ಸುದೀಪ್ “ಪಾರ್ಥ’ ಎಂಬ ಸಿನಿಮಾ ಮಾಡಿದ್ದರು. ದರ್ಶನ್ “ಸಾರಥಿ’ ಮಾಡಿದ್ದರು. ಎರಡೂ ಸೇರಿದರೆ ಏನಾಗುತ್ತದೆ ಹೇಳಿ, “ಪಾರ್ಥಸಾರಥಿ’. ಈಗ “ಪಾರ್ಥಸಾರಥಿ’ ಎಂಬ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಸ್ವತಃ ಆ ಚಿತ್ರತಂಡವೇ ಟ್ರೇಲರ್‌ನಲ್ಲಿ “ಪಾರ್ಥ’ ಹಾಗೂ “ಸಾರಥಿ’ ಎರಡೂ ಸೂಪರ್ ಹಿಟ್ ಈಗ “ಪಾರ್ಥಸಾರಥಿ’ ಕೂಡಾ ಸೂಪರ್ ಹಿಟ್ ಎಂದು ಹೇಳಿಕೊಂಡು ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ.
ರಾಬರ್ಟ್ ನವರಾಜ್ ಈ ಸಿನಿಮಾದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ. ಮೂವತ್ತು ವರ್ಷಗಳಿಂದ ಗೋವಾದಲ್ಲಿ ನೆಲೆಸಿರುವ ರಾಬರ್ಟ್, ಸಿನಿಮಾ ಮೇಲಿನ ಪ್ರೀತಿಯಿಂದ “ಪಾರ್ಥಸಾರಥಿ’ ಸಿನಿಮಾ ಮಾಡಿದ್ದಾಗಿ ಹೇಳುತ್ತಾರೆ. ಆರಂಭದಲ್ಲಿ ಕನ್ನಡ ಸಿನಿಮಾ ಮಾಡುತ್ತೇನೆ ಎಂದಾಗ ಅನೇಕರು ಹೆದರಿಸಿದ್ದರಂತೆ. ಆದರೆ, ಈಗ ಎಲ್ಲರೂ ನೀಡುತ್ತಿರುವ ಸಹಕಾರ ನೋಡಿ ಆವರ ಮಾತು ಸುಳ್ಳು ಎಂದು ರಾಬರ್ಟ್‌ಗೆ ಮನವರಿಕೆಯಾಗಿದೆ. ಚಿತ್ರದಲ್ಲಿ ಅನಾಥ ಹುಡುಗನ ಕಥೆಯನ್ನು ರಾಬರ್ಟ್ ಹೇಳಿದ್ದಾರಂತೆ.
ಕೇವಲ ತಂದೆ-ತಾಯಿ ಪ್ರೀತಿ ಸಿಕ್ಕ ಮಕ್ಕಳಷ್ಟೇ ಒಳ್ಳೆಯವರಾಗುವುದಿಲ್ಲ, ಅನಾಥ ಮಕ್ಕಳಿಗೂ ಪ್ರೀತಿ ಕೊಟ್ಟು ಸಾಕಿದರೆ ಅವರು ಕೂಡಾ ಮುಂದೆ ಒಳ್ಳೆಯ ದಾರಿ ಹಿಡಿಯುತ್ತಾರೆಂಬ ಅಂಶವನ್ನು ಈ ಸಿನಿಮಾ ಮೂಲಕ ಹೇಳಿದ್ದಾರಂತೆ ರಾಬರ್ಟ್. ಅನಾಥನಾಗಿ ಬೆಳೆದು ಜನರ ಪ್ರೀತಿಯಿಂದ ಮುಂದೆ ಪ್ರಾಮಾಣಿಕ ಐಪಿಎಸ್ ಆಧಿಕಾರಿಯಾಗುವ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಚಿತ್ರದಲ್ಲಿ ಪೊಲೀಸ್ ಇಲಾಖೆಯ ಕತೆ ಇದ್ದರೂ ಆಕ್ಷನ್‌ಗಿಂತ ಭಾವನೆಗಳಿಗೆ ಹೆಚ್ಚು ಒತ್ತುಕೊಡಲಾಗಿದೆಯಂತೆ. ಚಿತ್ರದಲ್ಲಿ ರೇಣುಕುಮಾರ್ ನಾಯಕರಾಗಿ ನಟಿಸಿದ್ದಾರೆ. ಹಲವು ಸಿನಿಮಾ, ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ರೇಣುಕ್‌ಗೆ ನಾಯಕರಾಗಿ ಇದು ಚೊಚ್ಚಲ ಸಿನಿಮಾ. ಮೊದಲ ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳುತ್ತಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ಅವರದು ಅನಾಥ ಹುಡುಗನಾಗಿ ಬೆಳೆದು ಮುಂದೆ ಪೊಲೀಸ್ ಅಧಿಕಾರಿಯಾಗುವ
ಪಾತ್ರವಂತೆ. ಚಿತ್ರದಲ್ಲಿ ಅಕ್ಷತಾ ನಾಯಕಿ. ಅವರಿಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ವರದಿ ಮಾಡುವ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬ ಅಂಶದ ಮೂಲಕ ಅವರ ಪಾತ್ರ ಸಾಗುತ್ತದೆಯಂತೆ. ಚಿತ್ರದಲ್ಲಿ ನಟಿಸಿದ ಇತರ ಕಲಾವಿದರು ಕೂಡಾ ತಮ್ಮ ಅನುಭವ ಹಂಚಿಕೊಂಡರು.
ಮೈಸೂರು, ಬೆಂಗಳೂರು, ಉತ್ತರ ಕನ್ನಡ, ಮಂಗಳೂರು, ಗೋವಾ, ಗುಜರಾತ್, ರಾಜಸ್ಥಾನ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಹರ್ಷವರ್ಧನ್-ಎನ್. ರಾಘವೇಂದ್ರ ಅವರ ಸಂಭಾಷಣೆ, ವಿಕ್ಟರ್ ಲೋಗಿದಾಸನ್ ಸಂಗೀತ, ನೀಲೇಶ್ ಛಾಯಾಗ್ರಹಣವಿದೆ.