ಬೆಂಗಳೂರು: ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವುದಾಗಿ ನಂಬಿಸಿ ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಆಟೋ ಚಾಲಕ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬನಶಂಕರಿ ನಿವಾಸಿ ವಸೀಂ (32) ಬಂಧಿತ.
ಆಟೋ ಚಾಲಕನಾಗಿರುವ ಆರೋಪಿ, ನಾಲ್ಕು ವರ್ಷಗಳಿಂದ ಬೇರೆ ಬೇರೆ ಹೆಸರುಗಳಿಂದ ಪೊಲೀಸರನ್ನು ಪರಿಚಯಿಸಿಕೊಂಡು, ಬಾತ್ಮೀದಾರನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಕಷ್ಟ ಎಂದು ಪೊಲೀಸರಿಂದಲೇ 2-5 ಸಾವಿರ ರೂ.ವರೆಗೆ ಹಣ ವಸೂಲಿ ಮಾಡಿದ್ದಾನೆ. ಬಳಿಕ ತಪ್ಪು ಮಾಹಿತಿ ನೀಡಿ, ಪೊಲೀಸರನ್ನು ಯಾಮಾರಿಸುತ್ತಿದ್ದ ಎಂಬುದು ಗೊತ್ತಾಗಿದೆ.
ಆರೋಪಿ ವಾಸೀಂ ಪೊಲೀಸರಿಗೆ ಕರೆ ಮಾಡಿ, ಅಲ್ಲೊಂದು ದಂಧೆ ನಡೆಯುತ್ತಿದೆ. ಆ ಬಗ್ಗೆ ಮಾಹಿತಿ ನೀಡುವೆ ಎನ್ನುತ್ತಿದ್ದ. ಬಳಿಕ ಪೊಲೀಸರು ಸ್ಥಳಕ್ಕೆ ಬರುವುದಾಗಿ ಹೇಳುತ್ತಿದ್ದಂತೆ, ಬೇಡ, ಖುದ್ದು ನಾನೇ ಆ ಸ್ಥಳಕ್ಕೆ ತೆರಳಿ ಲೊಕೇಶನ್ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದ. ಕೆಲ ಹೊತ್ತಿನ ಬಳಿಕ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾರ್ಗ ಮಧ್ಯೆ ಆಟೋದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಮನೆಯಲ್ಲಿ ಸಮಸ್ಯೆಯಿದ್ದು, ಹಣವಿಲ್ಲ ಎನ್ನುತ್ತಿದ್ದ. ಈತನ ಮಾತು ನಂಬಿದ ಪೊಲೀಸರು, ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ 2-5 ಸಾವಿರ ರೂ.ವರೆಗೂ ಕಳುಹಿಸುತ್ತಿದ್ದರು.
ಖಾತೆಗೆ ಹಣ ಬೀಳುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ. ಹೀಗೆ ಸಿಸಿಬಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ನಾಲ್ಕು ವರ್ಷಗಳಿಂದ ವಂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಕಾಟನ್‌ಪೇಟೆ ಠಾಣೆಯಲ್ಲಿ ವಸೀಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.