Advertisement

ಆಟೋ ಚಾಲಕರ ಬದುಕು ದುಸ್ತರ

08:02 AM Jul 12, 2019 | Suhan S |

ಹುಬ್ಬಳ್ಳಿ: ಪೆಟ್ರೋಲ್ ದರ ಹೆಚ್ಚಳ ಹಾಗೂ ಓಲಾ ಟ್ಯಾಕ್ಸಿ ಹೊಡೆತದಿಂದ ಹುಬ್ಬಳ್ಳಿ-ಧಾರವಾಡ ಆಟೋರಿಕ್ಷಾ ಚಾಲಕರು ನಿರೀಕ್ಷಿತ ದುಡಿಮೆ ಸಿಗದೆ ಆತಂಕಕ್ಕೊಳಗಾಗಿದ್ದಾರೆ.

Advertisement

ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಪೆಟ್ರೋಲ್ ಸುಂಕ ಹೆಚ್ಚಿಸಿದೆ. ಇನ್ನೊಂದೆಡೆ ಆಟೋಗಳಿಗೆ ಮೀಟರ್‌ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಒತ್ತಡ ಹೆಚ್ಚುತ್ತಿದೆ. ಮಳೆಯಿಂದಾಗಿ ರಸ್ತೆಗಳ ಸ್ಥಿತಿ ಹದಗೆಟ್ಟಿರುವುದರಿಂದ ಆಟೋಗಳ ನಿರ್ವಹಣಾ ವೆಚ್ಚ ಕೂಡ ಹೆಚ್ಚಾಗುತ್ತಿದೆ.

ಅವಳಿ ನಗರದಲ್ಲಿ ಅಟೋಗಳ ಸಂಖ್ಯೆ ದಿನದಿಂದ ಹೆಚ್ಚಾಗುತಿದ್ದು, ಇದು ಕೂಡ ಆಟೋ ಚಾಲಕರ ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ. ಒಂದೆರಡು ವರ್ಷ ಹೊಸ ಆಟೋಗಳಿಗೆ ಪರ್ಮಿಟ್ ನೀಡಬಾರದೆಂದು ಕೆಲ ಆಟೋರಿಕ್ಷಾ ಚಾಲಕರ ಸಂಘಗಳು ಒತ್ತಡ ಹೇರುತ್ತಿದ್ದರೂ ಹೊಸ ಆಟೋರಿಕ್ಷಾಗಳು ರಸ್ತೆಗಿಳಿಯುತ್ತಿರುವುದರಿಂದ ಸ್ಪರ್ಧೆ ಹೆಚ್ಚಾಗಿದೆ. ಆಟೋ ಸಂಖ್ಯೆ ಹೆಚ್ಚಾಗಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಳೇ ಬಸ್‌ನಿಲ್ದಾಣ, ಚನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ, ರೈಲು ನಿಲ್ದಾಣ ಸೇರಿದಂತೆ ಹಲವೆಡೆ ಅಟೋಗಳಿಂದಾಗಿ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಹೊರೆ ಯಾರ ಮೇಲೆ?: ಕೆಲವೇ ಶಾಲೆಗಳು ವಿದ್ಯಾರ್ಥಿಗಳನ್ನು ಕರೆದೊಯ್ಯಲು ವ್ಯಾನ್‌ ಹಾಗೂ ಬಸ್‌ಗಳ ವ್ಯವಸ್ಥೆ ಮಾಡಿವೆ. ಉಳಿದ ವಿದ್ಯಾರ್ಥಿಗಳು ಬಸ್‌ ಅಥವಾ ಆಟೋರಿಕ್ಷಾಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಪಾಲಕರಿಬ್ಬರೂ ಹೊರಗೆ ದುಡಿಯುತ್ತಿದ್ದರೆ ಮಕ್ಕಳನ್ನು ಶಾಲೆಗೆ ಕಳಿಸಲು ಹಾಗೂ ಕರೆತರಲು ಆಟೋಗಳನ್ನು ಅವಲಂಬಿಸುತ್ತಾರೆ. ತೈಲ ಬೆಲೆ-ನಿರ್ವಹಣಾ ವೆಚ್ಚ ಹೆಚ್ಚಳದ ಹೊರೆಯನ್ನು ಹೊರಲು ಪಾಲಕರೂ ಸಿದ್ಧರಿಲ್ಲ, ಆಟೋ ಚಾಲಕರಿಗೂ ಸಾಧ್ಯವಾಗುತ್ತಿಲ್ಲ. ಪರಿಣಾಮಬೇರೆ ಉದ್ಯೋಗದತ್ತ ಚಿಂತಿಸುವ ಸ್ಥಿತಿ ಎದುರಾಗಿದೆ.

ಪ್ರತಿ ಆಟೋದಲ್ಲಿ ಗರಿಷ್ಠ 6 ವಿದ್ಯಾರ್ಥಿಗಳನ್ನು ಮಾತ್ರ ಕರೆದೊಯ್ಯಬೇಕೆಂಬ ಆದೇಶ ವಿದ್ಯಾರ್ಥಿಗಳ ಸಂಚಾರವನ್ನೇ ನಂಬಿಕೊಂಡು ಬದುಕುತ್ತಿರುವ ಸಹಸ್ರಾರು ಆಟೋರಿಕ್ಷಾ ಚಾಲಕರನ್ನು ಚಿಂತೆಗೀಡು ಮಾಡಿದೆ.

Advertisement

ಸ್ಥಳಾಂತರ ಪಜೀತಿ: ಬಿಆರ್‌ಟಿಎಸ್‌ ಯೋಜನೆಗಾಗಿ ರಸ್ತೆ ಅಗಲೀಕರಣ ಮಾಡಿದ್ದರಿಂದ ಹು-ಧಾ ಮಧ್ಯದ ನಿಲ್ದಾಣಗಳನ್ನು ಆಶ್ರಯಿಸಿದ್ದ ಆಟೋಗಳು ಬೇರೆಡೆ ಸ್ಥಳಾಂತರ ಮಾಡುವಂತಾಗಿದೆ. ನಿಲ್ದಾಣಗಳಲ್ಲಿ ಬಸ್‌ ಇಳಿಯುವ ಜನರಿಗೆ ಸೇವೆ ಒದಗಿಸುತ್ತಿದ್ದ ಆಟೋರಿಕ್ಷಾ ಚಾಲಕರಿಗೆ ರಸ್ತೆ ಪಕ್ಕದಲ್ಲಿ ಆಟೋಗಳನ್ನು ನಿಲ್ಲಿಸಲು ಜಾಗ ಇಲ್ಲದಂತಾಗಿದೆ. ಅಲ್ಲದೇ ಬಿಆರ್‌ಟಿಎಸ್‌ ರಸ್ತೆಗೆ ವಿಭಜಕ ಹಾಕಿರುವುದರಿಂದ ಇತರ ವಾಹನಗಳು ಸಂಚರಿಸುವ ಮಾರ್ಗದ ಪಕ್ಕದಲ್ಲಿ ಆಟೋಗಳನ್ನು ನಿಲ್ಲಿಸಲು ಅವಕಾಶ ಇಲ್ಲದಂತಾಗಿದೆ.

ಹುಬ್ಬಳ್ಳಿಯಲ್ಲಿ 17,000 ಆಟೋರಿಕ್ಷಾಗಳಿದ್ದರೆ, ಧಾರವಾಡದಲ್ಲಿ ಸುಮಾರು 9,000 ಆಟೋರಿಕ್ಷಾಗಳಿವೆ. ಅವಳಿ ನಗರದಲ್ಲಿ ಸುಮಾರು 4000 ಆಟೋರಿಕ್ಷಾಗಳು ಶಾಲಾ ಮಕ್ಕಳಿಗೆ ಸೇವೆ ನೀಡುತ್ತಿವೆ. ಆಟೋರಿಕ್ಷಾ ಚಾಲಕರ ಕುಟುಂಬದ ಸದಸ್ಯರು, ಆಟೋ ಮಾಲೀಕರು, ಗ್ಯಾರೇಜ್‌ನವರು ಸೇರಿದಂತೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಟೋರಿಕ್ಷಾಗಳನ್ನು ಅವಲಂಬಿಸಿದ್ದಾರೆ.
ನಮಗೂ ತೆರೆಯಿರಿ ಏರ್‌ಪೋರ್ಟ್‌ ಬಾಗಿಲು:

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಮಾನ ನಿಲ್ದಾಣದೊಳಗೆ ಬರಲು ಅವಕಾಶ ನೀಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ವಿಮಾನ ನಿಲ್ದಾಣ ನಿರ್ದೇಶಕರು ಸ್ಪಂದಿಸಿಲ್ಲ ಎಂಬುದು ಆಟೋ ಚಾಲಕರ ಅಳಲು.
ಕೇವಲ ಅವಳಿ ನಗರದಲ್ಲಷ್ಟೇ ಅಲ್ಲ, ಉತ್ತರ ಕರ್ನಾಟಕದ ನಗರಗಳಲ್ಲಿ ಆಟೋರಿಕ್ಷಾ ಚಾಲಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗಬೇಕಿದೆ. ಆಟೋ ಅವಲಂಬಿಸಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಆಟೋಗಳ ಸಂಖ್ಯೆಯಲ್ಲಿ ಹೆಚ್ಚಳ, ಪರ್ಮಿಟ್ ಶುಲ್ಕದಲ್ಲಿ ಹೆಚ್ಚಳ, ಹೆಚ್ಚುತ್ತಿರುವ ಇಂಧನದ ಬೆಲೆ ಚಾಲಕರ ಬದುಕನ್ನು ತ್ರಾಸದಾಯಕವಾಗಿಸಿವೆ. • ಶೇಖರಯ್ಯ ಮಠಪತಿ, ಉಕ ಆಟೋ ಚಾಲಕರ ಒಕ್ಕೂಟದ ಅಧ್ಯಕ್ಷ
•ವಿಶ್ವನಾಥ ಕೋಟಿ
Advertisement

Udayavani is now on Telegram. Click here to join our channel and stay updated with the latest news.

Next