ಬೆಂಗಳೂರು: ದಾಸರಹಳ್ಳಿಯ 8ನೇ ಮೈಲಿ ಅಟೋಸ್ಟಾಂಡ್‌ನಲ್ಲಿ ಪರಿಚಿತರ ಸೋಗಲ್ಲಿ ಬಂದ ವ್ಯಕ್ತಿಯೊಬ್ಬ ಚಾಲಕನಿಗೆ ಮದ್ಯಪಾನ ಮಾಡಿಸಿ ಆಟೋ ಕಳ್ಳತನ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ವಿಜಯ್ ಕುಮಾರ್ ಆಟೋ ಕಳೆದುಕೊಂಡವರು.
ಆ.17ರಂದು ಮಧ್ಯಾಹ್ನ ಹಳೆಯ ಅಟೋವೊಂದರಲ್ಲಿ ಬಂದಿದ್ದ ಅಪರಿಚಿತ ಆಟೋ ಚಾಲಕನೊಬ್ಬ ವಿಜಯ್ ಕುಮಾರ್ ಬಳಿ ಬಂದು ಪರಿಚಿತರ ಸೋಗಿನಲ್ಲಿ ಮಾತನಾಡಿದ್ದ. ಈ ಆಟೋ ಸ್ಟ್ಯಾಂಡ್ ನಲ್ಲಿ ಎಷ್ಟು ದುಡ್ಡು ಬಾಡಿಗೆ ಸಿಗುತ್ತದೆ ಎಂಬಿತ್ಯಾದಿ ಮಾಹಿತಿ ಪಡೆದಿದ್ದ. ಬಳಿಕ ಪಕ್ಕದಲ್ಲಿರುವ ಬಾರ್‌ಗೆ ಹೋಗಿ ಮದ್ಯಪಾನ ಮಾಡೋಣವೆಂದು ವಿಜಯ್ ಕುಮಾರ್‌ಅನ್ನು ಕರೆದುಕೊಂಡು ಹೋಗಿದ್ದ. ಆತನ ಮಾತಿನ ಮೋಡಿಗೆ ಮರುಳಾದ ವಿಜಯಕುಮಾರ್ ಆಟೋ ನಿಲ್ದಾಣದಲ್ಲೇ ತಮ್ಮ ಆಟೋಯಿಟ್ಟು ಆತನ ಜೊತೆಗೆ ಬಾರ್‌ಗೆ ಹೋಗಿ ಮದ್ಯಪಾನ ಮಾಡಿದ್ದರು.
ಮದ್ಯಪಾನ ಮಾಡಿ ಸ್ವಂತ ಆಟೋದಲ್ಲಿ ಮಲಗಬಾರದು ಎಂದು ಹೇಳಿದ ಅಪರಿಚಿತ ಆತನ ಹಳೆಯ ಆಟೋದಲ್ಲಿ ವಿಜಯ್‌ಕುಮಾರ್‌ಗೆ ಮಲಗುವಂತೆ ಸೂಚಿಸಿದ್ದ. ಅದರಂತೆ ವಿಜಯ್ ಕುಮಾರ್ ಹಳೆಯ ಆಟೋದಲ್ಲೇ ನಿದ್ದೆಗೆ ಜಾರಿದ್ದರು.
ಇದೇ ಸಮಯಕ್ಕೆ ಕಾದು ಕುಳಿತಿದ್ದ ಅಪರಿಚಿತ ವ್ಯಕ್ತಿ ತನ್ನ ಹಳೆಯ ಆಟೋವನ್ನು ಅಲ್ಲೇ ಬಿಟ್ಟು ವಿಜಯ್ ಕುಮಾರ್ ಅವರ ಹೊಸ ಆಟೋದಲ್ಲಿ ಪರಾರಿಯಾಗಿದ್ದಾನೆ. ವಿಜಯ್ ಕುಮಾರ್ ನಿದ್ದೆಯಿಂದ ಎದ್ದಾಗ ಆಟೋ ಕಾಣದೇ ಕಂಗಾಲಾಗಿ ಪಕ್ಕದಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆಟೋ ಕಳ್ಳತನ ಮಾಡಿರುವುದು ಕಂಡು ಬಂದಿತ್ತು.
ಕೂಡಲೇ ಈ ಬಗ್ಗೆ ಪೀಣ್ಯ ಪೊಲೀಸರಿಗೆ ವಿಜಯ್ ಕುಮಾರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಹಳೆಯ ಆಟೋವನ್ನು ಸುದ್ದಗುಂಟೆಪಾಳ್ಯದಲ್ಲಿ ಕದ್ದಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಹೀಗಾಗಿ ಆ ಆಟೋವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಅಟೋದಲ್ಲಿದ್ದ 25 ಸಾವಿರ ಬೆಲೆಬಾಳುವ ವಿಜಯ್‌ಕುಮಾರ್ ಮೊಬೈಲ್ ಸಹ ಅಪರಿಚಿತ ಕದ್ದಿದ್ದಾನೆ ಎಂದು ತಿಳಿದು ಬಂದಿದೆ.