Advertisement

ಆಟೋ ಚಾಲಕನಿಗೆ “ಪುಸ್ತಕ ಬಿಡುಗಡೆ ಭಾಗ್ಯ’

12:54 AM Apr 22, 2019 | Team Udayavani |

ಬೆಂಗಳೂರು: ರವಿವಾರ ಸಂಜೆ ಹಾಸ್ಯ ಲೇಖಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಾಹಿತ್ಯಾಸಕ್ತರೆಲ್ಲಾ ಸೇರಿದ್ದರು. ಉದ್ಘಾಟನೆಯಾಗಿ ಮುಖ್ಯ ಅತಿಥಿಯ ಭಾಷಣ ಮುಗಿದರೂ ಕೃತಿ ಬಿಡುಗಡೆಯ ಸುಳಿವೇ ಇರಲಿಲ್ಲ. ಸಭಿಕರೇ ಈ ಬಗ್ಗೆ ಪ್ರಶ್ನಿಸಿದಾಗ, ಆಯೋಜಕರು ಗಡಿಬಿಡಿಯಲ್ಲಿ ಪುಸ್ತಕಗಳನ್ನು ಆಟೋದಲ್ಲಿ ಬಿಟ್ಟು ಬಂದಿರುವ ವಿಚಾರ ಗೊತ್ತಾಯಿತು. ಕೈಯಲ್ಲಿದ್ದ ಒಂದು ಕೃತಿಯನ್ನೇ ಪ್ರದರ್ಶಿಸುತ್ತಾ ಸಮಾಧಾನಪಡುವಾಗ “ಅತಿಥಿ’ಯ ಪ್ರವೇಶವಾಯಿತು.

Advertisement

ಆ ಅತಿಥಿ ಆಟೋ ಚಾಲಕ. ತನ್ನ ಆಟೋದಲ್ಲಿ ಪ್ರಕಾಶಕರು ಮರೆತು ಬಿಟ್ಟುಹೋಗಿದ್ದ ಪುಸ್ತಕಗಳನ್ನು ಹೊತ್ತು ತಂದು ಕಾರ್ಯಕ್ರಮದಲ್ಲಿ ಮೂಡಿದ್ದ ಆತಂಕ ನಿವಾರಿಸಿದ. ಕೊನೆಗೆ ಅತಿಥಿಗಳು ಆಟೋ ಚಾಲಕನಿಂದಲೇ ಕೃತಿ ಲೋಕಾರ್ಪಣೆ ಮಾಡಿಸಿ ಗೌರವಿಸಿದರು.

ಹೀಗೊಂದು ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಿದ್ದು, ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು. ಅದು ಬನಶಂಕರಿ ಬಳಿಯ ಕಾವೇರಿ ನಗರದ ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕೃತಿ ಬಿಡುಗಡೆ ಸಮಾರಂಭ. ಆಯೋಜಕರು ಕಾರ್ಯಕ್ರಮವನ್ನು ಸಜ್ಜುಗೊಳಿಸುವ ಭರದಲ್ಲಿ ಸಮಾರಂಭದ ಕೇಂದ್ರ ಬಿಂದುವಾಗಿದ್ದ ಕೃತಿಗಳನ್ನೇ ಆಟೋರಿಕ್ಷಾದಲ್ಲಿ ಬಿಟ್ಟು ಬಂದು ಪೇಚಿಗೆ ಸಿಲುಕಿದ್ದರು.

ಆದರೆ ಸಮಯ ಪ್ರಜ್ಞೆಯಿಂದ ಸಕಾಲಕ್ಕೆ ಕೃತಿಗಳನ್ನು ಹೊತ್ತು ತಂದ ಆಟೋ ಚಾಲಕ ರಮೇಶ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾತ್ರವಲ್ಲದೇ ಕೃತಿ ಬಿಡುಗಡೆಗೊಳಿಸಿದ ಹಿರಿಮೆಗೂ ಪಾತ್ರರಾದರು. ಕಳೆಗುಂದಿದಂತಿದ್ದ ಸಮಾರಂಭಕ್ಕೆ ಮೆರುಗು ತಂದರು.

ಹಾಸ್ಯ ಲೇಖಕ ನಾಗರಾಜ ಕೋಟೆ ಅವರ “ಕೋಟೆ ನಾಗನ ಕಾಮಿಡಿ ಕಗ’ ಪುಸ್ತಕ ಲೋಕಾರ್ಪಣೆ ಮತ್ತು “ನಾಗರಾಜ-54ರ ಅಭಿನಂದನೆ’ ಸಮಾರಂಭ ಭಾನುವಾರ ಸಂಜೆ ಆಯೋಜನೆಯಾಗಿತ್ತು. ಪ್ರತಿಷ್ಠಾನದ ಅಧ್ಯಕ್ಷ ಪುಟ್ಟರಾಜು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಡುಗಡೆಯಾಗಿಬೇಕಿದ್ದ ಕೃತಿಗಳ ಪ್ರತಿಗಳೊಂದಿಗೆ ಆಟೋರಿಕ್ಷಾದಲ್ಲಿ ಪರಿಷತ್‌ ತಲುಪಿದರು. ಗಡಿಬಿಡಿಯಲ್ಲಿ ಪುಸ್ತಕಗಳನ್ನು ವಾಹನದಲ್ಲೇ ಮರೆತು ಸಿದ್ಧತೆಯಲ್ಲಿ ತೊಡಗಿದ್ದರು.

