Advertisement

ಆಟೋ ಎಕ್ಸ್‌ಪೋ 2020 ಈ ವರ್ಷದ ಬಹು ನಿರೀಕ್ಷಿತ ಕಾರುಗಳು

10:05 AM Feb 04, 2020 | Sriram |

ದೇಶದಲ್ಲೇ ಅತಿ ದೊಡ್ಡ ಆಟೋ ಎಕ್ಸ್‌ಪೋ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಾರುಗಳ ಪ್ರದರ್ಶನ ಮೇಳವು ದೆಹಲಿಯಲ್ಲಿ ನಡೆಯಲಿದ್ದು, ಆಟೋಮೊಬೈಲ್‌ ಪರಿಣತರಲ್ಲಿ ಕುತೂಹಲ ಹೆಚ್ಚಿಸಿದೆ.

Advertisement

ಇನ್ನು ಕೆಲವೇ ದಿನಗಳಷ್ಟೇ ಬಾಕಿ… ಆಟೋಮೊಬೈಲ್‌ ಉದ್ಯಮ ಭಾರೀ ಕುತೂಹಲದಿಂದ ಕಾಯುತ್ತಿರುವ ನವದೆಹಲಿಯ ಆಟೋ ಎಕ್ಸ್‌ಪೋ 2020 ಶುರುವಾಗಲಿದೆ. ಫೆ.7ಕ್ಕೆ ಆರಂಭವಾಗಲಿರುವ ಈ ಎಕ್ಸ್‌ಪೋ, ಫೆ.12ರವರೆಗೂ ನಡೆಯಲಿದೆ. ಇಡೀ ದೇಶದಲ್ಲೇ ಅತಿ ದೊಡ್ಡದು ಎನ್ನಿಸಿಕೊಂಡಿರುವ ಈ ಎಕ್ಸ್‌ಪೋದಲ್ಲಿ ಹಲವಾರು ಹೊಸ ಕಾರುಗಳು, ಬೈಕುಗಳು ಬಿಡುಗಡೆಯಾಗಲಿವೆ. ಅವುಗಳತ್ತ ಒಂದು ನೋಟ…

ಮಾರುತಿ
ಈ ಬಾರಿ ಮಿಷನ್‌ ಗ್ರೀನ್‌ ಮಿಲಿಯನ್‌ ಎಂಬ ಥೀಮ್‌ ಮತ್ತು ಸಿಎನ್‌ಜಿ ಹಾಗೂ ಹೈಬ್ರಿಡ್‌ ಕಾರುಗಳಿಗೆ ಮಹತ್ವ ನೀಡಿರುವ ಮಾರುತಿ ಕಂಪನಿ, ಹೊಸ ಪೀಳಿಗೆಯ ಕಾರುಗಳ ಬಿಡುಗಡೆಗೆ ಕಾಯುತ್ತಿದೆ. ಅದರಲ್ಲಿ ಪ್ರಮುಖವಾದದ್ದು “ಫ‌ುಚರೋ-ಇ’ ಎಂಬ ಕಾನ್ಸೆಪ್ಟ್ನ ಕಾರು. ಇದು ಎಲೆಕ್ಟ್ರಿಕ್‌ ಕಾರಾಗಿದ್ದು, ಹೊಸ ಭವಿಷ್ಯದತ್ತ ಮುನ್ನಡೆಯುವ ಬಗ್ಗೆ ಹೇಳಿಕೊಂಡಿದೆ. ಜತೆಗೆ, ಮಾರುತಿ ವಿಟಾರಾ ಬ್ರೀಝಾ ಫೇಸ್‌ಲಿಫ್ಟ್ , ಇಗ್ನಿಸ್‌ ಫೇಸ್‌ಲಿಫ್ಟ್ , ಸೇರಿದಂತೆ 17 ಕಾರುಗಳು ಅನಾವರಣಗೊಳ್ಳಲಿವೆ. ವಿಶೇಷವೆಂದರೆ, ಈ ಎಲ್ಲವೂ ಬಿಎಸ್‌6ಗೆ ಅಪ್‌ಗ್ರೇಡ್ ಆಗಿ ಬಿಡುಗಡೆಯಾಗಲಿವೆ.

