ಮುಂಬಯಿ, ಆ. 8: ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಜು. 27ರಂದು ಸಂಘದ ದಾದರ್ ಸಭಾಂಗಣದ ದೇವಾಡಿಗ ಸೆಂಟರ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಡಾ| ರೇಖಾ ಚಂದ್ರಶೇಖರ್ ದೇವಾಡಿಗ ಅವರು ಮಾತನಾಡಿ, ಆಟಿ ತಿಂಗಳು ಅಂದರೇನೆ ಅದೊಂದು ವಿಶೇಷ, ಜೂನ್‌ನಿಂದ ಪ್ರಾರಂಭವಾಗುವ ಮಳೆಗಾಲದಿಂದ ಮಿಂದ ಭುವಿಯ ಹಚ್ಚಹಸಿರಿನ ನೋಟ, ಕೃಷಿಯ ಉಳುಮೆ, ಬಿತ್ತನೆ, ಬತ್ತದ ಸಸಿ ನೆಡುವ ಕಾಯಕಗಳನ್ನು ಮುಗಿಸಿದ ಕೃಷಿಕನ ಹಾಗೂ ಉಳುವ ಎತ್ತಿನ ಅರಾಮದ ತಿಂಗಳು. ಪ್ರಕೃತಿಯ ಮಡಿಲಲ್ಲಿ ಸಿಗುವ ಹಚ್ಚನೆಯ ತೇವು, ತೊಜಂಕು, ಸೊಪ್ಪು, ಕಣಿಲೆ, ಲಾಂಬು ಮತ್ತು ಮನೆಯಲ್ಲಿ ಬೇಸಿಗೆ ಕಾಲದಲ್ಲಿ, ಉಪ್ಪು ನೀರಲ್ಲಿ ಹಾಕಿಟ್ಟ, ಉಪ್ಪಡ್ ಪಚ್ಚಿರು, ಗುಂಜಿ, ಮಾವಿನ ನಿರುಪ್ಪಡ್, ಹಪ್ಪಳ, ಸಂಡಿಗೆ, ಹೀಗೆ ಅನೇಕ ಆಹಾರಗಳನ್ನು ತಿಂದು ಬೆಳೆದ ನಾವು ಈ ಮುಂಬಯಿ ನಗರದಲ್ಲಿ ಈ ಒಂದು ಕಾರ್ಯಕ್ರಮ ಆಟಿಡೊಂಜಿ ದಿನ ಆಚರಿಸಲು ಬಲು ಸಂತೋಷವೆನಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ಹಿರಿಯ ಸದಸ್ಯ ದೇವಾಡಿಗ ಸೆಂಟರ್‌ನ ಮ್ಯಾನೇಜರ್ ಶಂಬು ದೇವಾಡಿಗರ ತಾಯಿ ಗುಲಾಬಿ ಐತು ದೇವಾಡಿಗ ಹಾಗೂ ಬೆಂಗಳೂರಿನ ದೇವಾಡಿಗ ಸಂಘದ ಹಿರಿಯ ಸಕ್ರಿಯ ಸದಸ್ಯ ಪ್ರಭಾವತಿ ಎಸ್. ಕುಡುಪಿ ಅವರನ್ನು ಫಲಪುಷ್ಪದೊಂದಿಗೆ ಸಮ್ಮಾನಿಸಲಾಯಿತು. ದೇವಾಡಿಗ ಸಂಘದ ಮಹಿಳಾ ಕಾರ್ಯಾದ್ಯಕ್ಷೆ ಜಯಂತಿ ಮೊಲಿ ಸ್ವಾಗತಿಸಿ, ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಮಕ್ಕಳಿಗೂ ತಿಳಿಸಿ ಅವರನ್ನು ಇಂತ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಬೇಕು. ಎಲ್ಲಾ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಮತ್ತು ಅವರ ತಂಡದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಎಂಫಿಲ್ ಪದವಿ ಪಡೆದ ಸುರೇಖಾ ಹೇಮನಾಥ್ ದೇವಾಡಿಗ ಅವರನ್ನು ಮಹಿಳಾ ವಿಭಾಗದ ಉಪಾಕಾರ್ಯಾಧ್ಯಕ್ಷೆ ಗೌರವಿಸಿದರು.
