Advertisement

ಆಸ್ಟ್ರೇಲಿಯಾದ ಕತೆ: ಮರ ಮತ್ತು ರೈತ

06:00 AM Oct 21, 2018 | |

ಒಬ್ಬ ರೈತನ ಹೊಲದ ಪಕ್ಕದಲ್ಲಿ ಒಂದು ದೊಡ್ಡ ಗಾತ್ರದ ಸೇಬಿನ ಮರ ಇತ್ತು. ಆ ಮರಕ್ಕೆ ಎಷ್ಟು ವಯಸ್ಸಾಗಿರಬಹುದೆಂಬುದು ರೈತನಿಗೆ ಗೊತ್ತಿರಲಿಲ್ಲ. ಅವನು ಚಿಕ್ಕವನಿರುವಾಗಲೇ ಅದು ಕೊಂಬೆಗಳ ತುಂಬ ಹಣ್ಣು ಹೊತ್ತು ನೆಲದವರೆಗೆ ಬಾಗುತ್ತಿತ್ತು. ಅವನ ತಾಯಿ ಅದರ ಕೊಂಬೆಗೆ ಬಟ್ಟೆಯ ತೊಟ್ಟಿಲು ಕಟ್ಟಿ ಶಿಶುವಾಗಿದ್ದ ಅವನನ್ನು ಮಲಗಿಸಿ ತೂಗುತ್ತಿದ್ದಳು. ಹಸಿವಿನಿಂದ ಅಳುವಾಗ ಹಣ್ಣುಗಳನ್ನು ಕತ್ತರಿಸಿ ಹೊಟ್ಟೆ ತುಂಬ ತಿನ್ನಲು ಕೊಡುತ್ತಿದ್ದಳು. ರೈತ ದೊಡ್ಡವನಾದ ಮೇಲೂ ಅದು ಒಂದು ವರ್ಷವೂ ಹಣ್ಣುಗಳನ್ನು ಕೊಡದೆ ಉಳಿಯುತ್ತಿರಲಿಲ್ಲ. ಅವನು ಮನದಣಿಯೆ ಹಣ್ಣುಗಳನ್ನು ತಿಂದ ಬಳಿಕ ಮಿಗುತ್ತಿದ್ದ ಎಲ್ಲವನ್ನೂ ಪೇಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಅವನಿಂದ ಪ್ರತಿಫ‌ಲ ಬಯಸದೆ ಸೇಬಿನ ಮರ ಅವನಿಗೆ ತನ್ನ ಫ‌ಲಗಳನ್ನು ಕೊಡುತ್ತ ಬಂದಿತ್ತು.

Advertisement

ಒಂದು ದಿನ ಪರ್ಷಿಯದ ಒಬ್ಬ ವ್ಯಾಪಾರಿ ಒಂಟೆಯ ಮೇಲೆ ಕುಳಿತುಕೊಂಡು ರೈತನ ಮನೆಗೆ ಬಂದ. ನೆರಳು ಕೊಡುವ ಸೇಬಿನ ಮರದ ಕೆಳಗೆ ಬಂದು ತಲೆಯೆತ್ತಿ ನೋಡಿದ. ಕೆಂಪುಕೆಂಪಾದ ಹಣ್ಣುಗಳು ಮಾಗಿ ಮನ ಸೆಳೆಯುತ್ತಿದ್ದವು. ಮರವನ್ನು ನೋಡಿ ವ್ಯಾಪಾರಿ ದಂಗಾದ. ಒಂದು ಬೊಗಸೆ ತುಂಬ ಚಿನ್ನದ ನಾಣ್ಯಗಳನ್ನು ರೈತನ ಮುಂದಿರಿಸಿ ಮೌನವಾಗಿ ನಿಂತುಕೊಂಡ. ರೈತನಿಗೆ ಅಚ್ಚರಿಯಾಯಿತು. ಹಣದ ಮೇಲೆ ಆಸೆಯೂ ಮೂಡಿತು. “”ಯಾಕೆ ಈ ಹಣ? ಸೇಬಿನ ಹಣ್ಣುಗಳು ಬೇಕಿತ್ತೆ?” ಎಂದು ಕೇಳಿದ. “”ಹಣವನ್ನು ಕಂಡು ಖುಷಿಯಾಗಿರಬೇಕಲ್ಲವೆ? ಇನ್ನಷ್ಟು ಚಿನ್ನದ ನಾಣ್ಯಗಳು ಬೇಕೆಂದು ಬಯಸುವೆಯಾ?” ಎಂದು ಪ್ರಶ್ನಿಸಿದ ವ್ಯಾಪಾರಿ. “”ನಾಣ್ಯಗಳೆಂದರೆ ಯಾರಿಗೆ ತಾನೆ ಇಷ್ಟವಾಗದು? ಅದೇನೋ ನಿಜ, ಆದರೆ ಇದನ್ನು ಕೊಡುವ ಉದ್ದೇಶವಾದರೂ ಏನು?” ರೈತನಿಗೆ ಇನ್ನಷ್ಟು ಬೆರಗು ಕಾಡಿತು.

“”ನೋಡು, ಸುಮ್ಮನೆ ಚಿನ್ನದ ನಾಣ್ಯಗಳನ್ನು ಕೊಡುವುದಿಲ್ಲ. ನಿನ್ನ ಹೊಲದ ಬಳಿ ಆ ಸೇಬಿನ ಮರ ಇದೆಯಲ್ಲ, ಅದು ಎಷ್ಟು ದೊಡ್ಡ ಬಂಗಾರದ ನಿಧಿಯೆಂಬುದು ನಿನಗೆ ಅರಿವಿದೆಯೆ? ಈ ಮರಕ್ಕೆ ಹಲವು ಶತಮಾನಗಳು ಕಳೆದಿರಬಹುದು. ಅದರ ಒಳಗಿರುವ ತಿರುಳು ಕಲ್ಲಿಗಿಂತ ದೃಢವಾಗಿರುತ್ತದೆ. ಮರವನ್ನು ಕಡಿದು ಸೀಳಿ ತಿರುಳಿನಿಂದ ಒಂದು ಸುಂದರವಾದ ಮಂಚ ತಯಾರಿಸಬೇಕು, ನಮ್ಮ ದೇಶದ ದೊರೆಯ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಡಬೇಕು ಅಂತ ಯೋಚಿಸಿದ್ದೇನೆ. ದೊರೆ ಸಂಪ್ರೀತನಾದರೆ ಮುಗಿಯಿತು, ಇದರ ನೂರು ಪಾಲು ಚಿನ್ನ ನನಗೂ ಸಿಗುತ್ತದೆ. ನಿನಗೆ ಇಡೀ ಜೀವನ ದುಡಿಯದೆ ಊಟ ಮಾಡಲು ಸಾಕಾಗುವಷ್ಟು ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ. ಮರವನ್ನು ಕಡಿದು ಸೀಳಿ, ನನಗೆ ಕೊಡುತ್ತೀಯಾ?” ಎಂದು ಕೇಳಿದ ವ್ಯಾಪಾರಿ.

