ಅಭಿಮಾನಿಗಳ ಅಭಿಮಾನವೇ ಅಂಥದ್ದು. ಅದರಲ್ಲೂ ತಮ್ಮ ಪ್ರೀತಿಯ ನಾಯಕನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ ಅಂದಮೇಲೆ ಕೇಳಬೇಕೆ? ಆ ಅಭಿಮಾನ ಎಂದಿಗಿಂತಲೂ ಕೊಂಚ ಜೋರಾಗಿಯೇ ಇರುತ್ತೆ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ. “ಗೀತಾ’ ಚಿತ್ರದ್ದು. ಗಣೇಶ್ ಅಭಿನಯದ ಈ ಚಿತ್ರ ಸೆ.27 ರಂದು ತೆರೆಗೆ ಬರುತ್ತಿದೆ. “ಗೀತಾ’ ಅಂದಾಕ್ಷಣ, ನೆನಪಾಗೋದೇ ಶಂಕರ್‌ನಾಗ್. ಹಾಗಂತ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ.
ಆದರೆ, ಗಣೇಶ್ ಅಭಿನಯದ ಚಿತ್ರಕ್ಕೆ “ಗೀತಾ’ ಅನ್ನೋ ಹೆಸರು ಇಟ್ಟಿರುವ ವಿಷಯ ಕೇಳಿದ ಶಂಕರ್‌ನಾಗ್ ಅಭಿಮಾನಿಗಳು ಸಹ ಚಿತ್ರವನ್ನು ನೋಡುವ ಕಾತುರದಲ್ಲಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ಆಟೋ ಚಾಲಕರು ಅಭಿಮಾನ ಮೆರೆದಿದ್ದಾರೆ ಕೂಡ. ಗೀತಾ ಚಿತ್ರದ ಗಣೇಶ್ ಅವರ ಭಾವಚಿತ್ರವನ್ನು ತಮ್ಮ ಆಟೋಗೆ ಅಂಟಿಸಿಕೊಂಡು ಕನ್ನಡ ಬಾವುಟ ಕಟ್ಟಿಕೊಂಡು ಮೆರವಣಿಗೆ ಮಾಡುವ ಮೂಲಕ “ಗೀತಾ’ ಚಿತ್ರದ ಪ್ರಚಾರ ಶುರುಮಾಡಿದ್ದಾರೆ.
ಆಟೋ ಚಾಲಕ ಅಭಿಮಾನಿಗಳು ಶಂಕರ್‌ನಾಗ್ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ. ಅತ್ತ, ಆಟೋ ಚಾಲಕರ ಗಣೇಶ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಕೂಡ ಗಣೇಶ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಚಿತ್ರಕ್ಕೆ ಶುಭ ಹಾರೈಸುವುದರ ಜೊತೆಗೆ ಕಿಲೋಮೀಟರ್‌ಗಟ್ಟಲೆ ಆಟೋ ಚಲಾಯಿಸುವ ಮೂಲಕ ಮೆರವಣಿಗೆ ನಡೆಸಿ ಅಭಿಮಾನ ಮೆರೆಯುತ್ತಿದ್ದಾರೆ.
ಈಗಾಗಲೇ “ಗೀತಾ’ ಚಿತ್ರಕ್ಕೆ ಪುನೀತ್‌ರಾಜಕುಮಾರ್ ಅವರು ಹಾಡಿದ್ದ “ಕನ್ನಡ ಕನ್ನಡ ಕನ್ನಡವೇ ಸತ್ಯ… ಹಾಡಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿತ್ತು. “ಹೇಳದೆ ಕೇಳದೆ..’ ಎಂಬ ಹಾಡು ಕೂಡ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಜೇಶ್ ಕೃಷ್ಣನ್ ಹಾಗೂ ಅನನ್ಯ ಭಟ್ ಹಾಡಿದ ಈ ಹಾಡು 1980 ರ ಬ್ಯಾಕ್ ಡ್ರಾಪ್‌ನಲ್ಲಿ ಮೂಡಿಬಂದಿದ್ದು, ಗಣೇಶ್ ಮತ್ತು ನಾಯಕಿ ಪಾರ್ವತಿ ಆ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಎರಡು ಹಾಡಿನ ಬಳಿಕ ಚಿತ್ರತಂಡ, ಟ್ರೇಲರ್ ಬಿಡುಗಡೆ ಮಾಡಿದ್ದು, ಆ ಟ್ರೇಲರ್ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.
ಟ್ರೇಲರ್ ನೋಡಿದರೆ, ಮಾಸ್ ಮತ್ತು ಕ್ಲಾಸ್ ಎರಡು ಅಂಶಗಳ ಜೊತೆಗೆ ಮುದ್ದಾದ ಲವ್‌ಸ್ಟೋರಿ ಹೊಂದಿರುವ ಚಿತ್ರ ಎಂಬುದನ್ನು ಸಾರುತ್ತದೆ. ಅದರಲ್ಲೂ ಇಲ್ಲಿ ಗಣೇಶ್ ಅವರು ಅಪ್ಪಟ ಕನ್ನಡ ಹೋರಾಟಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ಅದೇ ಚಿತ್ರದ ಹೈಲೈಟ್‌ಗಳಲ್ಲೊಂದು. ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತವಿದೆ. ಶ್ರೀಶ ಛಾಯಾಗ್ರಹಣವಿದೆ. ಚಿತ್ರವನ್ನು ಸೈಯ್ಯದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ನಿರ್ಮಿಸುತ್ತಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನವಿದೆ.