ಕೋವಿಡ್ 2ನೇ ಅಲೆ ಅಕ್ಷರಶ: ಎಲ್ಲರನ್ನು ಬೀದಿಗೆ ತಂದು ನಿಲ್ಲಿಸಿದೆ. ಬದುಕಿನ ಕನಸು, ನಾಳೆಯ ಭರವಸೆ ಎಲ್ಲವೂ ಕೋವಿಡ್ ಅಲೆಯಲ್ಲಿ ಕೊಚ್ಚಿ ಹೋಗಿದೆ. ಇಂಥ ಸಮಯದಲ್ಲಿ ಏನಾದರೂ ಮಾಡುವ ಎನ್ನುವವರು, ಬದಕಿನಲ್ಲಿ ಹೊಸ ನಂಬಿಕೆಯನ್ನು ಕಂಡು ಕೊಂಡಿದ್ದಾರೆ. ಕೋವಿಡ್ 19 ಭೀತಿ, ಆವಾಂತರದ ನಡುವೆ ಒಂದಿಷ್ಟು ಜನ ನಮ್ಮ ಪಾಲಿಗೆ, ಈ ಸಮಾಜದ ದೃಷ್ಟಿಗೆ ಶಹಬ್ಬಾಸ್ ಎನ್ನುವ ಹೊಗಳಿಕೆ ಹಾಗೂ ಶ್ರೇಷ್ಠವಾದ ಗೌರವವನ್ನು ಪಡೆದಿದ್ದಾರೆ ಅಂಥವರ ಸಾಲಿನಲ್ಲಿ ವೈದ್ಯ ಲೋಕ ಮೊದಲಾಗಿ ನಿಲ್ಲುತ್ತದೆ. ಅದರೊಂದಿಗೆ ಕೋವಿಡ್ ವಾರಿಯರ್ಸ್ ಎಂದು ಕರೆಯಲ್ಪಡುವ ಪೊಲೀಸ್ ಇಲಾಖಾ ಸಿಬ್ಬಂದಿಗಳು ಇದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದೆ. ಜನ ಹೇಗೂ ತಮ್ಮ ಜೀವ ಉಳಿದು ಬಿಡಲಿ ಎಂದು ಜೀವದ ಆಸೆಯನ್ನು ಮಾಸ್ಕ್ ನ ಅಡಿಯಲ್ಲಿ ಬಚ್ಚಿಕೊಂಡು ದಿನ ದೂಡುತ್ತಿದ್ದಾರೆ. ಎಷ್ಟೇ ಜಾಗ್ರತೆವಹಿಸಿದರು ಕಾಣದ ವೈರಸ್ ಮಾನವ ದೇಹದೊಳಗೆ ಹೊಕ್ಕು ನೆಮ್ಮದಿಯ ದಿನಗಳನ್ನು ಪ್ರಪಂಚದಿಂದಲೇ ದೂರ ಮಾಡಿ ಬಿಟ್ಟಿದೆ.ಸಾರಿಗೆ ಸೌಲಭ್ಯ ಅಂಗಡಿ ವಹಿವಾಟು ಎಲ್ಲವೂ ಮುಚ್ಚಿರುವ ಈ ಸಮಯದಲ್ಲಿ ಇಲ್ಲೊಂದಿಷ್ಟು ಮಾನವೀಯತೆಯ ಹೃದಯಗಳು ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಅದು ದೇಹದ ಹಂಗು ಬಿಟ್ಟು ಬಡವ ನಿರ್ಗತಿಕರ ಸಹಾಯಕ್ಕೆ ನಿಂತ ಕೆಲಸ.
