ನವದೆಹಲಿ: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ನಷ್ಟ ಅನುಭವಿಸಿದ್ದ ಆಟೋಮೊಬೈಲ್ ಕಂಪನಿಗಳು ಇದೀಗ 2021ರ ಜನವರಿಯಿಂದ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡಲು ಯೋಜಿಸಿರುವುದಾಗಿ ವರದಿ ತಿಳಿಸಿದೆ.
ಕೈಗಾರಿಕಾ ಉತ್ಪನ್ನಗಳ ಬೆಲೆ ಹಾಗೂ ಇತರ ಬೆಲೆ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಜನವರಿಯಿಂದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಹೀರೋ ಮೋಟಾರ್ಸ್ ಕಾರ್ಪೋರೇಶನ್ ಲಿಮಿಟೆಡ್, ಹೋಂಡಾ ಮೋಟಾರ್ ಕಂಪನಿ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರ ಲಿಮಿಟೆಡ್ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೋಷಿಸಿರುವುದಾಗಿ ದ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ಬಜಾಜ್ ಆಟೋ ಲಿಮಿಟೆಡ್ ಮತ್ತು ರಾಯಲ್ ಎನ್ ಫೀಲ್ಡ್ ಬೆಲೆಯನ್ನು ಹೆಚ್ಚಿಸಿತ್ತು. ವಾಹನಗಳ ಮಾರಾಟದಲ್ಲಿ ಕುಸಿತ ತಡೆಯಲು 2020ರ ದೀಪಾವಳಿಯ ನಂತರ ಮಾರುಕಟ್ಟೆಯಲ್ಲಿ ವಾಯನಗಳ ಬೆಲೆಯಲ್ಲಿ ರಿಯಾಯಿತಿ ಘೋಷಿಸಲಾಗಿತ್ತು.
ಬೆಲೆ ಏರಿಕೆಯಿಂದ ವಾಹನ ಖರೀದಿಗಾಗಿ ಶೋರೂಂಗಳಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆ ಹೆಚ್ಚು ಚೇತರಿಕೆ ಕಂಡಿಲ್ಲ. ಅಷ್ಟೇ ಅಲ್ಲ 2020 ಕೈಗಾರಿಕಾ ಕ್ಷೇತ್ರಕ್ಕೆ ಭಾರೀ ಸಂಕಷ್ಟ ತಂದೊಡ್ಡಿರುವುದಾಗಿ ಹೆಸರು ಹೇಳಲು ಇಚ್ಚಿಸದ ಸಿಇಒ ತಿಳಿಸಿದ್ದಾರೆ.
2020ರ ಏಪ್ರಿಲ್ ನಲ್ಲಿ ಜಾರಿಗೆ ಬಂದ ಭಾರತ್ ಸ್ಟೇಜ್ 6ರ ವಾಯುಮಾನಲಿನ್ಯ ಪರಿಮಿತ ಮಾನದಂಡದ ಪ್ರಯಾಣಿಕರ ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.15ರಷ್ಟು ಏರಿಕೆ ಕಂಡಿತ್ತು. ಏತನ್ಮಧ್ಯೆ ಜುಲೈ1ರಿಂದ ಲೋಹದ ಬೆಲೆ ಶೇ.31ರಷ್ಟು ಹೆಚ್ಚಳವಾಗಿತ್ತು. ತಾಮ್ರ ಶೇ.32, ಸೀಸ ಶೇ.16ರಷ್ಟು, ಅಲ್ಯೂಮಿನಿಯಂ ಶೇ.28ರಷ್ಟು, ಕಚ್ಚಾ ಬೆಲೆ ಶೇ.24ರಷ್ಟು ಏರಿಕೆಯಾಗಿರುವುದಾಗಿ ಬ್ಲೂಮ್ ಬರ್ಗ್ ವರದಿ ಮಾಡಿದೆ.