ಹೊಸದಿಲ್ಲಿ: ಕೋವಿಡ್ ವೈರಸ್ ಅನ್ನು ತಡೆಯಲು ಜಾರಿಗೊಳಿಸಲಾದ ಲಾಕ್‌ಡೌನ್ ಮತ್ತು ಕುಸಿದ ಬೇಡಿಕೆಯಿಂದ ಇನ್ನೂ ಅಟೋಮೊಬೈಲ್ ವಲಯ ಹೊರಬಂದಿಲ್ಲ.
ಇದೀಗ ಬಿಎಸ್ 6 ಆವೃತ್ತಿಯ ಕೆಲವು ನಿಯಮಗಳು ವಾಹನ ಉತ್ಪಾದನಾ ವಲಯದ ಆಘಾತವನ್ನು ಹೆಚ್ಚಿದೆ. ಇದಕ್ಕಾಗಿ ಸದ್ಯದ ಮಟ್ಟಿಗೆ ನೂತನ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸದಂತೆ ಸರಕಾರಕ್ಕೆ ಈ ವಲಯ ಮನವಿ ಮಾಡಿದೆ.
ಮಾಲಿನ್ಯ ನಿಯಂತ್ರಣಕ್ಕಾಗಿ ಬಿಎಸ್6 ಮಾದರಿಯ ಕಾರುಗಳನ್ನು ಈ ವರ್ಷ ಮಾರುಕಟ್ಟೆಗೆ ಬಿಡಲಾಗಿದೆ. ಬಿಎಸ್4ರ ಎಂಜಿನ್ ಅನ್ನು ಬಿಎಸ್6ಕ್ಕೆ ಅಪ್‌ಗ್ರೇಡ್ ಮಾಡಲು ಅಟೋಮೊಬೈಲ್ ಉದ್ಯಮವು 40 ಸಾವಿರ ಕೋಟಿ ರೂ.ಗಳ ದೊಡ್ಡ ಹೂಡಿಕೆಗಳನ್ನು ಮಾಡಿದೆ. ಆದರೆ ಲಾಕ್‌ಡೌನ್‌ನಿಂದ ಬೇಡಿಕೆಗೆ ಕೊರತೆಯಾಗಿದ್ದು ಆರಂಭಿಕ ಆದಾಯವನ್ನು ಸಾಧಿಸಲಾಗಿಲ್ಲ.
ಬಿಎಸ್ 6ನೇ ತಲೆಮಾರಿನ ವಾಹನದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕಠಿನ ನಿಯಮಗಳನ್ನು ಸರಕಾರ ಅನುಸರಿಸುತ್ತಿದೆ. ವಾಹನ ಚಲಿಸುವ ಸಂದರ್ಭ ಹೊರಸೂಸಲ್ಪಡುವ ಮಾಲಿನ್ಯವನ್ನು ಗಣನೆಗೆ ತೆಗೆದುಕೊಳ್ಳಲು ಅತ್ಯಾಧುನಿಕ ರಿಯಲ್ ಡ್ರೈವಿಂಗ್ ಎಮಿಷನ್‌ನ ಮೊರೆ ಹೋಗಲಾಗಿದೆ. ಕಾರುಗಳನ್ನು ಪರೀಕ್ಷೆ ನಡೆಸಿ ಅವುಗಳು ಹಾನಿಕಾರಕ ಮಾಲಿನ್ಯವನ್ನು ಹೊರಸೂಸುತ್ತಿಲ್ಲ ಎಂಬುದನ್ನು ಕಾರು ತಯಾರಕ ಸಂಸ್ಥೆಗಳು ಖಾತ್ರಿ ಪಡಿಸಬೇಕು. ತಪ್ಪಿದಲ್ಲಿ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.
ಕಡಿಮೆ ಇಂಧನದಲ್ಲಿ ಹೆಚ್ಚು ಕಿ.ಮೀ. ಸಂಚರಿಸುವಂತೆ ಮಾಡಿ ಮಾಲಿನ್ಯವನ್ನು ಕಡಿಮೆ ಮಾಡುವ ವಿಧಾನವಾಗಿದೆ. ಈಗಿರುವ ಮಾಲಿನ್ಯದ ಪ್ರಮಾಣವನ್ನು ಇಳಿಕೆ ಮಾಡುವತ್ತ ಕಾರು ತಯಾರಕಾ ಸಂಸ್ಥೆ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ನಿಯಮಗಳಿಗಾಗಿ ಹೂಡಿಕೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ 60ನೇ ವಾರ್ಷಿಕ ಸಾಮಾನ್ಯ ಸಭೆ ಈ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಿದೆ.