ಬೆಂಗಳೂರು: ಆಟೋಗೆ ದುಪ್ಪಟ್ಟು ಬಾಡಿಗೆ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಆಟೋ ಚಾಲಕನೊಬ್ಬ ಎಎಸ್‌ಐ ಎದೆಗೆ ಕಾಲಿನಿಂದ ಒದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 6ರಂದು ರಾತ್ರಿ ಬಾಳೆಕುಂದ್ರಿ ಸರ್ಕಲ್‌ನಲ್ಲಿ ಘಟನೆ ನಡೆದಿದೆ.
ಈ ಕುರಿತು ನಗರ ಅಪರಾಧ ದಾಖಲಾತಿಗಳ ಸಂಗ್ರಹ ಘಟಕದ (ಸಿಸಿಆರ್‌ಬಿ) ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕರಿಯಣ್ಣ ವಿ. (57) ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಮುಜಾಹಿದ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಎಸ್‌ಐ ಕರಿಯಣ್ಣ ಶಿವಾಜಿನಗರದಲ್ಲಿ ವಾಸವಿದ್ದು, ಬುಧವಾರ ರಾತ್ರಿ 8.30ರ ಸುಮಾರಿಗೆ ತಮ್ಮ ಸೊಸೆಯನ್ನು ಬಾಣಸವಾಡಿಯ ಆಸ್ಪತ್ರೆಗೆ ಕರೆದೊಯ್ಯಲು ಬಾಳೆಕುಂದ್ರಿ ಸರ್ಕಲ್‌ಗೆ ಬಂದು, ಮುಜಾಹಿದ್‌ನ ಆಟೋ ಹತ್ತಿದ್ದರು. ಈ ವೇಳೆ ಮುಜಾಹಿದ್, 200 ರೂ. ಆಗುತ್ತದೆ ಎಂದಿದ್ದಾನೆ. ನಿಗದಿತ ಬಾಡಿಗೆಗಿಂತ ದುಪ್ಪಟ್ಟು ಹಣ ಕೇಳುವುದೇಕೆ ಎಂದು ಎಎಸ್‌ಐ ಪ್ರಶ್ನಿಸಿದ್ದಾರೆ.
ಇಷ್ಟಕ್ಕೇ ಎಎಸ್‌ಐ ಮೇಲೆರಗಿದ ಮುಜಾಯಿದ್, ಕರಿಯಣ್ಣ ಅವರ ಎದೆಗೆ ಎರಡು ಬಾರಿ ಕಾಲಿನಿಂದ ಒದ್ದಿದ್ದಾನೆ. ಇದನ್ನು ಗಮನಿಸಿದ ಇನ್ನಿಬ್ಬರು ಆಟೋಚಾಲಕರು ಅಲ್ಲಿಗೆ ಬಂದು ಎಎಸ್‌ಐಗೇ ದಬಾಯಿಸಿ ಮುಜಾಯಿದ್‌ನನ್ನು ಅಲ್ಲಿಂದ ಕರೆದೊಯ್ದಿದ್ದಾರೆ.
ಘಟನೆಯಿಂದ ಆತಂಕಗೊಂಡ ಕರಿಯಣ್ಣ ಅವರ ಸೊಸೆ, ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕುಟುಂಬ ಸದಸ್ಯರು, ಕರಿಯಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಿಂದ ಬಂದ ಬಳಿಕ ಎಎಸ್‌ಐ ನೀಡಿದ ದೂರು ಆಧರಿಸಿ, ಆರೋಪಿ ಡಿ.ಜೆ.ಹಳ್ಳಿಯ ನಿವಾಸಿ ಮುಜಾಯಿದ್‌ನನ್ನು ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕುಡಿತದ ಅಮಲಿನಲ್ಲಿ ಕೃತ್ಯ: ಘಟನೆ ನಡೆದಾಗ ಆರೋಪಿ, ಮುಜಾಯಿದ್ ಮದ್ಯ ಸೇವಿಸಿದ್ದ. ದುಪ್ಪಟ್ಟು ಹಣ ಕೊಡಲು ಒಪ್ಪದೆ ಎಎಸ್‌ಐ ಕರಿಯಣ್ಣ ಅವರು ಬೇರೆ ಆಟೋದಲ್ಲಿ ಹೋಗಲು ಸಿದ್ಧರಾದರೂ ಬಿಟ್ಟಿರಲಿಲ್ಲ. ಜತೆಗೆ, “ಇವರನ್ನು ಆಟೋ ಹತ್ತಿಸಬೇಡಿ’ ಎಂದು ಇತರೆ ಆಟೋ ಚಾಲಕರಿಗೆ ಹೇಳಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.