Advertisement

ಸಾಮಾನ್ಯ ಸಭೆಯಲ್ಲಿ ಶವಪರೀಕ್ಷೆ ಜಟಾಪಟಿ

07:24 AM Jan 29, 2019 | Team Udayavani |

ಮಂಡ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ಶವ ಪರೀಕ್ಷೆಗೆ ವಿನಾಕಾರಣ ವಿಳಂಬ ಮಾಡುವುದು, ಕುಟುಂಬದವರನ್ನು ದಿನಗಟ್ಟಲೆ ಕಾಯಿಸುವುದು ಅಮಾನವೀಯತೆ. ನಿಗದಿತ ಸಮಯಕ್ಕೆ ಶವ ಪರೀಕ್ಷೆ ನಡೆಸುವುದು ವೈದ್ಯರ ಜವಾಬ್ದಾರಿ. ಕರ್ತವ್ಯ ನಿರ್ವಹಣೆಗೆ ನಿರ್ಲಕ್ಷ್ಯ ತೋರಿದರೆ ಆ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.

Advertisement

ಇದು ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಜ.21ರ ಮುಂದುವರಿದ ಸಾಮಾನ್ಯ ಸಭೆಯಲ್ಲಿ ವೈದ್ಯರಿಗೆ ಕೇಳಿಬಂದ ಎಚ್ಚರಿಕೆ ನುಡಿ. ಮದ್ದೂರು ತಾಲೂಕು ತೊಪ್ಪನಹಳ್ಳಿ ದೇವಸ್ಥಾನದ ಕಾವಲುಗಾರ ಕೊಲೆಯಾದಾಗ ಶವಪರೀಕ್ಷೆ ನಡೆಸಲು ತಾಲೂಕು ಆಸ್ಪತ್ರೆ ವೈದ್ಯರು ಜಗಳವಾಡಿದ ವಿಷಯ ಪ್ರಸ್ತಾಪಗೊಂಡು ಅಂತಿಮವಾಗಿ ಶವಪರೀಕ್ಷೆಗೆ ನಿರ್ಲಕ್ಷ್ಯ ತೋರುವವರನ್ನೇ ಜವಾಬ್ದಾರಿ ಮಾಡಲು ತೀರ್ಮಾನಿಸಲಾಯಿತು.

ಶವ ಪರೀಕ್ಷೆ ಕದನ: ತೊಪ್ಪನಹಳ್ಳಿ ದೇವಸ್ಥಾನದ ಹುಂಡಿ ಹಣ ಲೂಟಿ ಮಾಡಿದ ದರೋಡೆಕೋರರಿಂದ ಕೊಲೆಯಾದ ಬಸವರಾಜು ಶವವನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ತಂದು ಪೊಲೀಸರು ಮೆಮೋ ನೀಡಿದರೂ ಕರ್ತವ್ಯನಿರತ ವೈದ್ಯರೇ ಶವ ಪರೀಕ್ಷೆ ನಡೆಸುವ ವಿಚಾರವಾಗಿ ಕದನಕ್ಕಿಳಿದರು. ಕೊನೆಗೆ ತಾಲೂಕು ಆರೋಗ್ಯ ಅಧಿಕಾರಿಯೇ ಶವಪರೀಕ್ಷೆ ನಡೆಸು ವಂತಾಯಿತು. ಕರ್ತವ್ಯಲೋಪವೆಸಗಿದ ವೈದ್ಯರ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೈಗೊಂಡ ಕ್ರಮವೇನು ಎಂದು ಸದಸ್ಯ ಬೋರಯ್ಯ ಪ್ರಶ್ನಿಸಿದರು.

ತಪ್ಪು ಮಾಹಿತಿ ಬೇಡ: ಪೊಲೀಸ್‌ ವಿಚಾರಣಾ ಪ್ರಕ್ರಿಯೆ ಮುಂದು ವರಿದಿದ್ದರಿಂದ ಶವಪರೀಕ್ಷೆ ನಡೆಸಲು ವಿಳಂಬ ವಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಉತ್ತರಿಸಿದರು. ಈ ಮಾತು ಕೇಳಿ ಎದ್ದು ನಿಂತ ಸದಸ್ಯ ದೇವರಾಜು, ಪೊಲೀಸರು ವಿಚಾರಣೆ ಪ್ರಕ್ರಿಯೆ ಮುಗಿಸಿಕೊಂಡೇ ಆಸ್ಪತ್ರೆಗೆ ಶವವನ್ನು ತಂದಿರುತ್ತಾರೆ. ಅವರು ಮೆಮೋ ಕೊಟ್ಟ ಕೂಡಲೇ ಶವಪರೀಕ್ಷೆ ನಡೆಸುವುದು ವೈದ್ಯರ ಕರ್ತವ್ಯ.