ಈ ಮಾತು ಕೇಳಿ ರೈತ ತನ್ನ ಭಾಗ್ಯದ ಬಾಗಿಲು ತೆರೆಯಿತೆಂದು ಹಿರಿಹಿರಿ ಹಿಗ್ಗಿದ. “”ಭಾಗ್ಯ ಹುಡುಕಿಕೊಂಡು ಬರುವಾಗ ಇಲ್ಲ ಎನ್ನಲು ನಾನೇನೂ ಮೂರ್ಖನಲ್ಲ. ನಾಳೆ ಬೆಳಗ್ಗೆ ಮರವನ್ನು ಕಡಿದು ಸೀಳಿ ಕೊಡುತ್ತೇನೆ” ಎಂದು ವ್ಯಾಪಾರಿಗೆ ಭರವಸೆ ನೀಡಿದ. ವ್ಯಾಪಾರಿ ಅವನಿಗೆ ಚೀಲ ತುಂಬ ಚಿನ್ನದ ನಾಣ್ಯಗಳನ್ನು ನೀಡಿ ಹೊರಟುಹೋದ. ಬೆಳಗಾಯಿತು. ರೈತ ಕೊಡಲಿಯನ್ನು ತೆಗೆದುಕೊಂಡು ಹೊಲಕ್ಕೆ ಹೋದ. ಮರ ಅವನನ್ನು ನೋಡಿತು. ಭಯದಿಂದ ತತ್ತರಿಸಿತು. ಮರದ ಕೊಂಬೆಗಳನ್ನು, ಪೊಟರೆಗಳನ್ನು ಆಶ್ರಯಿಸಿಕೊಂಡು ಹಲವಾರು ಪ್ರಾಣಿ, ಪಕ್ಷಿಗಳು ಬದುಕುತ್ತಿದ್ದವು. ಅವುಗಳು ಕೂಡ ರೈತ ತಮ್ಮ ನೆಲೆಯನ್ನು ನಾಶ ಮಾಡಲು ಬಂದುದು ಕಂಡು ಕಂಗಾಲಾದವು. ಮರದ ಪೊಟರೆಯಲ್ಲಿ ಬಹು ವರ್ಷಗಳಿಂದ ಮನೆ ಮಾಡಿಕೊಂಡಿದ್ದ ಅಳಿಲು ಅವನ ಬಳಿಗೆ ಬಂದಿತು. “”ರೈತಣ್ಣ, ಏನಿದು, ಇಷ್ಟು ಕಾಲ ನಿನ್ನ ಹಸಿವು ನೀಗುತ್ತಿದ್ದ ಮರವನ್ನು ಕಡಿಯಲು ಮುಂದಾಗಿರುವೆಯಲ್ಲ? ನೀನು ತಿನ್ನದೆ ಉಳಿಸಿದ ಹಣ್ಣುಗಳು ನನ್ನಂತಹ ಎಷ್ಟೋ ಜೀವಿಗಳಿಗೆ ಹೊಟ್ಟೆ ತುಂಬಿಸುತ್ತಿತ್ತು. ಮರವನ್ನು ಕಡಿದು ನಮಗೆ ಆಹಾರವಿಲ್ಲದಂತೆ ಮಾಡಬೇಡ. ಮರ ಉರುಳಿದರೆ ನಮಗೆ ಮನೆಯೇ ಇಲ್ಲದ ಹಾಗಾಗುತ್ತದೆ” ಎಂದು ವಿನಯದಿಂದ ಬೇಡಿಕೊಂಡಿತು. “”ನಿನಗೆ ಮನೆ ಇಲ್ಲವಾಗುತ್ತದೆ ಎಂದು ದಯೆ ತೋರಲು ಹೊರಟರೆ ದೊಡ್ಡ ಸೌಭಾಗ್ಯವನ್ನೇ ಕಳೆದುಕೊಂಡ ಮೂರ್ಖ ನಾನಾಗುತ್ತೇನೆ. ಮರವನ್ನು ಕಡಿಯದೆ ಬಿಡುವುದಿಲ್ಲ” ಎಂದು ಹೇಳಿದ ರೈತ.

    ಆಗ ಹಾಡುವ ಹಕ್ಕಿ ಹಾರುತ್ತ ಬಂದಿತು. “”ರೈತಣ್ಣ, ನೀನು ಮಧ್ಯಾಹ್ನ ಹೊಲದಲ್ಲಿ ದುಡಿದು ಆಯಾಸಗೊಂಡು ಮರದ ಕೊಂಬೆಯ ಮೇಲೇರಿ ಮಲಗಿ ನಿದ್ರಿಸುತ್ತಿದ್ದೆ. ಆಗ ನಿನಗೆ ಹಿತಕರವಾಗಿ ನಾನು ಹಾಡುತ್ತಿದ್ದೆ. ಮರ ನಿರ್ನಾಮವಾದರೆ ಮತ್ತೆ ಎಲ್ಲಿದೆ ನೆರಳು? ನನ್ನ ಹಾಡು? ಬೇಡಪ್ಪ ಬೇಡ, ಹಣದ ಆಸೆಗೆ ಬಲಿಬಿದ್ದು ಮರದ ನಾಶಕ್ಕೆ ಮುಂದಾಗಬೇಡ” ಎಂದು ಪ್ರಾರ್ಥಿಸಿತು.

