ಕಾರಟಗಿ: ಪುರಸಭೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಗುರುವಾರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಪಿಒಪಿ ಗಣಪತಿ ಮೂರ್ತಿಗಳನ್ನು ಮಾರಾಟದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಿ, ಪಿಒಪಿ ಮೂರ್ತಿ ಮಾರಾಟ ಮಾಡದಂತೆ ಎಚ್ಚರಿಸಿದರು.
ನವಲಿ ವೃತ್ತದಲ್ಲಿ ಪ್ಲಾಸ್ಟರ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶನನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ಮೂರ್ತಿಗಳನ್ನು ಬೇರೆಡೆ ಸ್ಥಳಾಂತರಿಸಲೂ ಸೂಚಿಸಿದರು.
ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಅಕ್ಷತಾ ಮಾತನಾಡಿ, ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಬೇಕು. ಪಿಒಪಿ ಮೂರ್ತಿಗಳನ್ನು ತಯಾರಿಸಿ ಅಥವಾ ಬೇರೆಡೆಯಿಂದ ತಂದು ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂಜಿಸುವಂತೆ ಸರಕಾರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಸಾರ್ವಜನಿಕವಾಗಿ ಮಾಹಿತಿ ನೀಡಲಾಗಿದೆ. ಪಿಒಪಿ ಗಣಪತಿ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಪೂಜಿಸಿದವರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದಲ್ಲಿ ಗಣೇಶ ಮೂರ್ತಿಗಳ ಮಾರಾಟ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪಿಒಪಿ ಮೂರ್ತಿ ಪತ್ತೆ ಹಚ್ಚಿ ಸೂಕ್ತ ಮಾಹಿತಿ ನೀಡಿದ್ದೇವೆ. ಮಣ್ಣಿನ ಮೂರ್ತಿಯನ್ನೇ ಪೂಜಿಸಬೇಕು. ಮಣ್ಣಿನ ಮೂರ್ತಿ ಪೂಜಿಸುವುದೇ ಶ್ರೇಷ್ಠವಾದದ್ದು, ಅಲ್ಲದೇ ಪರಿಸಕ್ಕೂ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದರು.
ಈ ಬಾರಿ ನಾವು ಪಿಒಪಿ ಮೂರ್ತಿಗಳನ್ನು ತರಿಸಿಲ್ಲ. ಅಲ್ಲದೇ ರಾಜ್ಯದ ಪ್ರಮುಖ ನಗರಗಳಲ್ಲಿ ನೆರೆ ಹಾವಳಿ ಬಂದಿದ್ದರಿಂದ ಈ ಬಾರಿ ಹಬ್ಬದಾಚರಣೆಯಲ್ಲೂ ಆಡಂಬರವಿಲ್ಲ. ಪ್ರತಿ ಬಾರಿಗಿಂತ ಈ ಬಾರಿ ಹಬ್ಬದ ವಿಶೇಷತೆ ಹೆಚ್ಚಾಗಿ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಮಾರಾಟ ಮಾಡುತ್ತಿದ್ದೇವೆ ಎಂದು ಗಣಪತಿ ತಯಾರಕರಾದ ಪದ್ಮಾವತಿ ಶುಭಾಶ ರಾವ್ ಚಿತ್ರಗಾರ ತಿಳಿಸಿದರು.