ಅದರಿಂದ ವಿಮುಖರಾದರೆ ಕರ್ತವ್ಯ ಲೋಪವಾಗುತ್ತದೆ. ವೈದ್ಯರು ತಪ್ಪನ್ನು ಮುಂದಿಟ್ಟು ಕೊಂಡು ಇಲ್ಲದ ಕಾರಣ ಹೇಳಿ ತಪ್ಪು ಮಾಹಿತಿ ನೀಡಬಾರದು ಎಂದು ಹೇಳಿದರು. ಇದು ಮದ್ದೂರು ಆಸ್ಪತ್ರೆ ಒಂದೇ ಅಲ್ಲ, ಎಲ್ಲಾ ಆಸ್ಪತ್ರೆಗಳಲ್ಲೂ ಕರ್ತವ್ಯನಿರತ ವೈದ್ಯರು ಶವ ಪರೀಕ್ಷೆ ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯ ಎ.ರಾಜೀವ್‌ ಹೇಳಿದರು.

Advertisement

ವೈದ್ಯರ ಕೆಲಸ: ಕೊನೆಗೆ ಶವ ಪರೀಕ್ಷೆ ನಡೆಸುವುದು ಕರ್ತವ್ಯ ದಲ್ಲಿರುವ ವೈದ್ಯರ ಕೆಲಸ. ಯಾವುದೇ ಸಂದರ್ಭದಲ್ಲಿ ಬಂದರೂ ಕರ್ತವ್ಯದಲ್ಲಿರುವ ವೈದ್ಯರೇ ಅದನ್ನು ಪೂರ್ಣಗೊಳಿಸಿ ಹೋಗಬೇಕು. ಇಲ್ಲವಾದಲ್ಲಿ ಅವರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಯಾಲಕ್ಕೀಗೌಡ ತಿಳಿಸಿದರು.

ಕಟ್ಟಡವಿದ್ದರೂ ಇಲ್ಲವೆಂದ ಡಿಎಚ್ಒ: ನನ್ನ ಕ್ಷೇತ್ರದ ವ್ಯಾಪ್ತಿಗೆ 9 ಊರುಗಳು ಬರುತ್ತವೆ. ಕ್ಷೇತ್ರದ ಮುಂಡುಗದೊರೆಯಲ್ಲಿ ಆಸ್ಪತ್ರೆಯೂ ಇದೆ. ಎಎನ್‌ಎಂ ವಸತಿಗೃಹವೂ ಇದೆ. ಆದರೆ, ಒಬ್ಬ ಡಾಕ್ಟರ್‌, ಒಬ್ಬ ನರ್ಸ್‌ ಕೂಡ ಇಲ್ಲ. ಹಾಗಾದರೆ ಆ ಊರಿನ ಜನ ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂದು ಕೆ.ಶೆಟ್ಟಹಳ್ಳಿ ಜಿ.ಪಂ ಸದಸ್ಯ ಮರಿಯಪ್ಪ ಪ್ರಶ್ನಿಸಿದರು.

ಮುಂಡುಗದೊರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಎಎನ್‌ಎಂ ಕ್ಲಿನಿಕ್‌, ವಸತಿಗೃಹ ಇರುವ ವಿಷಯವಾಗಿ ಗೊಂದಲಕ್ಕೊಳಗಾದ ಡಿಎಚ್ಒ, ಆ ಊರಿನಲ್ಲಿ ಆಸ್ಪತ್ರೆ ಕಟ್ಟಡವೇ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಇದರಿಂದ ಗರಂ ಆದ ಸದಸ್ಯ ಮರಿಯಪ್ಪ, ನಾನು ಅದೇ ಊರಿನವನು ಕಣ್ರೀ. ಅಲ್ಲಿ ಆಸ್ಪತ್ರೆನೂ ಇದೆ. ಎಎನ್‌ಎಂ ವಸತಿಗೃಹವೂ ಇದೆ.

ಅಲ್ಲಿ ಆಸ್ಪತ್ರೆ ಕಟ್ಟಡ ಇರೋ ವಿಚಾರ ನಿಮಗೇ ಗೊತ್ತಿಲ್ಲ ಅಂದ್ರೆ ಹೆಂಗ್ರಿ ಎಂದು ಹೇಳಿದಾಗ ತಾಲೂಕು ಆರೋಗ್ಯಾಧಿಕಾರಿ ಕೇಳಿ ಹೇಳುತ್ತೇನೆ ಎಂದು ಡಿಎಚ್ಒ ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಹೇಳುವುದಾದರೆ ನೀವ್ಯಾಕೆ ಸಭೆಗೆ ಬಂದಿರಿ. ಸಭೆಗೆ ಬರುವಾಗ ಎಲ್ಲಾ ಮಾಹಿತಿ ತೆಗೆದುಕೊಂಡು ಬರಬೇಕು ತಾನೇ. ಇಲ್ಲವಾದರೆ ತಾಲೂಕು ಅಧಿಕಾರಿಗಳನ್ನೂ ಸಭೆಗೆ ಕರೆಸುವಂತೆ ಸದಸ್ಯರು ಒತ್ತಾಯಿಸಿದರು.

ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನು ಸಾಮಾನ್ಯ ಸಭೆಗೆ ಕರೆಸುವುದಿಲ್ಲ. ಅದಕ್ಕೆ ಸ್ಥಳಾವಕಾಶವೂ ಇಲ್ಲ ಎಂದು ಸಿಇಒ ಹೇಳಿದಾಗ, ಹಾಗಾದರೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿ ಎಂದು ಸದಸ್ಯರು ಹೇಳಿದರು. ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next