ಟಾಟಾ
ಟಾಟಾ ಕಂಪನಿ, ತನ್ನ ಹೊಸ “ಹಾರ್ನ್ಬಿಲ್‌’ ಎಂಬ ಹ್ಯಾಚ್‌ಬ್ಯಾಕ್‌ ಕಾರನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಿದೆ. ಇದು ಮಾರುತಿಯ “ಎಕ್ಸ್‌ ಪ್ರೆಸ್ಸೋ ‘ ಮತ್ತು “ಮಹೀಂದ್ರಾ ಕೆಯುವಿ 100’ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಇದರ ಜತೆಯಲ್ಲೇ ಇನ್ನೂ 25 ವಾಹನಗಳನ್ನು ಅನಾವರಣ ಮಾಡಲೂ ಟಾಟಾ ಕಂಪನಿ ಸಿದ್ಧತೆ ನಡೆಸಿದೆ. ಇದರಲ್ಲಿ ಟಾಟಾ ಅಲ್ಟ್ರೋಸ್‌ ಇವಿ, ಟಾಟಾ ಗ್ರಾವಿಟಾಸ್‌ ಕೂಡ ಸೇರಿದೆ. ಹಾರ್ನ್ಬಿಲ್‌ ಸೇರಿದಂತೆ ಒಟ್ಟು 26 ಕಾರುಗಳು ಪ್ರದರ್ಶನಗೊಳ್ಳಲಿದ್ದು, ಇದರಲ್ಲಿ 14 ವಾಣಿಜ್ಯ ಮತ್ತು 12 ಪ್ಯಾಸೆಂಜರ್‌ ವಾಹನಗಳಿವೆ.

ಮಹೀಂದ್ರಾ
ಮಹೀಂದ್ರಾ ಕಂಪನಿ ಕೂಡ ತನ್ನ 18 ಕಾರುಗಳನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಿದೆ. ಇದರಲ್ಲಿ ಎಸ್‌ಯುವಿ, ಎಂಪಿವಿ, ವಾಣಿಜ್ಯ ಮತ್ತು ಎಲೆಕ್ಟ್ರಿಕ್‌ ವಾಹನಗಳೂ ಸೇರಿವೆ. ಇದರಲ್ಲಿ ಎಕ್ಸ್‌ಯುವಿ 500 ಎಸ್‌ಯುವಿ, ಎಕ್ಸ್‌ಯುವಿ 300 ಎಸ್‌ಯುವಿಯ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದರಲ್ಲಿ ಎಕ್ಸ್‌ಯುವಿ 500 ಎಸ್‌ಯುವಿ ಪೆಟ್ರೋಲ್‌ ಮತ್ತು ಡೀಸೆಲ್‌ ವರ್ಷನ್‌ನದ್ದಾಗಿದ್ದರೆ, ಎಕ್ಸ್‌ಯುವಿ 300 ಎಸ್‌ಯುವಿ ಎಲೆಕ್ಟ್ರಿಕ್‌ ವಾಹನವಾಗಿರಲಿದೆ. ಇಷ್ಟೇ ಅಲ್ಲ, ಇಕೆಯುವಿ100 ಎಂಬ ಎಲೆಕ್ಟ್ರಿಕ್‌ ಎಸ್‌ಯುವಿಯನ್ನೂ ಅನಾವರಣ ಮಾಡಲಿದೆ.

Advertisement

ಕಿಯಾ
ಈಗಾಗಲೇ “ಸೆಲ್ಟೋಸ್‌’ನ ಯಶಸ್ಸಿನಿಂದ ಬೀಗುತ್ತಿರುವ ಕಿಯಾ ಕಂಪನಿ, ತನ್ನ ಎಂಪಿವಿ (ಮಲ್ಟಿ ಪರ್ಪಸ್‌ ವೆಹಿಕಲ್‌) ಕಾರು “ಕಾರ್ನಿವಲ್‌’ಅನ್ನು ಇದೇ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದಷ್ಟೇ ಅಲ್ಲ, ಹುಂಡೈ ವೆನ್ಯೂವಿಗೆ ಸ್ಪರ್ಧೆ ನೀಡಬಲ್ಲಂಥ ಒಂದು ಎಸ್‌ಯುವಿಯನ್ನೂ ಅನಾವರಣ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಹುಂಡೈ
ವರ್ನಾದ ಫೇಸ್‌ಲಿಫ್ಟ್ , ಹೊಸ ಕ್ರೀಟಾ, ಹುಂಡೈ ಟಸ್ಕಾನ್‌ ಸೇರಿದಂತೆ ಇನ್ನೂ ಹಲವಾರು ಹುಂಡೈ ಕಂಪನಿಯ ಕಾರುಗಳು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿವೆ. ಇದರಲ್ಲಿ ಹೆಚ್ಚಾಗಿ ಎಲ್ಲವೂ ಫೇಸ್‌ಲಿಫ್ಟ್ ಕಾರುಗಳಾಗಿದ್ದು, ಒಳಾಂಗಣ ಮತ್ತು ಹೊರಾಂಗಣದಲ್ಲಿ ಇನ್ನಷ್ಟು ಫೀಚರ್‌ಗಳನ್ನು ಸೇರಿಸಿಕೊಂಡು ಮಾರುಕಟ್ಟೆಗೆ ಪ್ರವೇಶ ಮಾಡಲಿವೆ. ಹುಂಡೈನ ನಿಯೋಸ್‌ ಮತ್ತು ಸ್ಯಾಂಟ್ರೋದ ಫೇಸ್‌ಲಿಫ್ಟ್ ಗಳ ಅನಾವರಣವಾಗಲಿದೆ.

