ಧಾರವಾಡ: ಜನಹಿತಕ್ಕಾಗಿ ಮೈತ್ರಿ ಸರಕಾರ ಬಂದರೆ ಅದರಿಂದ ಅಭಿವೃದ್ಧಿ ಸಾಧ್ಯವೇ ಹೊರತು ಬರೀ ಅಧಿಕಾರಕ್ಕಾಗಿ ಅಥವಾ ಒಂದು ಪಕ್ಷಕ್ಕೆ ಅಧಿಕಾರ ನೀಡದಂತೆ ಮಾಡುವುದಕ್ಕಾಗಿ ಸಮ್ಮಿಶ್ರ ಸರಕಾರ ಬಂದರೆ ಅದರಿಂದ ಅಭಿವೃದ್ಧಿ ಅಸಾಧ್ಯ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ| ಡಿ.ವಿ.ಗುರುಪ್ರಸಾದ ಹೇಳಿದರು.
ಸಮಬಲ ಹಾಗೂ ಸಮ ಚಿಂತನೆ ಇದ್ದಾಗ ಸಮ್ಮಿಶ್ರ ಸರ್ಕಾರದಿಂದ ಅತ್ಯುತ್ತಮ ಅಭಿವೃದ್ಧಿ ಹಾಗೂ ನಿರೀಕ್ಷೆಗಳನ್ನು ಕಾಣಬಹುದು. ಆದರೆ ಅಧಿಕಾರ ಮೋಹದ ಸಮ್ಮಿಶ್ರ ಸರಕಾರದಲ್ಲಿ ಆಡಳಿತ ಕುಸಿತ ಕಂಡಿದ್ದೇ ಜಾಸ್ತಿ. ಹೀಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಸಮ್ಮಿಶ್ರ ಸರಕಾರಕ್ಕಿಂತ ಏಕಪಕ್ಷೀಯ ಆಡಳಿತವೇ ಹಿತಕರ ಎಂಬುದು ನನ್ನ ಅನುಭವದ ಮಾತು ಎಂದರು.
ಗುಪ್ತಚರ ಇಲಾಖೆ ಕಾರ್ಯವೈಖರಿ ಬಗ್ಗೆ ಜನರಿಗೆ ತಿಳಿಸಿ ಕೊಡಬೇಕೆಂಬ ಉದ್ದೇಶದಿಂದ ಗೂಢಚರ್ಯೆಯ ಆ ದಿನಗಳು ಎಂಬ ಪುಸ್ತಕ ಬರೆದಿದ್ದೇನೆ. ಆದರೆ ಈ ಪುಸ್ತಕದಲ್ಲಿ ಗುಪ್ತಚರ ಇಲಾಖೆಯ ಯಾವುದೇ ಗುಪ್ತ ಹಾಗೂ ಸೂಕ್ಷ್ಮ ಮಾಹಿತಿಗಳನ್ನು ಹೊರ ಹಾಕಿಲ್ಲ. ಬದಲಾಗಿ ಸಾರ್ವಜನಿಕವಾಗಿ ಬಹಿರಂಗ ಇರುವ ವಿಷಯದಲ್ಲಿಯೇ ನಾನು ಕಂಡಂತಹ ವಿಷಯಗಳನ್ನು ಜನರಿಗೆ ತಿಳಿಸಿ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಕೆಲವೊಂದಿಷ್ಟು ಸಂದರ್ಭಗಳಲ್ಲಿ ಸಿಎಂಗಳಿಗೆ ಉತ್ತಮ ಸಲಹೆ-ಸೂಚನೆ ನೀಡಿದರೂ ಅವರು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಎಸ್.ಎಂ. ಕೃಷ್ಣ ಅವರು ಕರೀಂಲಾಲ್ ತೆಲಗಿ ಪ್ರಕರಣವನ್ನು ಸಿಬಿಐಗೆ ನೀಡಲು ತಾವು ಹೇಳಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಅದೇ ರೀತಿ ಮಾಡಿದರು. ಈಗಿನ ಗುಪ್ತಚರ ದಳದ ಸಮೀಕ್ಷಾ ವರದಿ ಸೇರಿದಂತೆ ಚುನಾವಣಾ ಸಮೀಕ್ಷಾ ವರದಿಗಳು ಬಹುತೇಕ ವಿಫಲಗೊಳ್ಳುತ್ತಿವೆ. ಇದಕ್ಕೆ ಕಾರಣ ಮತದಾರ ತನ್ನ ನಿಜ ಗುಟ್ಟು ಬಿಟ್ಟು ಕೊಡದೇ ಇರುವುದು ಕಾರಣವಾಗಿದೆ ಎಂದರು.
Advertisement
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ಓದು: ಸಂವಾದ’ ಕಾರ್ಯಕ್ರಮದಲ್ಲಿ ‘ಗೂಢಚರ್ಯೆಯ ಆ ದಿನಗಳು’ ಎಂಬ ತಮ್ಮ ಹೊಸ ಪುಸ್ತಕ ಕುರಿತು ಅವರು ಮಾತನಾಡಿದರು.
