Advertisement

ಆಸ್ಟ್ರೇಲಿಯಕ್ಕೆ ಲಭಿಸಿತು ಸೆಮಿಫೈನಲ್‌ ಅರ್ಹತೆ

10:10 AM Mar 04, 2020 | sudhir |

ಮೆಲ್ಬರ್ನ್: ನ್ಯೂಜಿಲ್ಯಾಂಡ್‌ ಎದುರಿನ ಜಿದ್ದಾಜಿದ್ದಿ ಸೆಣಸಾಟದಲ್ಲಿ 4 ರನ್ನುಗಳ ರೋಚಕ ಜಯ ಸಾಧಿಸಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಐಸಿಸಿ ವನಿತಾ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

Advertisement

ಸೋಮವಾರ ಇಲ್ಲಿನ “ಜಂಕ್ಷನ್‌ ಓವಲ್‌’ನಲ್ಲಿ ನಡೆದ “ಎ’ ವಿಭಾಗದ ನಿರ್ಣಾಯಕ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 5 ವಿಕೆಟಿಗೆ 155 ರನ್‌ ಮಾಡಿದರೆ, ನ್ಯೂಜಿಲ್ಯಾಂಡ್‌ 7 ವಿಕೆಟಿಗೆ 151ರ ತನಕ ಬಂದು ಶರಣಾಯಿತು. ಇದಕ್ಕೂ ಮೊದಲು ಭಾರತ ಎಲ್ಲ 4 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಉಪಾಂತ್ಯ ತಲುಪಿತ್ತು.

ಮೂನಿ ಬ್ಯಾಟಿಂಗ್‌ ಮಿಂಚು
4 ಬಾರಿಯ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ಪರ ಆರಂಭಿಕ ಆಟಗಾರ್ತಿ ಬೆತ್‌ ಮೂನಿ 60 ರನ್‌ ಬಾರಿಸಿ ಮಿಂಚಿದರು. 50 ಎಸೆತಗಳ ಈ ಸೊಗಸಾದ ಆಟದ ವೇಳೆ 6 ಫೋರ್‌ ಹಾಗೂ 2 ಸಿಕ್ಸರ್‌ ಸಿಡಿಯಲ್ಪಟ್ಟಿತು. ಅಲಿಸ್ಸಾ ಹೀಲಿ ಕೇವಲ 9 ರನ್‌ ಮಾಡಿ ನಿರ್ಗಮಿಸಿದ ಬಳಿಕ ತಂಡವನ್ನು ಆಧರಿಸಿದ ಮೂನಿ 18ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು. ನಾಯಕಿ ಮೆಗ್‌ ಲ್ಯಾನಿಂಗ್‌ ಮತ್ತು ಎಲ್ಲಿಸ್‌ ಪೆರ್ರಿ ತಲಾ 21, ಆ್ಯಶ್ಲಿ ಗಾರ್ಡನರ್‌ 20 ರನ್‌ ಮಾಡಿದರು.

ನ್ಯೂಜಿಲ್ಯಾಂಡಿಗೆ ಲೆಗ್‌ಸ್ಪಿನ್ನರ್‌ ಜಾರ್ಜಿಯಾ ವೇರ್‌ಹ್ಯಾಮ್‌ ಘಾತಕವಾಗಿ ಪರಿಣಮಿಸಿದರು. ಅಗ್ರ ಕ್ರಮಾಂಕದ 3 ವಿಕೆಟ್‌ಗಳನ್ನು ಉರುಳಿಸಿ ಒತ್ತಡ ಹೇರಿದ ಸಾಧನೆಗಾಗಿ ವೇರ್‌ಹ್ಯಾಮ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

2 ಓವರ್‌, 28 ರನ್‌ ಸವಾಲು
ನ್ಯೂಜಿಲ್ಯಾಂಡ್‌ ಕೊನೆಯ 2 ಓವರ್‌ಗಳಿಂದ 28 ರನ್‌, ಅಂತಿಮ ಓವರ್‌ನಲ್ಲಿ 20 ರನ್‌ ಗಳಿಸುವ ಒತ್ತಡಕ್ಕೆ ಸಿಲುಕಿತು. ಕೊನೆಯ 2 ಎಸೆತಗಳಿಂದ 10 ರನ್‌ ಬಾರಿಸಿದ ಕ್ಯಾಟಿ ಮಾರ್ಟಿನ್‌ (4, 6) ಸೋಲಿನ ಅಂತರವನ್ನು ತಗ್ಗಿಸಲಷ್ಟೇ ಯಶಸ್ವಿಯಾದರು. ಅಜೇಯ 37 ರನ್‌ ಮಾಡಿದ ಮಾರ್ಟಿನ್‌ ಅವರದೇ ಕಿವೀಸ್‌ ಸರದಿಯ ಗರಿಷ್ಠ ಗಳಿಕೆ.
ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ “ಬಿ’ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-5 ವಿಕೆಟಿಗೆ 155 (ಮೂನಿ 60, ಲ್ಯಾನಿಂಗ್‌ 21, ಪೆರ್ರಿ 21, ಅನ್ನಾ 31ಕ್ಕೆ 2). ನ್ಯೂಜಿಲ್ಯಾಂಡ್‌-7 ವಿಕೆಟಿಗೆ 151 (ಕ್ಯಾಟಿ ಔಟಾಗದೆ 37, ಡಿವೈನ್‌ 31, ಗ್ರೀನ್‌ 28, ವೇರ್‌ಹ್ಯಾಮ್‌ 17ಕ್ಕೆ 3, ಶಟ್‌ 28ಕ್ಕೆ 3).

ಪಂದ್ಯಶ್ರೇಷ್ಠ: ಜಾರ್ಜಿಯಾ ವೇರ್‌ಹ್ಯಾಮ್‌.

Advertisement

Udayavani is now on Telegram. Click here to join our channel and stay updated with the latest news.

Next