ಬೆಂಗಳೂರು: “ಸಮ್ಮಿಶ್ರ ಸರ್ಕಾರದಲ್ಲಿ ನಾನು ನೆಪ ಮಾತ್ರಕ್ಕೆ ಮುಖ್ಯಮಂತ್ರಿಯಾಗಿದ್ದೆ. 14 ತಿಂಗಳು ಮತ್ತೊಬ್ಬರ ಮುಲಾಜಿನಲ್ಲೇ ಅಧಿಕಾರ ನಡೆಸಿದೆ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, “ಅನಿವಾರ್ಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾದ ನಾನು, ಸಮ್ಮಿಶ್ರ ಸರ್ಕಾರ ನಡೆಸಲು ಬೆಂಬಲ ನೀಡಿದ ಪಕ್ಷದ ನಾಯಕರ ಅಣತಿಯಂತೆ ನಡೆಯುತ್ತಿದ್ದೆ’ ಎಂದು ತಿಳಿಸಿದರು.
“ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ನಂತರ ನಾನು ನಿಜಕ್ಕೂ ಸಂತೋಷವಾಗಿದ್ದೇನೆ. ನನಗೆ ಮುಖ್ಯಮಂತ್ರಿ ಸ್ಥಾನಕ್ಕಿಂತ ನಿಮ್ಮ ಪ್ರೀತಿ ಮುಖ್ಯ. ನಿಮ್ಮ ಮುಂದೆ ನನಗೆ ಮುಖ್ಯಮಂತ್ರಿ ಹುದ್ದೆ ದೊಡ್ಡದಲ್ಲ’ ಎಂದು ಹೇಳಿದರು. “ಹಿಂದೊಮ್ಮೆ ಪಕ್ಷದ ಕಚೇರಿಯಲ್ಲಿ ನೋವು ನುಂಗಿ ವಿಷಕಂಠನಾಗಿದ್ದೇನೆ ಎಂದು ಕಣ್ಣೀರು ಹಾಕಿದ್ದೆ. ಅದಕ್ಕೆ ಕಾರಣ ನಾನೇ ಮುಖ್ಯಮಂತ್ರಿಯಾದರೂ ನನ್ನನ್ನು ಬೆಳೆಸಿದ ಪಕ್ಷ ಕಟ್ಟಿದ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ಕೊಡಲು ನನ್ನಿಂದ ಆಗುತ್ತಿಲ್ಲವಲ್ಲಾ ಎಂಬ ನೋವು.
ಅದಕ್ಕಾಗಿ ಕಣ್ಣೀರು ಹಾಕಿದ್ದೆ. 14 ತಿಂಗಳಲ್ಲಿ ಏನೇನಾಯ್ತು ಎಂಬುದನ್ನು ನಾನು ಹೇಳಿಕೊಳ್ಳಲು ಹೋಗುವುದಿಲ್ಲ’ ಎಂದು ತಿಳಿಸಿದರು. ಸರ್ಕಾರ ನಡೆಸುವಾಗ ಎಷ್ಟೇ ಅಡೆ-ತಡೆ ಇದ್ದರೂ ರೈತರ ಸಾಲ ಮನ್ನಾ ಮಾಡಿದೆ. ವೃದ್ಧಾಪ್ಯ ವೇತನವನ್ನು 600 ರಿಂದ 1 ಸಾವಿರ ರೂ.ಗೆ ಏರಿಸಿದೆ. ಗರ್ಭಿಣಿಯರಿಗೆ ತಿಂಗಳಿಗೆ 2 ಸಾವಿರ ರೂ.ಗಳನ್ನು ಹೆರಿಗೆ ನಂತರದ ಆರು ತಿಂಗಳು ನೀಡುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇನೆ.
ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಮಹಿಳಾ ಸ್ವ-ಸಹಾಯ ಸಂಘಗಳಿಗೆ 10 ಲಕ್ಷ ರೂ. ವರೆಗೆ ನೆರವು, ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವ್ಯವಸ್ಥೆ, ಗೋದಾಮು ವ್ಯವಸ್ಥೆ, ಸೂಕ್ತ ಬೆಲೆ ಇಲ್ಲದಿದ್ದರೆ ಸಾಲದ ವ್ಯವಸ್ಥೆ ರೂಪಿಸಿದೆ. ಇದೆಲ್ಲವೂ ನನಗೆ ತೃಪ್ತಿ ತಂದಿದೆ ಎಂದು ಹೇಳಿದರು. “ದೇವೇಗೌಡರು ಈ ವಯಸ್ಸಿನಲ್ಲಿ ಪಕ್ಷ ಕಟ್ಟಲು ಮುಂದಾಗಿದ್ದಾರೆ. ನಾನು ನಿಮ್ಮ ಜತೆ ಇದ್ದೇನೆ. ನೀವಿದ್ದರೆ ನಾವು. ನಾವು ಒಟ್ಟಾಗಿ ಪಕ್ಷ ಕಟ್ಟೋಣ. ನಾನು ನನ್ನ ಸ್ವಂತ ದುಡಿಮೆಯಿಂದ ಖರೀದಿಸಿರುವ ಕೇತಗಾನಹಳ್ಳಿ ತೋಟದಲ್ಲಿ ಅನಾಥ ಮಕ್ಕಳು ಹಾಗೂ ವೃದ್ಧರಿಗಾಗಿ ಆಶ್ರಮ ತೆರೆಯುತ್ತೇನೆ.
ನನ್ನ ತಂದೆ-ತಾಯಿ ಹೆಸರಿನಲ್ಲಿ ಟ್ರಸ್ಟ್ ತೆಗೆದು ಸೇವೆ ಮಾಡುತ್ತೇನೆ’ ಎಂದು ತಿಳಿಸಿದರು. ಮಾಜಿ ಸಚಿವ ಬಸವರಾಜ ಹೊರಟ್ಟಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ವಿಧಾನಪರಿಷತ್ ಸದಸ್ಯ ಬಿ.ಎಂ.ಫರೂಕ್ ಮಾತನಾಡಿದರು. ಪಕ್ಷದ 34 ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ವೇದಿಕೆಯಲ್ಲಿ ಹಾಜರಾಗಿ, ಒಗ್ಗಟ್ಟು ಪ್ರದರ್ಶಿಸಿದರು.
ಎಲ್ಲಿದ್ದೀಯಪ್ಪಾ ಯಡಿಯೂರಪ್ಪಾ…: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 13 ದಿನ ಕಳೆದಿದೆ. ರಾಜ್ಯದ ಬಹುತೇಕ ಕಡೆ ಪ್ರವಾಹ ಇದೆ. ಮುಖ್ಯಮಂತ್ರಿ ಒಬ್ಬರದೇ ಏಕಚಕ್ರಾಧಿಪತ್ಯ ಇದೆ. ಸಚಿವರೂ ಇಲ್ಲ , ಅಧಿಕಾರಿಗಳೂ ಕೇಳುತ್ತಿಲ್ಲ. “ನಿಖೀಲ್ ಎಲ್ಲಿದ್ದೀಯಪ್ಪಾ’ ಎಂದು ವಾಟ್ಸಪ್ ಸಂದೇಶ ರವಾನಿಸಿದವರು ಎಲ್ಲಿದ್ದಾರೆ? “ಎಲ್ಲಿದ್ದೀಯಪ್ಪಾ, ಯಡಿಯೂರಪ್ಪ’ ಎಂದು ಯಾಕೆ ಕೇಳುತ್ತಿಲ್ಲ. ಮಾಧ್ಯಮದವರೂ ಯಾಕೆ ಆ ಬಗ್ಗೆ ಮೌನ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.