ರೆನಾಲ್ಟ್
ರೆನಾಲ್ಟ್ ಕಂಪನಿ, ತನ್ನ ಟ್ರೈಬರ್‌ನ “ಎಎಂಟಿ’ ಮತ್ತು “ಟಬೋì’ ಆವೃತ್ತಿಗಳನ್ನು ಅನಾವರಣ ಮಾಡಲಿದೆ. ಈಗಾಗಲೇ ಟ್ರೈಬರ್‌ ಮಾರುಕಟ್ಟೆಯಲ್ಲಿದ್ದು, ಇದು ಇನ್ನಷ್ಟು ಅಪ್‌ಡೇಟ್‌ ಆಗಿ ಬರಲಿದೆ. ಇದರ ಜತೆಗೆ ಟ್ರೈಬರ್‌ನ ಇನ್ನೊಂದು ಕಾರು ಕೂಡಾ ಅನಾವರಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ರೆನಾಲ್ಟ್ ಕ್ವಿಡ್‌ನ‌ ಫೇಸ್‌ಲಿಫ್ಟ್ ಕೂಡ ಬರಲಿದೆ.

ಮರ್ಸಿಡಿಸ್‌ ಬೆಂಝ್
ಜರ್ಮನಿಯ ಲಕ್ಸುರಿ ಕಾರು ಮೇಕರ್ಸ್‌ ಮರ್ಸಿಡಿಸ್‌ ಬೆಂಝ್ ಕಂಪನಿ ವಿ- ಕ್ಲಾಸ್‌ ಮಾರ್ಕೋಪೋಲೋ ಕ್ಯಾಂಪರ್‌ಅನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಿದೆ. ಈಗ ಅನಾವರಣವಾದರೂ, ಈ ಕಾರು ಮಾರುಕಟ್ಟೆಗೆ ಪ್ರವೇಶ ಮಾಡುವುದು ಮುಂದಿನ ನವೆಂಬರ್‌ನಲ್ಲಿಯೇ. ಭಾರತೀಯ ಮಾರುಕಟ್ಟೆಗೆ ತಕ್ಕಂತೆ ಈ ಕಾರನ್ನು ರೂಪಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ನಿಸ್ಸಾನ್‌ನಿಂದ ಮೇಕ್‌ ಇನ್‌ ಇಂಡಿಯಾ ಕಾರು
ಆಟೋ ಎಕ್ಸ್‌ಪೋದತ್ತ ಎಲ್ಲ ಕಂಪನಿಗಳು ಗಮನಹರಿಸಿದ್ದರೆ, ನಿಸ್ಸಾನ್‌ ಕಂಪನಿ ಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವರ್ಲ್ಡ್ ತತ್ವದ ಆಧಾರದ ಮೇಲೆ ಹೊಸ ಕಾಂಪ್ಯಾಕ್ಟ್ಎಸ್‌ಯುವಿಯನ್ನು ಅನಾವರಣ ಮಾಡಲು ಸಿದ್ಧತೆ ನಡೆಸಿದೆ. ಆಟೋ ಎಕ್ಸ್‌ಪೋದಲ್ಲಿ ಇದನ್ನು ಅನಾವರಣ ಮಾಡದಿದ್ದರೂ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಎಸ್‌ಯುವಿ ಉತ್ಪಾದನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಿಸ್ಸಾನ್‌ ಸಂಸ್ಥೆ, ಹೊಸ ಹೊಸ ಫೀಚರ್‌ ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೊಸ ಮಾದರಿಯ ಎಸ್‌ಯುವಿಯನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿಕೊಂಡಿದೆ.

-ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next