Advertisement

ಕರಾವಳಿಯಲ್ಲಿ ಹಿಗ್ಗಿದ ಆಟೋಮೊಬೈಲ್‌ ವಹಿವಾಟು: ಒಂದೇ ವರ್ಷದಲ್ಲಿ 90 ಸಾವಿರ ವಾಹನ ನೋಂದಣಿ

12:56 AM Jan 01, 2023 | Team Udayavani |

ಮಂಗಳೂರು : ಕರಾವಳಿ ಭಾಗದಲ್ಲಿ ಎರಡು ವರ್ಷಗಳ ಬಳಿಕ ವಾಹನ ಖರೀದಿಯಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ. ಎರಡು ವರ್ಷಗಳ ಹಿಂದೆ ಕೋವಿಡ್‌ನಿಂದಾಗಿ ಆಟೋಮೊಬೈಲ್‌ ಕ್ಷೇತ್ರಕ್ಕೆ ಪೆಟ್ಟು ಬಿದ್ದಿತ್ತು. ಪರಿಣಾಮವಾಗಿ ಜನರು ವಾಹನ ಖರೀದಿಗೆ ಅಷ್ಟೊಂದು ಉತ್ಸಾಹ ತೋರುತ್ತಿರಲಿಲ್ಲ. ಈಗ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 90 ಸಾವಿರಕ್ಕೂ ಅಧಿಕ ವಾಹನಗಳು ನೋಂದಣಿಯಾಗಿವೆ.

Advertisement

ಮಂಗಳೂರು ನಗರ ಆರ್‌ಟಿಒ ವ್ಯಾಪ್ತಿಯಲ್ಲಿ 2019ರಲ್ಲಿ 37,635 ವಾಹನಗಳು ನೋಂದಣಿ ಯಾಗಿದ್ದವು. 2020ರಲ್ಲಿ 31,499 ವಾಹನ ನೋಂದಣಿಯಾಗಿದ್ದು, 2021ರಲ್ಲಿ 35,417 ಮತ್ತು 2022ರಲ್ಲಿ 43,258 ಆಗಿವೆ. ಇದು ವಾಹನ ಖರೀದಿಯಲ್ಲಿ ಏರಿಕೆಯನ್ನು ಸೂಚಿಸುತ್ತಿದೆ. ಪುತ್ತೂರು ತಾಲೂಕಿನಲ್ಲಿ 2019ರಲ್ಲಿ 11,675, 2020ರಲ್ಲಿ 9,928, 2021ರಲ್ಲಿ 10,830 ಮತ್ತು 2022ರಲ್ಲಿ 13,084 ವಾಹನ ನೋಂದಣಿಯಾಗಿವೆ. ಬಂಟ್ವಾಳ ತಾಲೂಕಿನಲ್ಲಿ 2019ರಲ್ಲಿ 9,264, 2020ರಲ್ಲಿ 6,504, 2021ರಲ್ಲಿ 6,559 ಮತ್ತು 2022ರಲ್ಲಿ 6,809 ವಾಹನ ನೋಂದಣಿಯಾಗಿವೆ.

ಉಡುಪಿಯಲ್ಲಿ ನೋಡಿದರೆ 2019ರಲ್ಲಿ 27,230, 2020ರಲ್ಲಿ 23,157, 2021ರಲ್ಲಿ 25,362 ಮತ್ತು 2022ರಲ್ಲಿ 31,166 ವಾಹನ ನೋಂದಣಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉಭಯ ಜಿಲ್ಲೆಗಳಲ್ಲಿ 16 ಸಾವಿರ ಹೆಚ್ಚಿನ ವಾಹನಗಳ ನೊಂದಣಿಯಾಗಿದೆ.

