Advertisement

ಮಾಲಿನ್ಯದಲ್ಲಿ “ಆಟೋ’ಟೋಪ

12:17 PM Nov 03, 2018 | |

ಬೆಂಗಳೂರು: ನಗರದಲ್ಲಿ ನಿತ್ಯ ಬರೀ ಆಟೋಗಳಿಂದಲೇ ಹೊರಹೊಮ್ಮುವ ಇಂಗಾಲದ ಡೈಆಕ್ಸೆ„ಡ್‌ ಪ್ರಮಾಣ 1,200 ಟನ್‌. ಇದನ್ನು ಸರಿದೂಗಿಸಲು ಸರಿಸುಮಾರು ಎರಡು ಎಕರೆ ಅರಣ್ಯ ಬೇಕಾಗುತ್ತದೆ! ಒಂದೇ ದಿನದಲ್ಲಿ ಆಟೋಗಳು ಉಗುಳುವ 1,200 ಟನ್‌ ಕಾರ್ಬನ್‌ ಅನ್ನು ಸ್ವೀಕರಿಸಿ, ಜನ ಉಸಿರಾಡಲು ಅವಶ್ಯಕತೆ ಇರುವ ಆಮ್ಲಜನಕ ಬಿಡುಗಡೆ ಮಾಡಲು 1.92 ಎಕರೆಯಷ್ಟು ಅರಣ್ಯ ಬೆಳೆಸಬೇಕಾಗುತ್ತದೆ.

Advertisement

ಪರಿಸರ ತಜ್ಞರ ಪ್ರಕಾರ ಸಾಮಾನ್ಯವಾಗಿ ಒಂದು ಎಕರೆ ಅರಣ್ಯವು ಒಂದು ದಿನಕ್ಕೆ ಅಂದಾಜು 50 ಜನರಿಗೆ ಸಾಕಾಗುವಷ್ಟು ಆಮ್ಲಜನಕ ನೀಡುತ್ತದೆ. ಟೆರಿ (ದಿ ಎನರ್ಜಿ ಆಂಡ್‌ ರಿಸೋರ್ಸ್‌ ಇನ್ಸ್‌ಟಿಟ್ಯೂಟ್‌) ಈಚೆಗೆ ಬಿಡುಗಡೆ ಮಾಡಿದ “ಎ ಸಿಟಿ ಈವೆಂಟ್‌ ಆನ್‌ ಪಬ್ಲಿಕ್‌ ಟ್ರಾನ್ಸ್‌ಪೊರ್ಟ್‌’ ಕುರಿತ ಸಂಶೋಧನಾ ವರದಿಯಲ್ಲಿ ಇದು ಬೆಳಕಿಗೆಬಂದಿದೆ. 

ಆದರೆ, ನಗರದಲ್ಲಿ ಇದ್ದ ಮರಗಳನ್ನೇ “ಅಭಿವೃದ್ಧಿ’ ನೆಪದಲ್ಲಿ ಹನನ ಮಾಡಲಾಗುತ್ತಿದೆ. ಹಾಗಾಗಿ ಹೆಚ್ಚುತ್ತಿರುವ ಇಂಗಾಲ, ನೈಟ್ರೋಜನ್‌, ದೂಳಿನ ಕಣಗಳನ್ನು ಹೀರಿ ಸಮತೋಲನ ಕಾಪಾಡಲು ಅವಕಾಶವೇ ಇಲ್ಲ. ಪರಿಣಾಮ ಆ ಕಲುಷಿತ ಗಾಳಿಯನ್ನೇ ಸೇವಿಸುವುದು ಅನಿವಾರ್ಯವಾಗಿದೆ. ಹೀಗೆ ಕಲುಷಿತ ಗಾಳಿ ಸೇವನೆಯು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಈ ಮಧ್ಯೆ ಬೆಳಕಿನ ಹಬ್ಬದ ಹೆಸರಿನಲ್ಲಿ ಮತ್ತಷ್ಟು ವಿಷಾನಿಲವನ್ನು ಸೇರಿಸಲು ನಗರ ತುದಿಗಾಲಲ್ಲಿ ನಿಂತಿದೆ.