Advertisement

“”ನನಗೆ ಇದರಿಂದ ಬರುವ ಹಣದ ರಾಶಿಯ ಲೆಕ್ಕ ಹಾಕಿದರೆ ಮುಂದೆ ದುಡಿದು ಆಯಾಸಗೊಳ್ಳುವ ಅಗತ್ಯವೇ ಇಲ್ಲ. ಮನೆಯಲ್ಲೇ ಹಾಯಾಗಿರಬಹುದು. ಮರದ ಕೊಂಬೆಯಾಗಲಿ, ನಿನ್ನ ಹಾಡಾಗಲಿ ನನಗೆ ಬೇಕಾಗಿಲ್ಲ. ಮರವನ್ನು ನಿನ್ನ ಹಾಡಿಗಾಗಿ ಉಳಿಸಿದರೆ ನನ್ನನ್ನು ಮಂದಮತಿಯೆಂದೇ ಕರೆದಾರು” ಎಂದು ರೈತ ಮೊಂಡು ಹಟದಿಂದ ಮುಂದೆ ಬಂದ. ಆಗ ಕಾಗೆಯೊಂದು ರೈತನ ಮುಂದೆ ಅಂಗಲಾಚುತ್ತ, “”ಈಗ ತಾನೇ ಮರದಲ್ಲಿ ಕಟ್ಟಿದ ಗೂಡಿನಲ್ಲಿ ಮೊಟ್ಟೆಗಳನ್ನು ಇಟ್ಟಿದ್ದೇನೆ. ಮರಿಗಳಾಗಲು ಕೆಲವು ದಿನ ಬೇಕು. ನೀನು ಮರವನ್ನು ಕೆಡವಿದರೆ ಮೊಟ್ಟೆಗಳು ಒಡೆದುಹೋಗುತ್ತವೆ. ನನ್ನಂತಹ ಹಲವು ಪಕ್ಷಿಗಳು ಮರದಲ್ಲಿ ಗೂಡುಕಟ್ಟಿ ಮೊಟ್ಟೆಯಿಟ್ಟು ಕಾವು ಕೊಡಲು ಕುಳಿತಿವೆ. ಮರವನ್ನು ಉಳಿಸಿದೆಯಾದರೆ ಚಿನ್ನಕ್ಕಿಂತಲೂ ಶ್ರೇಷ್ಠವಾದ ಪುಣ್ಯವನ್ನು ಸುಲಭವಾಗಿ ಪಡೆಯುವೆ” ಎಂದು ತಿಳಿಹೇಳಿತು.

“”ಪುಣ್ಯ, ಪಾಪದ ಪ್ರಜ್ಞೆಯಿಂದ ಸಂಪತ್ತು ಬರುವುದಿಲ್ಲ. ಸಿರಿತನ ಬರಬೇಕಿದ್ದರೆ ಮರವನ್ನು ಕಡಿಯಲೇಬೇಕು” ಎಂದು ಹೇಳಿ ರೈತ ದೃಢ ನಿರ್ಧಾರದಿಂದ ಮರವನ್ನು ಸಮೀಪಿಸಿದ. ಹಕ್ಕಿಗಳು, ಪ್ರಾಣಿಗಳು ಮಾಡುತ್ತಿರುವ ಆಕ್ರಂದನವನು ಲೆಕ್ಕಿಸದೆ ಮರದ ಬುಡಕ್ಕೆ ಒಂದೇಟು ಹಾಕಿದ. ಅದರಿಂದ ಮರ ಒಂದು ಸಲ ಕಂಪಿಸಿತು ಮರುಕ್ಷಣವೇ ಮರದ ಆಶ್ರಯ ಪಡೆದು ಗೂಡುಕಟ್ಟಿ ಬದುಕುತ್ತಿದ್ದ ಒಂದು ಹೆಜ್ಜೆàನಿನ ದೊಡ್ಡ ಗೂಡು ಅಲುಗಾಡಿತು. ಸಾವಿರಾರು ಜೇನ್ನೊಣಗಳು ಅದರೊಳಗಿಂದ ಎದ್ದುಬಂದವು. ರೈತನ ಮುಂದೆ ನಿಂತು, “”ಎಲವೋ ಮನುಷ್ಯನೇ, ಇಷ್ಟೊಂದು ಕೃತಘ್ನನಾಗಬೇಡ. ನೀನು ಚಿಕ್ಕವನಿದ್ದಾಗ ನಿನ್ನ ಅಮ್ಮ ನಿನ್ನನ್ನು ಈ ಮರದ ಕೆಳಗೆ ತಂದು ಮಲಗಿಸಿ ಕೆಲಸದಲ್ಲಿ ತೊಡಗಿದ್ದಳು. ಆಗ ನಿನಗೆ ಒಂದು ವಿಷಜಂತುವು ಕಡಿಯಿತು. ಸಾವಿನೊಂದಿಗೆ ಹೋರಾಡುತ್ತಿದ್ದ ನಿನ್ನನ್ನು ನೋಡಿ ನಿನ್ನಮ್ಮ ಕಂಗಾಲಾಗಿ ಅಳತೊಡಗಿದಳು. ಆಗ ನಾವು ಕನಿಕರದಿಂದ ಜೇನು ತುಂಬಿದ ಒಂದು ಎರಿಯನ್ನು ಕತ್ತರಿಸಿ ನೇರವಾಗಿ ನಿನ್ನ ಬಾಯಿಗೆ ಬೀಳುವಂತೆ ಎಸೆದೆವು, ಜೇನು ನಾಲಿಗೆಗೆ ತಗುಲಿದ ಕೂಡಲೇ ವಿಷವಿಳಿದು ನೀನು ಬದುಕಿಕೊಂಡೆ. ಇದನ್ನು ಮರೆತು ಮರವನ್ನು ಕೊಲ್ಲಲು ಮುಂದಾಗಿರುವ ನಿನಗೆ ನಾವೇ ಶಿಕ್ಷೆ ವಿಧಿಸುತ್ತೇವೆ” ಎಂದು ಹೇಳಿದವು.

