ದು, ಪರ್ಸ್ ಕಂಡ ಕೂಡಲೇ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಿದೆ. ವಿದ್ಯಾರ್ಥಿನಿಗೆ ಪರ್ಸ್ ವಾಪಸ್ ಕೊಟ್ಟ ತೃಪ್ತಿಯಿದೆ ಎಂದರು.
ಕಳೆದ ಐದು ವರ್ಷಗಳ ಹಿಂದೆ ನಾನು ಆಟೋ ಓಡಿಸುವ ಮಾರ್ಗದಲ್ಲಿಯೇ ಚೆಕ್‌ಬುಕ್ ಪುಸ್ತಕವೊಂದು ಬಿದ್ದಿತ್ತು. ಅದನ್ನು ಕೂಡ ಪೊಲೀಸರಿಗೆ ತಲುಪಿಸಿದ್ದೆ. ಈ ಸಂಧರ್ಭದಲ್ಲಿ ಪ್ರಶಂಸನಾ ಪತ್ರ ನೀಡಿದ್ದರು ಎಂದು ನೆನಪು ಹಂಚಿಕೊಂಡರು. ವಿದ್ಯಾರ್ಥಿನಿ ಭಕ್ತಿಮಂತ್ರಿ ಮಾತನಾಡಿ” ಪರ್ಸ್ ವಾಪಸ್ ನೀಡಿದ ಶ್ರೀಕಂಠಯ್ಯ ಅವರ ಗುಣದೊಡ್ಡದು. ಅವರಿಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ. ಪರ್ಸ್‌ನಲ್ಲಿ ಡೆಬಿಟ್ ಕಾರ್ಡ್‌ಗಳು ಹಾಗೂ ಗುರುತಿನ ಚೀಟಿಗಳು ಇದ್ದವು ವಾಪಸ್ ಸಿಕ್ಕಿದ್ದು ಸಂತಸವಾಯಿತು” ಎಂದರು.