ಧಾರವಾಡ: ಪುರುಷ ಪ್ರಾಧಾನ್ಯತೆಯ ಸಮಾಜದ ಹಲವು ವಿರೋಧಗಳ ಮಧ್ಯೆಯೂ ಮಹಿಳಾ ಆತ್ಮಚರಿತ್ರೆಗಳು ಸಾಕಷ್ಟು ಪ್ರಮಾಣದಲ್ಲಿ ಹೊರ ಬಂದಿವೆ ಎಂದು ಭೂಪಾಲನ ಹಿಂದಿ ಲೇಖಕಿ ಉರ್ಮಿಳಾ ಶಿರೀಷ್ ಹೇಳಿದರು.
ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಭವನದಲ್ಲಿ “ಮಹಿಳಾ ಆತ್ಮಕಥೆಗಳು’ ವಿಷಯ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಜೀವನದಲ್ಲಿ ಉಂಟಾದ ಸುಖ-ದುಃಖ, ಸಂಘರ್ಷಗಳನ್ನೊಳಗೊಂಡ ಮಹಿಳಾ ಆತ್ಮಚರಿತ್ರೆಗಳು ನಿಜಕ್ಕೂ ಅವರ ಆತ್ಮ ಸಾಕ್ಷಾತ್ಕಾರಗಳಿದ್ದಂತೆ. ಈ ಆತ್ಮಕಥೆಗಳು ಬರೀ ಸುಖ-ದುಃಖ ಮಾತ್ರವಲ್ಲ ಮತ್ತೂಬ್ಬ ಮಹಿಳೆಯ ಜೀವನ ಸುಧಾರಣೆ ಹಾಗೂ ಪ್ರೇರಣೆಗೂ ಕಾರಣವಾಗಿವೆ ಎಂದರು.
ಹಿಂದಿ ಸೇರಿದಂತೆ ಬಂಗಾಳಿ, ತಮಿಳು, ತೆಲಗು, ಕನ್ನಡ, ಮರಾಠಿ ಹೀಗೆ ಅನೇಕ ಭಾಷೆಗಳಲ್ಲಿ ಮಹಿಳೆಯರು ಹಲವಾರು ವರ್ಷಗಳಿಂದ ಆತ್ಮಕಥೆಗಳನ್ನು ಬರೆದಿದ್ದಾರೆ. ಸಮಾಜದಲ್ಲಿ ಅದರಲ್ಲೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಕಾರಣೀಭೂತವಾಗಿವೆ ಎಂದರು.
ಕವಿವಿಯ ಕುಲಪತಿ ಪ್ರೊ|ಕೆ.ಬಿ.ಗುಡಸಿ ಮಾತನಾಡಿ, ಆತ್ಮಕಥೆ ಬರೆಯುವುದು ಸುಲಭದ ಕೆಲಸವಲ್ಲ.ಅದರಲ್ಲೂ ಮಹಿಳೆಯರು ಕುಟುಂಬದ ನಿರ್ವಹಣೆ ಜತೆಗೆ ಲೇಖನ ಬರೆಯುವುದು, ಸಾಹಿತ್ಯದಲ್ಲಿ ತೊಡಗುವುದು ಸುಲಭದ ಕೆಲಸವಲ್ಲ. ಆದರೂ ಅಂತಹ ಕಷ್ಟದ ಕೆಲಸವನ್ನು ಸರಳ ಮತ್ತು ವಿವಿಧ ಆಯಾಮುಗಳಲ್ಲಿ ಮಾಡುತ್ತಿರುವುದು ಪ್ರಶಂಸನೀಯ ಎಂದರು. ಆತ್ಮಕಥೆಗಳು ಕನ್ನಡಿ ಇದ್ದಂತೆ. ಅವು ಮನುಷ್ಯನ ಕಣ್ಣು ತೆರೆಸುತ್ತವೆ. ಈ ನಿಟ್ಟಿನಲ್ಲಿ ಸಾಕಷ್ಟು ಮಹಿಳೆಯರು ಆತ್ಮಕಥೆ ಬರೆದು ತೋರಿಸಿದ್ದಾರೆ. ಅಂತಹ ಮಹಿಳೆಯರು ಸಾಧಕಿಯರ ಪಟ್ಟಿಯಲ್ಲಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನವಿದೆ ಎಂದರು.
ಹಿರಿಯ ಸಾಹಿತಿ ಡಾ|ವೀಣಾ ಶಾಂತೇಶ್ವರ ಮಾತನಾಡಿದರು. ಉತ್ತರ ಕರ್ನಾಟಕ ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ|ರಾಜೇಶ್ವರಿ ಮಹೇಶ್ವರಯ್ಯ, ಕವಯತ್ರಿ ಪ್ರತಿಭಾ ನಂದಕುಮಾರ, ವಿಮರ್ಶಕಿ ಡಾ|ಎಂ.ಎಸ್. ಆಶಾದೇವಿ, ಈಶ್ವರ ಮಿರ್ಚಿ, ರಾಘವೇಂದ್ರ ಪಾಟೀಲ, ಡಾ|ಪ್ರಜ್ಞಾ ಮತ್ತಿಹಳ್ಳಿ, ಮೇಘಾ ಹುಕ್ಕೇರಿ, ಡಾ|ಉಷಾ ಗದ್ದಿಮಠ ಸೇರಿದಂತೆ ಹಲವರಿದ್ದರು. ಇದಾದ ಬಳಿಕ ವಿವಿಧ ಗೋಷ್ಠಿಗಳಲ್ಲಿ ವಿವಿಧ ಭಾಷೆಗಳ ಆತ್ಮಕಥೆಗಳ ಬಗ್ಗೆ ಉಪನ್ಯಾಸ ನಡೆದವು.