ಪರ್ತ್: ವಿದಾಯದ ಟೆಸ್ಟ್ ಸರಣಿ ಆಡುತ್ತಿರುವ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಅದ್ಭುತ ಶತಕ ಬಾರಿಸಿ ಮಿಂಚಿದ್ದಾರೆ.
ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್ ನಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಅದ್ಭುತ ಆರಂಭ ನೀಡಿದರು.
ತನ್ನ ಟ್ರೇಡ್ ಮಾರ್ಕ್ ಶೈಲಿಯಲ್ಲೇ ಬ್ಯಾಟ್ ಬೀಸಿದ ವಾರ್ನರ್ ಪಾಕ್ ಬೌಲರ್ ಗಳನ್ನು ದಂಡಿಸಿದರು. ಏಕದಿನ ಮಾದರಿಯಲ್ಲಿ ಆಡಿದ ವಾರ್ನರ್ 125 ಎಸೆತಗಳಲ್ಲಿ ಅವರು ಶತಕ ಪೂರೈಸಿದರು. ಆರಂಭದಲ್ಲಿ ಉಸ್ಮಾನ್ ಖ್ವಾಜಾ ಜೊತೆ ವಾರ್ನರ್ ಶತಕದ ಜೊತೆಯಾಟವಾಡಿದರು. ಖ್ವಾಜಾ 41 ರನ್ ಗಳಿಸಿ ಔಟಾದರು.
29ನೇ ಟೆಸ್ಟ್ ಶತಕ ಪೂರೈಸಿದ ವಾರ್ನರ್ ತಮ್ಮ ಎಂದಿನ ಜಿಗಿತದ ಶೈಲಿಯಲ್ಲಿ ಸಂಭ್ರಾಮಾಚರಣೆ ಮಾಡಿದರು. ಸದ್ಯ ಸಕ್ರಿಯ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿದವರಲ್ಲಿ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. ವಾರ್ನರ್ 49 ಶತಕ ಹೊಡೆದಿದ್ದರೆ, ಮೊದಲ ಸ್ಥಾನದಲ್ಲಿರುವ ವಿರಾಟ್ 80 ಶತಕ ಗಳಿಸಿದ್ದಾರೆ.
ಟೀ ವಿರಾಮದ ವೇಳೆಗೆ ಆಸ್ಟ್ರೇಲಿಯಾ ಎರಡು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದೆ. ವಾರ್ನರ್ ಅಜೇಯ 111 ರನ್ ಮತ್ತು ಸ್ಮಿತ್ 21 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.