Advertisement
ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ-2020ರಲ್ಲಿ ದರ ನಿಯಂತ್ರಣ ಮತ್ತು ರೈಡ್‌ಗಳ ರದ್ದತಿ ಬಗ್ಗೆ ಉಲ್ಲೇಖೀಸುವ 13 ಮತ್ತು 14ನೇ ಅಂಶಗಳನ್ನು “ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ- 2016’ರಲ್ಲಿ ಸೇರಿಸುವ ಮೂಲಕ ಆ್ಯಪ್ ಆಧಾರಿತ ಸೇವೆಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಇನ್ನೆರಡು ದಿನಗಳಲ್ಲಿ ಅಧಿಕೃತ ಮುದ್ರೆ ಬೀಳಲಿದ್ದು, ಬೆನ್ನಲ್ಲೇ ಆದೇಶ ಕೂಡ ಹೊರಡಿಸಲು ಸಿದ್ಧತೆ ನಡೆದಿದೆ. ಸಾಮನ್ಯವಾಗಿ ಯಾವೊಂದು ನಿಯಮಗಳ ಮಾರ್ಪಾಡು ಅಥವಾ ತಿದ್ದುಪಡಿ ಮಾಡಿದಾಗ ಸಚಿವ ಸಂಪುಟ ಮತ್ತು ಅಧಿವೇಶನದಲ್ಲಿ ಮತ್ತೆ ಅಂಗೀಕಾರಗೊಳ್ಳಬೇಕಾಗುತ್ತದೆ. ಆದರೆ, ತುರ್ತು ಅಗತ್ಯತೆ ಮೇರೆಗೆ ಕಾರ್ಯಾದೇಶ ಮಾಡಿ, ನಂತರದಲ್ಲಿ ಘಟನೋತ್ತರ ಅನುಮೋದನೆ ಪಡೆಯಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಆಟೋ ಸೇವೆಗಳ ಮುಂದುವರಿಕೆಗೆ ಪೂರಕವಾದ ಅಂಶಗಳನ್ನು ಸಂಯೋಜಿಸಲು ಮುಂದಾಗಿದೆ. ಬೆನ್ನಲ್ಲೇ ದರ ಕೂಡ ನಿಗದಿಪಡಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
Related Articles
Advertisement
“ನಮ್ಮ ಯಾತ್ರಿ’ ಸೇವೆ ಆರಂಭ: ಈ ಎಲ್ಲ ಬೆಳವಣಿಗೆಗಳ ನಡುವೆ ಆಟೋ ಸೇವೆಗಳು ಎಂದಿನಂತೆ ಮುಂದುವರಿದಿವೆ. ಅಷ್ಟೇ ಅಲ್ಲ, ಮೊದಲಿದ್ದ ದರದಲ್ಲೇ ಸೇವೆ ಒದಗಿಸಲಾಗುತ್ತಿದೆ. ಚಾಲಕರಿಗೆ ದೊರೆಯುವ ಆದಾಯದಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಆಟೋ ಚಾಲಕರು ತಿಳಿಸಿದ್ದಾರೆ.
ಮತ್ತೂಂದೆಡೆ ಇದಕ್ಕೆ ಪರ್ಯಾಯವಾಗಿ “ನಮ್ಮ ಯಾತ್ರಿ’ ಆಟೋ ಸೇವೆ ನಗರದಲ್ಲಿ ಆರಂಭಗೊಂಡಿದೆ. ನಮ್ಮ ಯಾತ್ರಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಮೊಬೈಲ್ ನಂಬರ್ ಸೇರ್ಪಡೆಗೊಳಿಸಿದರೆ ಸಾಕು. ಇಲ್ಲಿ ಕನಿಷ್ಠ ದರ ನಿಗದಿಪಡಿಸಿದ್ದು, ಒಂದು ಮಾರ್ಗದ ರೈಡ್ ಬುಕಿಂಗ್ ಮಾಡಿದರೆ, ಹಲವು ಆಟೋ ಆಯ್ಕೆಗಳು ವಿವಿಧ ದರದ ಮಾದರಿಯಲ್ಲಿ ಮೊಬೈಲ್ ಸ್ಕ್ರೀನ್‌ನಲ್ಲಿ ಬರುತ್ತವೆ. ಆಯ್ಕೆ ಗ್ರಾಹಕರಿಗೆ ಬಿಟ್ಟಿದ್ದು ಎಂದು ಆಟೋರಿಕ್ಷಾ ಡ್ರೈವರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸುತ್ತಾರೆ.
ಇಂದು ಸಭೆ: ದರ ನಿಗದಿ ಜತೆಗೆ ಕೇಂದ್ರದ ಮಾರ್ಗಸೂಚಿಗಳಲ್ಲಿನ ಅಂಶಗಳನ್ನು ರಾಜ್ಯದ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮದಲ್ಲಿ ಸಂಯೋಜಿಸುವ ಸಂಬಂಧ ಸಾರಿಗೆ ಇಲಾಖೆ ಸೋಮವಾರ ಸಭೆ ನಡೆಸಲಿದೆ. ಇಲಾಖೆ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳ ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
-ವಿಜಯಕುಮಾರ ಚಂದರಗಿ