ಬೆಳಗಾವಿ: ಆಟೋ ರಿಕ್ಷಾದಲ್ಲಿ ಗರಿಷ್ಠ ಆರು ವಿದ್ಯಾರ್ಥಿಗಳನ್ನು ಕರೆದೊಯ್ಯುವಂತೆ ಪೊಲೀಸ್ ಕಮೀಷನರ್ ಹೊರಡಿಸಿರುವ ಆದೇಶ ವಿರೋಧಿಸಿ ಚಾಲಕರು ಗುರುವಾರದಿಂದ ಮೂರು ದಿನಗಳ ಕಾಲ ಆಟೋ ರಿಕ್ಷಾ ಸಂಚಾರ ಸ್ಥಗಿತಗೊಳಿಸಿದ್ದು, ಇದರಿಂದ ವಿದ್ಯಾರ್ಥಿಗಳು, ಪಾಲಕರು ಪರದಾಡುವಂತಾಯಿತು.
ಪಾಲಕರು ತಮ್ಮ ಕೆಲಸ ಕಾರ್ಯ ಬಿಟ್ಟು ವಿದ್ಯಾರ್ಥಿಗಳು ದ್ವಿಚಕ್ರ ವಾಹನ, ಕಾರಿನಲ್ಲಿ, ಸೈಕಲ್ ಮೇಲೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂತು. ಶಾಲೆಗಳ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು, ಕಾರುಗಳು ಧಾವಿಸಿದ್ದರಿಂದ ಕೆಲಹೊತ್ತು ಸಂಚಾರ ದಟ್ಟಣೆ ಆಗಿತ್ತು.
ಶಾಲೆ ಬಿಡುವ ಸಮಯದಲ್ಲಿ ಶಾಲೆಯ ಸುತ್ತಲೂ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದವು. ಸೇಂಟ್ ಮೇರಿ, ಸೇಂಟ್ ಕ್ಸೇವಿಯರ್, ಸೇಂಟ್ ಪಾಲ್, ಬಿ.ಕೆ. ಮಾಡೆಲ್ ಶಾಲೆ, ಉಷಾತಾಯಿ ಗೋಗಟೆ ಶಾಲೆ ಸೇರಿದಂತೆ ಅನೇಕ ಶಾಲೆಗಳ ಸುತ್ತಲೂ ವಾಹನಗಳು ಜಮಾವಣೆಗೊಂಡಿದ್ದವು. ಮಕ್ಕಳನ್ನು ಹತ್ತಿಸಿಕೊಂಡು ಮನೆ ಸೇರುವಷ್ಟರಲ್ಲಿಯೇ ವಿದ್ಯಾರ್ಥಿಗಳು ಹಾಗೂ ಪಾಲಕರು ಹೈರಾಣಾಗಿದ್ದರು.
ಕ್ಯಾಂಪ್ ಪ್ರದೇಶ ಬುಡಾಪಾ ಘರ್, ಗ್ಲೋಬ್ ಸರ್ಕಲ್, ರೈಲ್ವೆ ಓವರ್ ಬ್ರಿಡ್ಜ್ದಿಂದ ಆರ್‌ಪಿಡಿ ಕ್ರಾಸ್‌ವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಕಾಂಗ್ರೆಸ್ ರಸ್ತೆಯಲ್ಲಿ ಒಂದು ಕಡೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ನಿರ್ಮಾಣ ಆಗುತ್ತಿರುವುದರಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು. ಕಾಲೇಜು ರಸ್ತೆ, ಚನ್ನಮ್ಮ ವೃತ್ತ, ಬೋಗಾರ್‌ವೇಸ್, ಆರ್‌ಟಿಒ ಸರ್ಕಲ್ನಲ್ಲಿಯೂ ದಟ್ಟಣೆ ಹೆಚ್ಚಾಗಿತ್ತು.