Advertisement

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಪುಸ್ತಕಗಳು ಇಲ್ಲದಿರುವುದು ಗೊತ್ತಾಗುತ್ತಿದ್ದಂತೆ ಲೇಖಕರು ಸಿಟ್ಟಾದರು. ಆದರೂ ಆಯೋಜಕರು ಪರಿಸ್ಥಿತಿ ನಿಭಾಯಿಸಿದರು. ಉದ್ಘಾಟನೆ, ಮುಖ್ಯ ಅತಿಥಿ ಭಾಷಣವಾದರೂ ಪುಸ್ತಕ ಬಿಡುಗಡೆಯ ಪ್ರಸ್ತಾಪವೇ ಆಗದಿದ್ದುದು ಸಭಿಕರಲ್ಲೂ ಕಸಿವಿಸಿ ಉಂಟು ಮಾಡಿತ್ತು. ಇಷ್ಟಾದರೂ ಸಮಾಧಾನ ಚಿತ್ತದಿಂದಲೇ ಮುಖ್ಯ ಅತಿಥಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಅವರು ಕೃತಿಯ ಮುಖಪುಟ ಪ್ರದರ್ಶಿಸಿ ಸಮಾಧಾನಪಡಿಸುವ ಪ್ರಯತ್ನದಲ್ಲಿದ್ದರು.

ಆ ವೇಳೆಗೆ ಸರಿಯಾಗಿ ಆಟೋ ಚಾಲಕ ರಮೇಶ್‌, ಕೃತಿಗಳೊಂದಿಗೆ ಸಭಾಂಗಣ ಪ್ರವೇಶಿಸಿದರು. ಕೃತಿಗಳೊಂದಿಗಿದ್ದ ಆಹ್ವಾನ ಪತ್ರಿಕೆ ಗಮನಿಸಿ ಕಾರ್ಯಕ್ರಮಕ್ಕೆ ಪುಸ್ತಕಗಳನ್ನು ತಂದ ರಮೇಶ್‌ ಅವರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಲ್ಲೇಪುರಂ ಜಿ. ವೆಂಕಟೇಶ್‌, ರಮೇಶ್‌ ಅವರಿಂದಲೇ ಕೃತಿ ಲೋಕಾರ್ಪಣೆ ಮಾಡಿಡಿದರು. ಸಭಿಕರೂ ಜೋರಾಗಿ ಚಪ್ಪಾಳೆ ತಟ್ಟಿ ರಮೇಶ್‌ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ “ಉದಯವಾಣಿ’ಯೊಂದಿಗೆ ಮಾತನಾಡಿದ ರಮೇಶ್‌, “ನನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಪುಸ್ತಕಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದೆ. ನನ್ನ ಪ್ರಾಮಾಣಿಕತೆಗೆ ಪುಸ್ತಕ ಬಿಡುಗಡೆ ಸುಯೋಗ ಸಿಕ್ಕಿತು. ಜತೆಗೆ ಸನ್ಮಾನ ಭಾಗ್ಯವೂ ದೊರೆಯಿತು,’ ಎಂದು ಸಂತಸ ವ್ಯಕ್ತಪಡಿಸಿದರು.

“ರಾಮನಗರ ಮೂಲದ ನಾನು ಗಿರಿನಗರದಲ್ಲಿ ವಾಸವಾಗಿದ್ದೇನೆ. ಇಂತಹ ಘಟನೆಗಳು ಬಹಳಷ್ಟು ನಡೆದಿವೆ. ಹಲವು ವಸ್ತುಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿದ ಖುಷಿ ನನಗಿದೆ,’ ಎಂದರು.

ಬಿಡುಗಡೆ ಆಗಬೇಕಿದ್ದ ಪುಸ್ತಕಗಳೇ ಇಲ್ಲದೆ ಕಾರ್ಯಕ್ರಮ ಕಳೆಗುಂದಿತ್ತು. ಸಮಯಕ್ಕೆ ಸರಿಯಾಗಿ, ತಾವೇ ವಿಳಾಸ ಪತ್ತೆಹಚ್ಚಿದ ರಮೇಶ್‌, ಸಮಾರಂಭ ನಡೆಯುತ್ತಿದ್ದ ಸ್ಥಳಕ್ಕೆ ಪುಸ್ತಕ ತಂದುಕೊಟ್ಟಾಗ ಆದ ಸಂತೋಷ ಅಷ್ಟಿಷ್ಟಲ್ಲ.
-ಎಂ.ಪುಟ್ಟರಾಜು, ವಿಶ್ವಮಾನ ಸಾಂಸ್ಕೃತಿಕ ಪ್ರತಿಷ್ಠಾನ

Advertisement

Udayavani is now on Telegram. Click here to join our channel and stay updated with the latest news.

Next