Advertisement

ಸ್ವಯಂಚಾಲಿತ ಹೆಡ್‌ಲೈಟ್ ಸ್ವಿಚ್ಚಿಂಗ್‌ ಆವಿಷ್ಕಾರ

11:37 PM May 31, 2019 | Team Udayavani |

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದ ವಿದ್ಯಾರ್ಥಿಗಳು ಸ್ವಯಂಚಾಲಿತ ಹೆಡ್‌ಲೈಟ್ ಸ್ವಿಚ್ಚಿಂಗ್‌ ಮತ್ತು ವಸ್ತು ಗುರುತಿಸುವಿಕೆ ಹೊಂದಿರುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

Advertisement

ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯಲ್ಲಿ ಸಂವೇದಕವು ಸ್ಟೀಯರಿಂಗ್‌ ಅಕ್ಷದೊಂದಿಗೆ ಸಂಪರ್ಕ ಹೊಂದಿದೆ. ಸ್ಟೀಯರಿಂಗ್‌ ಚಕ್ರವನ್ನು ತಿರುಗಿಸಿದಾಗ ಈ ಸಂವೇದಕವು ನಿಯಂತ್ರಕಕ್ಕೆ ಸೂಚನೆಯನ್ನು ನೀಡುತ್ತದೆ, ಮತ್ತು ನಿಯಂತ್ರಕವು ಸ್ಟೀಯರಿಂಗ್‌ ತಿರುಗಿಸಿದ ದಿಕ್ಕಿಗೆ ಅನುಗುಣವಾಗಿ ಹೆಡ್‌ಲೈಟ್ ಅನ್ನು ತಿರುಗಿಸುತ್ತದೆ.ಇದಲ್ಲದೆ ಈ ವ್ಯವಸ್ಥೆಯಡಿಯಲ್ಲಿ, ಎದುರು ದಿಕ್ಕಿನಿಂದ ವಾಹನಗಳು ಬಂದಾಗ ಸ್ವಯಂಚಾಲಿತವಾಗಿ ವಾಹನದ ಹೆಡ್‌ಲೈಟ್ ಹೈಬೀಮ್‌ನಿಂದ ಡಿಪ್‌ಬೀಮ್‌ಗೆ ಬದಲಾಗುತ್ತದೆ ಮತ್ತು ವಾಹನಗಳು ಇಲ್ಲದಿದ್ದಾಗ ಮತ್ತೆ ಯಥಾಸ್ಥಿತಿಗೆ ತಲುಪುತ್ತದೆ.

ವಾಹನವು ಎತ್ತರದ ಪ್ರದೇಶಕ್ಕೆ ಏರುವಾಗ ಮತ್ತು ತಗ್ಗಿನ ಪ್ರದೇಶಕ್ಕೆ ಇಳಿಯುವಾಗ ಹೆಡ್‌ಲೈಟ್‌ನ ಬೆಳಕು ರಸ್ತೆಯ ಸರಿಯಾದ ಭಾಗಕ್ಕೆ ಕೇಂದ್ರೀಕರಿಸುವುದಿಲ್ಲ. ಈ ವ್ಯವಸ್ಥೆಯಡಿಯಲ್ಲಿ ವಾಹನವು ಮೇಲೆ ಹತ್ತುವಾಗ ಮತ್ತು ಕೆಳಗೆ ಇಳಿಯುವಾಗ ಬೆಳಕು ರಸ್ತೆ ಮೇಲೆ ಬೀಳುವಂತೆ ಹೆಡ್‌ಲೈಟ್ ಸ್ವಯಂಚಾಲಿತವಾಗಿ ಕೆಲಸಮಾಡುತ್ತದೆ. ಈ ವ್ಯವಸ್ಥೆಯಲ್ಲಿ ವಾಹನದ ಮುಂಭಾಗದಲ್ಲಿ ವೆಬ್‌ಕ್ಯಾಮ್‌ ಅಳವಡಿಸಲಾಗಿದ್ದು, ಇದು ರಸ್ತೆ ಭಾಗದ ವಿಡಿಯೋ ಚಿತ್ರೀಕರಣ ಮಾಡಿ ರಸ್ತೆ ಮೇಲೆ ಅಡಚಣೆಗಳು ಇದ್ದಾಗ ಅವನ್ನು ಗುರುತಿಸಿಚಾಲಕನಿಗೆ ಸೂಚನೆಯನ್ನು ನೀಡುತ್ತದೆ. ಇದು ಸ್ವಯಂಚಾಲಿತ ವಾಹನ ವ್ಯವಸ್ಥೆಗೆ ಅತ್ಯಂತ ಉಪಯುಕ್ತವಾಗಿದೆ.

ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಯೋಜನೆ ಅನುಷ್ಠಾನಗೊಂಡರೆ ಚಾಲಕನು ಹೆಡ್‌ಲೈಟನ್ನು ಕೈಯಾರೆ ಮೇಲೆ-ಕೆಳಗೆ ಮಾಡುವುದು ತಪ್ಪುತ್ತದೆ, ಮತ್ತು ರಸ್ತೆಯಲ್ಲಿನ ಅಡಚಣೆಗಳನ್ನು ಮುಂಚಿತವಾಗಿ ಗುರುತಿಸುವುದರಿಂದ ಅಪಘಾತವನ್ನು ತಪ್ಪಿಸಬಹುದು. ರಾತ್ರಿ ಸಮಯದಲ್ಲಿ ಚಾಲಕನಿಗೆ ರಸ್ತೆಯ ಗೋಚರತೆಯು ಹೆಚ್ಚುವುದೆಂದು ನಿರೀಕ್ಷಿಸಲಾಗಿದ್ದು, ರಸ್ತೆಯ ಮೇಲಿರುವ ವಸ್ತು, ಮನುಷ್ಯ, ಪ್ರಾಣಿ ಮುಂತಾದುವುಗಳನ್ನು ನಿಖರವಾಗಿ ಗುರುತಿಸಲು ಸಹಾಯವಾಗುವುದು.

ಈ ಯೋಜನೆಯನ್ನು ವಿದ್ಯಾರ್ಥಿಗಳಾದ ಅರವಿಂದ ಉಪಾಧ್ಯ, ನಾಗೇಂದ್ರಉಡುಪ, ನಿಖೀತಾ ಶೆಟ್ಟಿ ಮತ್ತು ಸುಪ್ರೀತ್‌ ಜಿ. ರಾವ್‌ಅವರು ಸಹಾಯಕ ಪ್ರಾಧ್ಯಾಪಕಿ ರಾಜಶ್ರೀ ನಂಬಿಯಾರ್‌ಅವರ ಮಾರ್ಗದರ್ಶನದಲ್ಲಿ ಕಾರ್ಯಗತಗೊಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next