Advertisement
ಆಟೊರಿಕ್ಷಾಗಳನ್ನು ಬಂದ್ ಮಾಡಿ ಹೋರಾಟಕ್ಕಿಳಿದಿರುವ ಚಾಲಕರಿಂದಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಪರದಾಡಿದರು. ನಗರದಲ್ಲಿರುವ ಎಲ್ಲ ಶಾಲೆಗಳ ಮುಂದೆ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಆಟೋಗಳಿಲ್ಲದೇ ಕೆಲ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಒದಗಿತು.
Related Articles
ಆದೇಶ ಹಿಂಪಡೆಯುವಂತೆ ಚಾಲಕರ ಒತ್ತಾಯ:
6ಕ್ಕಿಂತ ಹೆಚ್ಚು ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಹಾಕದಂತೆ ಪೊಲೀಸರು ಹಾಕಿರುವ ಆದೇಶದಿಂದಾಗಿ ಚಾಲಕರು ಆಕ್ರೋಶಗೊಂಡಿದ್ದಾರೆ. ಇಷ್ಟು ಹಣದಲ್ಲಿ ನಮ್ಮ ಉಪಜೀವನ ನಡೆಯುವುದಿಲ್ಲ. ಮೊದಲೇ ಪಾಲಕರು ಕಡಿಮೆ ಶುಲ್ಕ ನೀಡುವುದರಿಂದ ತಿಂಗಳು ಖರ್ಚು ಸಾಗಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಮೊತ್ತ ಕೊಡುವಂತೆ ಪಾಲಕರಿಗೆ ಹೇಳಿದರೆ ಕೇಳುವುದಿಲ್ಲ. ಈ ಮುಂಚೆ 8-10 ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಬಿಡುವುದಾದರೆ ಲಾಭ ಆಗುತ್ತಿತ್ತು. ಈಗ 6 ವಿದ್ಯಾರ್ಥಿಗಳನ್ನು ಮಾತ್ರ ಹಾಕುವಂತೆ ಹೇಳಿರುವ ಆದೇಶ ಚಾಲಕರ ಹೊಟ್ಟೆಯ ಮೇಲೆ ಬಡಿದಂತಾಗುತ್ತದೆ. ಕೂಡಲೇ ಈ ಆದೇಶ ಹಿಂಪಡೆಯುವಂತೆ ಆಟೋ ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.
ಪೊಲೀಸರು-ಚಾಲಕರ ಮಧ್ಯೆ ಪಾಲಕರು ಹೈರಾಣ:
ಒಂದೆಡೆ ಪೊಲೀಸರು ಆದೇಶ ಹೊರಡಿಸಿದ್ದು, ಇನ್ನೊಂದೆಡೆ ಈ ಆದೇಶದ ವಿರುದ್ಧ ಆಟೋ ರಿಕ್ಷಾ ಚಾಲಕರು ಹೋರಾಟ ನಡೆಸುತ್ತಿದ್ದಾರೆ. ಈ ಇಬ್ಬರ ಮಧ್ಯೆ ನಡೆದ ಮುಸುಕಿನ ಗುದ್ದಾಟದಿಂದ ಪಾಲಕರು ಹೈರಾಣಾಗುವಂತಾಗಿದೆ. ಶಾಲೆಗೆ ಹೋಗಿ, ಮನೆಗೆ ವಾಪಸ್ಸು ಕರೆ ತರಲು ಶುಲ್ಕ ನಿಗದಿ ಮಾಡಿ ಚಾಲಕರಿಗೆ ಕೊಡಲಾಗುತ್ತಿದೆ. ಇನ್ನು ಮುಂದೆ ಬಾಡಿಗೆ ಮೊತ್ತ ಹೆಚ್ಚು ಮಾಡುವಂತೆ ಹೇಳಿದರೆ ಎಲ್ಲಿಂದ ಕೊಡುವುದು. ನಮ್ಮ ಬಾಡಿಗೆ ಮಾತ್ರ ನಾವು ಹೆಚ್ಚಿಗೆ ಮಾಡುವುದಿಲ್ಲ ಎನ್ನುತ್ತಾರೆ ಪಾಲಕರು.
Advertisement