ಕರಾವಳಿ ಭಾಗದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್‌ ವಾಹನ ಗಳತ್ತಲೂ ಸಾರ್ವಜನಿಕರು ಆಕರ್ಷಿತರಾಗುತ್ತಿದ್ದಾರೆ. ತೈಲ ಬೆಲೆ ಗಗನಕ್ಕೇರುತ್ತಿರುವುದು ಹಾಗೂ ಸರಕಾರದ ಸಬ್ಸಿಡಿಯ ಲಾಭ ಪಡೆಯುವ ಉದ್ದೇಶದಿಂದ ಇಂಧನವಿಲ್ಲದ ಪರಿಸರಸ್ನೇಹಿ ವಾಹನಗಳನ್ನು ಜನರು ಖರೀದಿಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 8,690 ಎಲೆಕ್ಟ್ರಿಕ್‌ ವಾಹನಗಳು ನೋಂದಣಿಯಾಗಿವೆ. ಕೆಲವು ಕಡೆಗಳಲ್ಲಿ ಇ-ಚಾರ್ಜಿಂಗ್‌ ಸ್ಟೇಷನ್‌ ಕೂಡ ತೆರೆಯಲಾಗಿದೆ.

ಹೊಸ ವರ್ಷಕ್ಕೆ ಮತ್ತಷ್ಟು ಖರೀದಿ
ಹೊಸ ವರ್ಷದ ಹಿನ್ನೆಲೆಯಲ್ಲಿ ಹೊಸ ಕಾರು, ಇತರ ವಾಹನ ಖರೀದಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಲಾಗುತ್ತಿದೆ. ಸಾಮಾನ್ಯವಾಗಿ ಜನವರಿಯಲ್ಲಿ ಕಾರುಗಳ ದರ ಏರಿಕೆಯಾಗುವ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿಯೇ ಕಾರು ಖರೀದಿ ಏರಿಕೆ ದಾಖಲಿಸುವುದು ಸಾಮಾನ್ಯ. ಭಾರತ್‌ ಆಟೋ ಕಾರ್ನ ಸೇಲ್ಸ್‌ ಹೆಡ್‌ ಡೆನ್ನಿಸ್‌ ಗೋನ್ಸಾಲ್ವಿಸ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಇತ್ತೀಚೆಗಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ವಾಹನ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಆಟೋಮೊಬೈಲ್‌ ಕ್ಷೇತ್ರ ಚೇತರಿಕೆಯತ್ತ ಮರಳುತ್ತಿದೆ’ ಎಂದಿದ್ದಾರೆ. ಪೈ ಸೇಲ್ಸ್‌ ಪ್ರç.ಲಿ. ವ್ಯವಸ್ಥಾಪಕ ನಿರ್ದೇಶಕ ಗಣಪತಿ ಪೈ, “ಕಳೆದ ವರ್ಷಕ್ಕೆ ಹೋಲಿಸಿದರೆ ಆಟೋಮೊಬೈಲ್‌ ಕ್ಷೇತ್ರ ಚೇತರಿಕೆ ಕಂಡಿದೆ. ಈಗಿನ ಬಿಎಸ್‌-6 ಎಂಜಿನ್‌ಗೆ ಬಳಕೆ ಮಾಡುವ ಚಿಪ್‌ನಲ್ಲಿ ಕೊರತೆ ಉಂಟಾಗಿದೆ. ಚಿಪ್‌ಗ್ಳನ್ನು ಹೊರದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಈಗಷ್ಟೇ ಉತ್ಪಾದನೆ ಆರಂಭಗೊಂಡಿದೆ’ ಎನ್ನುತ್ತಾರೆ.

Advertisement

ಮತ್ತಷ್ಟು ಪ್ರಗತಿ ನಿರೀಕ್ಷೆ
ಎರಡು ವರ್ಷಗಳ ಹಿಂದಿನ ಕೋವಿಡ್‌ ಸಮಯಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ವಾಹನ ನೋಂದಣಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ. ಸದ್ಯ ವಾಹನ ಖರೀದಿ ಹೋಲಿಸಿದಾಗ ದ್ವಿಚಕ್ರ ವಾಹನ ಖರೀದಿಯತ್ತ ಜನರು ಆಸಕ್ತಿ ತೋರುತ್ತಿದ್ದಾರೆ.
– ಭೀಮನಗೌಡ ಪಾಟೀಲ್‌, ಆರ್‌ಟಿಒ, ಮಂಗಳೂರು

- ನವೀನ್‌ ಭಟ್‌, ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next