Related Articles
Advertisement
ಗುಪ್ತಚರ ದಳದ ಮುಖ್ಯಸ್ಥರಾಗಿ ಕರ್ನಾಟಕದ ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿ ನಿರ್ವಹಿಸಿದ ಅನೇಕ ಕಾರ್ಯಗಳ ಕುತೂಹಲಕಾರಿ ಅಂಶಗಳನ್ನು ಸಭೆಯಲ್ಲಿ ತೆರೆದಿಟ್ಟ ಡಾ| ಡಿ.ವಿ. ಗುರುಪ್ರಸಾದ ಅವರೊಂದಿಗೆ ಕವಿವಿ ಎಚ್ಆರ್‌ಡಿಸಿ ಮುಖ್ಯಸ್ಥ ಡಾ| ಹರೀಶ ರಾಮಸ್ವಾಮಿ ಹಾಗೂ ನಿವೃತ್ತ ಐಜಿಪಿ ಗೋಪಾಲ ಹೊಸೂರು ಸಂವಾದ ನಡೆಸಿದರು.
ರಮಾಕಾಂತ ಜೋಶಿ, ಡಾ| ಹ.ವೆಂ. ಕಾಖಂಡಕಿ ಸೇರಿದಂತೆ ಹಲವರು ಇದ್ದರು.
ಗುಂಡೂರಾವ್ ಸೋಲಿನ ಮಾಹಿತಿ
ಟಿವಿ ಮಾಧ್ಯಮ ವಿರಳದ ಆ ಸಮಯದಲ್ಲಿ ಸಮೀಕ್ಷೆ ಮಾಡುವ ಯಾವ ಸಂಸ್ಥೆಗಳೂ ಇರಲಿಲ್ಲ. ಆಗ ಚುನಾವಣೆಗಳಲ್ಲಿ ಯಾರಿಗೆ ಸೋಲು-ಯಾರಿಗೆ ಗೆಲುವು ಎಂಬುದು ಗುಪ್ತಚರ ದಳದ ಸಮೀಕ್ಷೆಯೇ ಅಂತಿಮ. ಗುಂಡೂರಾವ್ ಅವರು ಸೋಮವಾರಪೇಟೆ ಹಾಗೂ ಚಿತ್ತಾಪುರದಲ್ಲಿ ಎರಡೂ ಕ್ಷೇತ್ರಗಳಲ್ಲಿ ನಿಲ್ಲುವ ಮನಸ್ಸು ಮಾಡಿದ್ದರು. ಎಲ್ಲಿ ಜನರು ತಪ್ಪು ತಿಳಿಯುತ್ತಾರೆಂದು ಒಂದೇ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದರು. ಆಗ ತಮ್ಮ ಮಾಹಿತಿಯಂತೆ ಅವರಿಗೆ ಸೋಲಿತ್ತು. ಇದನ್ನು ಅವರಿಗೆ ತಿಳಿಸಿದ್ದರೂ ಅವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಸೋಲು ಕಾಣಬೇಕಾಯಿತು ಎಂದು ಡಾ| ಡಿ.ವಿ.ಗುರುಪ್ರಸಾದ ಮೆಲುಕು ಹಾಕಿದರು.
ಎಳೆಎಳೆಯಾಗಿ ಬಿಚ್ಚಿಟ್ಟ ವಿಷಯಗಳು
ಗುಪ್ತಚರದ ಆರಂಭಿಕ ದಿನಗಳು, ಎಸ್.ಎಂ. ಕೃಷ್ಣ ಅವರ ವ್ಯಕ್ತಿತ್ವ, ಏಕಕಾಲದ ಚುನಾವಣೆಯಿಂದ ಕಾಂಗ್ರೆಸ್ ಕಂಡ ಮುಖಭಂಗ, ಮುಖ್ಯಮಂತ್ರಿಯಾಗಿ ಧರ್ಮಸಿಂಗ್, ಧಾರವಾಡದ ಕೃಷಿ ವಿವಿ ಅತಿಥಿ ಗೃಹವನ್ನೇ ಜೈಲಾಗಿ ಪರಿವರ್ತನೆ ಮಾಡಿಕೊಂಡ ಉಮಾಭಾರತಿ ಪ್ರಕರಣ, ರಾಜಕೀಯ ಸವಾಲುಗಳು, ಆಂಧ್ರದ ಗಡಿಯಿಂದ ಮಲೆನಾಡಿಗೆ ಪಸರಿಸಿದ ನಕ್ಸಲ್ ಸಮಸ್ಯೆ, ನಕ್ಸಲ್ ಮುಖಂಡ ಸಾಕೇತ್ ರಾಜನ್ ಹತ್ಯೆ, ಸಿದ್ದರಾಮಯ್ಯ ಅವರ ಅಹಿಂದ ಚಟುವಟಿಕೆಗಳು, ಅನಿಶ್ಚಿತತೆಯ ರಾಜಕೀಯ ಹಾಗೂ ಭದ್ರತಾ ವ್ಯವಸ್ಥೆಗಳ ಅನುಭವಗಳ ಕುರಿತು ಗುರುಪ್ರಸಾದ ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.