ಮಹಿಳಾ ವಿಭಾಗದ ಸರ್ವ ಕಾರ್ಯಕ್ಕೆ ಸಂಪೂರ್ಣ ಸಹಕಾರವನ್ನಿತ್ತ ಅಧ್ಯಕ್ಷರಾದ ರವಿ ಎಸ್. ದೇವಾಡಿಗ ಹಾಗೂ ಕಾರ್ಯ ಕಾರಿ ಸಮಿತಿಯ ಸದ್ಯಸರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಎಚ್. ಮೋಹನ್‌ದಾಸ್ ಅವರು ಮಹಿಳಾ ಸದಸ್ಯೆಯರನ್ನು ಅಭಿನಂದಿಸಿದರು. ಶಿಕ್ಷಣ ಕಮಿಟಿಯ ಕಾರ್ಯಾಧ್ಯಕ್ಷ ಕೃಷ್ಣ ದೇವಾಡಿಗ, ಮಾಜಿ ಅಧ್ಯಕ್ಷ ಕೆ. ಕೆ. ಮೋಹನ್‌ದಾಸ್ ಅವರು ಆಟಿಯ ವಿಶೇಷತೆಯ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗರು ಆಟಿಯ ವಿಶೇಷ ವ್ಯಂಜನೆಗಳನ್ನು ತಂದ ಮಹಿಳೆಯರನ್ನು ಅಭಿನಂದಿಸಿ, ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು ವಿದ್ಯಾಬ್ಯಾಸಕ್ಕಾಗಿ ಪಡೆದುಕೊಳ್ಳಬೇಕು ಎಂದು ನುಡಿದರು.
ಮಹಿಳಾ ವಿಭಾಗದ ಉಪಾಕಾರ್ಯಾಧ್ಯಕ್ಷೆ ಸುರೇಖಾ ದೇವಾಡಿಗ ಅವರು ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಪ್ರತಿಮಾ ಮೊಲಿ ಮತ್ತು ಗೀತಾ ದೇವಾಡಿಗರು ಸ್ಪರ್ಧೆಯಲ್ಲಿ ವಿಜೇತರಾದರು. ಜಾನಪದ ರಸ ಪ್ರಶ್ನೆಗಳಲ್ಲಿ ರಘು ಮೊಲಿ ಮತ್ತು ವಿಶ್ವನಾಥ್ ದೇವಾಡಿಗರು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಲೋಲಾಕ್ಷಿ ದೇವಾಡಿಗ ಪ್ರಾಥನೆಗೈದರು. ಉಪಕಾರ್ಯಾಧ್ಯಕ್ಷೆ ರಂಜಿನಿ ಮೊಲಿ ಆಟಿ ತಿಂಗಳ ವಿಶೇಷತೆಯನ್ನು ವಿವರಿಸಿದರು. ತುಳು ಪಾಡ್ದನವನ್ನು ಹೇಮಾ ದೇವಾಡಿಗರು ಶುಸ್ರಾವ್ಯವಾಗಿ ಹಾಡಿದರು. ಉಪ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ ಆಟಿಯ ವ್ಯಂಜನಗಳ ಪಟ್ಟಿ ಹಾಗೂ ತಯಾರಿಸಿ ತಂದವರ ಹೆಸರುಗಳನ್ನು ವಿವರವಾಗಿ ತಿಳಿಸಿದರು.
ಸಿಟಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ನಿತೀಶ್ ದೇವಾಡಿಗರನ್ನು ಗೌರವಿಸಲಾಯಿತು. ಅಕ್ಷಯ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ವಾಸು ಎಸ್. ದೇವಾಡಿಗ, ಮಾಜಿ ಅಧ್ಯಕ್ಷ ಗೋಪಾಲ್ ಮೊಲಿ, ಯುವ ವಿಭಾಗದ ನರೇಶ್ ದೇವಾಡಿಗ ಮತ್ತು ಪ್ರವೀಣ್ ನಾರಾಯಣ್ ಹಾಗೂ ಸುಂದರ ಮೊಲಿ ಅವರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.