ಒಟ್ಟಾರೆ ನಗರದಲ್ಲಿ ಉತ್ಪತ್ತಿಯಾಗುವ ವಾಯುಮಾಲಿನ್ಯದಲ್ಲಿ ವಾಹನಗಳ ಪಾತ್ರ ಶೇ.42ರಷ್ಟಿದೆ. ಇದರಲ್ಲಿ ಸಿಂಹಪಾಲು ಆಟೋಗಳದ್ದಾಗಿದೆ. ಈ ಆಟೋಗಳಿಂದ ವಾರ್ಷಿಕ 0.44 ದಶಲಕ್ಷ ಟನ್‌ನಷ್ಟು ಕಾರ್ಬನ್‌ ಡೈಆಕ್ಸೆ„ಡ್‌ ಉತ್ಪತ್ತಿಯಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 1.50 ಲಕ್ಷ ಆಟೋಗಳು ಸೇರ್ಪಡೆ ಆಗಲಿವೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಇನ್ನೂ 0.5 ದಶಲಕ್ಷ ಟನ್‌ ಕಾರ್ಬನ್‌ ಇದಕ್ಕೆ ಹೆಚ್ಚುವರಿಯಾಗಿ ಸೇರಲಿದೆ.

ನಗರದಲ್ಲಿ ಒಟ್ಟಾರೆ 1.70 ಲಕ್ಷ ಆಟೋಗಳಿದ್ದು, ಈ ಪೈಕಿ 24 ಸಾವಿರ ಟು-ಸ್ಟ್ರೋಕ್‌ ಆಟೋಗಳಿಂದಲೇ 282 ಟನ್‌ ಕಾರ್ಬನ್‌ ಉತ್ಪತ್ತಿಯಾಗುತ್ತಿದೆ. ಇದಲ್ಲದೆ, 0.1 ಟನ್‌ ನೈಟ್ರೋಜನ್‌ ಆಕ್ಸೆ„ಡ್‌ ಮತ್ತು 0.3 ಟನ್‌ ಪಿಎಂ 10 (ಉಸಿರಾಡಲ್ಪಡುವಾಗ ದೇಹವನ್ನು ಸೇರುವ ದೂಳಿನ ಕಣಗಳು) ಹೊರಹೊಮ್ಮುತ್ತಿದೆ. ಆದರೆ, ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಅಸಹಾಯಕವಾಗಿದೆ.

Advertisement

ಕಳೆದ ವರ್ಷ ಗುಜರಿಗೆ ಹಾಕುವ ಟು-ಸ್ಟ್ರೋಕ್‌ಗೆ 30 ಸಾವಿರ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಿಸಿದರೂ ಒಂದೇ ಒಂದು ಆಟೋ ಗುಜರಿಗೆ ಹಾಕಲು ಸಾಧ್ಯವಾಗಿಲ್ಲ. ಈ ಮಧ್ಯೆ ಆಟೋಗಳಿಗೆ ಪರವಾನಗಿ ಸ್ಥಗಿತಗೊಳಿಸಿದ್ದು, ಇ-ಪರ್ಮಿಟ್‌ಗೆ ಮಾತ್ರ ಅವಕಾಶ ಕಲ್ಪಿಸುವ ಪದ್ಧತಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಂತ, ಆಟೋಗಳನ್ನು ನಿಷೇಧಿಸಬೇಕು ಎಂದಲ್ಲ; ಬದಲಿಗೆ ವಿದ್ಯುತ್‌ ಚಾಲಿತ ಆಟೋಗಳತ್ತ ಮುಖಮಾಡುವ ಅವಶ್ಯಕತೆ ಇದೆ.

ಈಗಿರುವ ಎಲ್ಲ ಆಟೋಗಳು ಎಲೆಕ್ಟ್ರಿಕ್‌ಗೆ ಪರಿವರ್ತನೆಗೊಂಡರೆ, ವಾರ್ಷಿಕ 0.74 ದಶಲಕ್ಷ ಗ್ರಾಂ. ಎಲ್‌ಪಿಜಿ ಉಳಿತಾಯ ಮಾಡಬಹುದು. ಒಂದು ವೇಳೆ ಕೇವಲ ಶೇ.30ರಷ್ಟು ಎಲೆಕ್ಟ್ರಿಕ್‌ಗೆ ಪರಿವರ್ತನೆಯಾದರೆ, ಪ್ರತಿ ವರ್ಷ ಹೊರಸೂಸುವ ಕಾರ್ಬನ್‌ ಪ್ರಮಾಣ 0.20 ದಶಲಕ್ಷ ಟನ್‌ ಕಡಿಮೆ ಆಗಲಿದೆ. ಅದೇ ರೀತಿ, ಶೇ.60ರಷ್ಟು ಎಲೆಕ್ಟ್ರಿಕ್‌ ಆಟೋಗಳು ರಸ್ತೆಗಿಳಿದರೆ, 0.30 ದಶಲಕ್ಷ ಟನ್‌ ಕಾರ್ಬನ್‌ ತಗ್ಗಲಿದೆ.