ಪ್ರತಿ ನಿತ್ಯ ದುಡಿದು, ಸಂಸಾರದ ನೌಕೆಯನ್ನು ನಾವಿಕನಾಗಿ ಸಾಗಿಸಬೇಕಾದ ವೃತ್ತಿಯಲ್ಲಿ ಆಟೋ ಚಾಲಕರು ಸೇರುತ್ತಾರೆ. ಅಂಥ ಆಟೋ ಚಾಲಕರು ಸದ್ಯ ಕೆಲಸವೇ ಇಲ್ಲದೆ ಮನೆಯಲ್ಲಿ ಕೂತು ದಿನ ದೂಡುವ, ನಾಳೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆ ಬೆಳಕಿನ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಇಲ್ಲೊಂದಿಷ್ಟು ಆಟೋ ಚಾಲಕರು ಇಂಥ ಕಷ್ಟದ ಸಮಯದಲ್ಲೂ ಇನ್ನೊಬ್ಬರಿಗೆ ಸಹಾಯ ಮಾಡುವ ಮಾಹನ್ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅಯಾಜ್ ಎನ್ನುವ ಆಪತ್ಫಾಂದವ : ಅಯಾಜ್ ತನ್ನ ‘KHIDMAT’ ಎನ್ನುವ ಆಟೋದಲ್ಲಿ ಉಚಿತ ಸೇವೆಯನ್ನು ನೀಡುತ್ತಿದ್ದಾರೆ. ಅಗತ್ಯವಿರುವವರಿಗಾಗಿ,ಹಾಗೂ ಕೋವಿಡ್ ಕಾರ್ಯಕರ್ತರನ್ನು ಉಚಿತವಾಗಿ ಆಸ್ಪತ್ರೆಗೆ ಬಿಟ್ಟು ಬರುತ್ತಾರರೆ.ಅನಾರೋಗ್ಯರಾಗಿರುವವನ್ನು ಉಚಿತವಾಗಿ ಆಟೋದಲ್ಲಿ ಬಿಟ್ಟು ಬರುತ್ತಾರೆ. ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಇದುವರೆಗೂ ಸುಮಾರು 200 ಕ್ಕೂ ಅಧಿಕ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿದ್ದಾರೆ.ಬಡವರಿಗಾಗಿ ಸದಾ ಅಯಾಜ್ ಸೇವೆ ಮಾಡುತ್ತಾ ಬಂದಿದ್ದಾರೆ. ಹಿಂದೆ ಎನ್ .ಜಿ, ಓ ನ ಊಟವನ್ನು ಉಚಿತವಾಗಿ ನೀಡುತ್ತಿದ್ದರು.
ಶಿಥಲ್ ಸರೋಡ್ : ಮುಂಬೈ ಮೂಲದ ಆಟೋ ಡ್ರೈವರ್ ಶಿಥಲ್.ಉಚಿತವಾಗಿ ಅನಾರೋಗ್ಯ ಹಾಗೂ ಬಡವರಿಗೆ ತನ್ನ ಆಟೋದಲ್ಲಿ ಬಿಟ್ಟು ಬರುತ್ತಾರೆ. ಸಂಸಾರದ ಹೊಟ್ಟೆ ಭರ್ತಿಗಾಗಿ ದುಡಿಯುವ ಶಿಥಲ್ ಈ ಸಮಯದಲ್ಲಿ ಮಾನವೀಯತೆಯನ್ನು ಸಾರುತ್ತಿರುವುದು ನಿಜಕ್ಕೂ ಗ್ರೇಟ್.
ಪುರುಷೋತ್ತಮ್ಲಾಲ್ ಗುಪ್ತಾ : ಥಾಣೆಯ ಆಟೋ ಚಾಲಕನಾಗಿರುವ ಇವರು, ಸಹಾಯಕ್ಕಾಗಿ ಹಣ ಸಂಗ್ರಹಿಸಿ ಅದರ ಮೂಲಕ ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದಿನಕೂಲಿ ಕಾರ್ಮಿಕರಿಗಾಗಿ ಇವರು ಹಣ ಸಂಗ್ರಹಿಸಿ ಅದರಲ್ಲಿ ಆಹಾರ ಕಿಟ್ ಗಳನ್ನು ಬಡವರಿಗೆ ಹಸ್ತಾಂತರ ಮಾಡುತ್ತಿದ್ದಾರೆ.
ಇವರಿಷ್ಟು ಮಾತ್ರವಲ್ಲ ದೇಶದೆಲ್ಲೆಡೆ ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮನ್ನು ತಾವು ಸಹಾಯದ ಅಸ್ತ್ರವಾಗಿಸಿಕೊಂಡು, ಸಹಾಯ ಮಾಡಿದವರು, ಇನ್ನೊಬ್ಬರ ಸಂಕಷ್ಟಕ್ಕೆ ಸಹಕಾರ ಹೆಗಲು ಕೊಟ್ಟವರು ತುಂಬ ಮಂದಿ ಇದ್ದಾರೆ. ಕೋವಿಡ್ ಲಸಿಕೆಯ ಸವಾಲಿಗಾಗಿ ಕೇರಳದಲ್ಲಿ ಪುಟ್ಟ ಹುಡುಗನೊಬ್ಬ ತನ್ನ ಉಳಿತಾಯದ ಡಬ್ಬಿಯ ಹಣವನ್ನು ಕೊಟ್ಟದ್ದನ್ನು ನೆನಪಿಸಿಕೊಳ್ಳಬಹುದು. ಮಾನವನಿಗೆ ಮಾನವೀಯತೆಯೇ ಮುಖ್ಯ ಅಲ್ವಾ .?
ಸುಹಾನ್ ಶೇಕ್