ಜೇನ್ನೊಣಗಳ ಮಾತು ಕೇಳಿದ ಕೂಡಲೇ ರೈತನಿಗೆ ಕಳೆದುಹೋದ ಈ ಘಟನೆ ನೆನಪಿಗೆ ಬಂದಿತು. ತನ್ನ ವರ್ತನೆಯ ಬಗೆಗೆ ಅವನಿಗೆ ನಾಚಿಕೆಯಾಯಿತು. ಕೊಡಲಿಯನ್ನು ಕೆಳಗೆ ಹಾಕಿ, ಮರವನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತ. “”ನಾನು ಕೃತಘ್ನನಾಗಿ ದೊಡ್ಡ ತಪ್ಪು ಮಾಡುತ್ತಿದ್ದೆ. ನನ್ನನ್ನು ಸಾವಿನಿಂದ ಪಾರು ಮಾಡಿದ ಜೇನ್ನೊಣಗಳಿಗೆ ಈ ಮರ ಆಶ್ರಯ ಕೊಡದೆ ಹೋಗಿದ್ದರೆ ಇಂದು ನಾನು ಜೀವದಿಂದ ಇರುತ್ತಿರಲಿಲ್ಲ. ಇನ್ನು ಎಂದಿಗೂ ಸಕಲ ಜೀವಗಳಿಗೆ ಮನೆಯಾಗಿರುವ ಈ ಮರವನ್ನು ನಾಶ ಮಾಡಲಾರೆ” ಎಂದು ಹೇಳಿ ಮನೆಗೆ ಬಂದ. ವ್ಯಾಪಾರಿ ಬಂದ ಕೂಡಲೇ ಅವನು ಕೊಟ್ಟ ನಾಣ್ಯಗಳ ಚೀಲವನ್ನು ಮರಳಿ ಕೊಡುತ್ತ, “”ಈ ಚಿನ್ನಕ್ಕಿಂತ, ರತ್ನಕ್ಕಿಂತ, ಜಗತ್ತಿನ ಯಾವುದೇ ಸಂಪತ್ತಿಗಿಂತ ನನಗೆ ಮರದ ಜೀವವೇ ಹೆಚ್ಚಿನದು. ಹಲವು ಜೀವಗಳಿಗೆ ಮನೆಯಾಗಿರುವ ಅದನ್ನು ಜಗತ್ತನ್ನೇ ಕೊಟ್ಟರೂ ಕಡಿಯಲಾರೆ” ಎಂದು ಹೇಳಿದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next