ಈಗಾಗಲೇ ಬಹುತೇಕ ಕಡೆಗಳಲ್ಲಿ ವಾಯುಮಾಲಿನ್ಯ ಪ್ರಮಾಣ ವಿಶ್ವಸಂಸ್ಥೆ ನಿಗದಿಪಡಿಸಿದ ಮಿತಿಗಿಂತ ದುಪ್ಪಟ್ಟು ಹಾಗೂ ರಾಷ್ಟ್ರೀಯಮಟ್ಟದ ಮಿತಿಯನ್ನೂ ಮೀರಿದೆ. ಆಟೋಗಳ ವೇಗಕ್ಕೆ ಕಡಿವಾಣ ಹಾಕಿದರೆ, ತಕ್ಕಮಟ್ಟಿಗಾದರೂ ಈ ಪ್ರಮಾಣ ತಗ್ಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ಪರಿಹಾರ ಏನು?: ತಕ್ಷಣಕ್ಕೆ ಎಲ್ಲ ಆಟೋಗಳನ್ನೂ ಎಲೆಕ್ಟ್ರಿಕ್‌ಗೆ ಪರಿವರ್ತಿಸಲು ಸಾಧ್ಯವಿಲ್ಲ. ಹಂತ-ಹಂತವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಇದಕ್ಕಾಗಿ ಆಟೋ ಚಾಲಕರಿಗೆ ಸಬ್ಸಿಡಿ, ತೆರಿಗೆ ವಿನಾಯ್ತಿ, ಪರವಾನಗಿ ಶುಲ್ಕ ಮನ್ನಾದಂತಹ ನೇರ ಸೌಲಭ್ಯಗಳನ್ನು ಸಾರಿಗೆ ಇಲಾಖೆ ಕಲ್ಪಿಸಬೇಕು. ಅದೇ ರೀತಿ, ಪ್ರತ್ಯೇಕ ನಿಲುಗಡೆಗೆ ಜಾಗ, ಎಲೆಕ್ಟ್ರಿಕ್‌ ಝೋನ್‌ಗಳು, ಚಾರ್ಜಿಂಗ್‌ ಸ್ಟೇಷನ್‌ಗಳು ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಆರ್ಥಿಕತೆಗೂ ಗ್ರಹಣ ಹಿಡಿಸುವ ಮಾಲಿನ್ಯ: ವಾಯುಮಾಲಿನ್ಯ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುತ್ತಿದೆಯೇ? ಇಲ್ಲ. ಪರೋಕ್ಷವಾಗಿ ಆರ್ಥಿಕತೆಗೂ ಪೆಟ್ಟುಕೊಡುತ್ತಿದೆ! ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಮಿಕರು ಕರ್ತವ್ಯಕ್ಕೆ ಗೈರು ಮತ್ತಿತರ ಕಾರಣಗಳಿಂದ ಉತ್ಪಾದಕತೆಗೆ ಹೊಡೆತ ಬೀಳುತ್ತದೆ. ಮತ್ತೂಂದೆಡೆ ಚಿಕಿತ್ಸಾ ವೆಚ್ಚದ ರೂಪದಲ್ಲೂ ಏರಿಕೆ ಆಗುತ್ತದೆ.

2016ರಲ್ಲಿ ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿದ ಅಧ್ಯಯನ ವರದಿ ಪ್ರಕಾರ ಆರೋಗ್ಯ ವೆಚ್ಚ ಹೆಚ್ಚಳ ಮತ್ತು ಕಾರ್ಮಿಕರ ಪ್ರಮಾಣ ಕಡಿತಗೊಂಡಿದ್ದರಿಂದ ಭಾರತದ ಒಟ್ಟಾರೆ ವೃದ್ಧಿ ದರ (ಜಿಡಿಪಿ)ದಲ್ಲಿ ಶೇ.8.5ರಷ್ಟು ಕುಸಿತ ಕಂಡಿದೆ. ಅಲ್ಲದೆ, 2017ರಲ್ಲಿ ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ ಲಾನ್ಸೆಟ್‌ ವರದಿ ಪ್ರಕಾರ ಮಾಲಿನ್ಯಕ್ಕೆ ಸಂಬಂಧಿಸಿದ ಸಾವಿನ ಪ್ರಕರಣಗಳಲ್ಲಿ ಭಾರತ ಉನ್ನತ ಸ್ಥಾನದಲ್ಲಿದೆ. 2015ರಲ್ಲಿ ವಿಶ್ವದಲ್ಲಿ ಮಾಲಿನ್ಯದಿಂದ 9 ದಶಲಕ್ಷ ಜನ ಸಾವನ್ನಪ್ಪಿದ್ದು, ಭಾರತದಲ್ಲಿ 2.5 ದಶಲಕ್ಷ ಮಂದಿ ಮಾಲಿನ್ಯಕ್ಕೆ ಬಲಿಯಾಗಿದ್ದಾರೆ ಎಂದು ಉಲ್ಲೇಖೀಸಲಾಗಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next