ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಮೆರಿನ್ನರ ಪ್ರಾಬಲ್ಯ ಮುಂದುವರಿಯುವ ಸೂಚನೆ ಲಭಿ ಸಿದೆ. ಬುಧವಾರವಷ್ಟೇ ಹಾಲಿ ಚಾಂಪಿಯನ್ ರಫೆಲ್ ನಡಾಲ್ ಅವರನ್ನು ಉರುಳಿಸುವ ಮೂಲಕ ಅಮೆರಿಕದ ಮೆಕೆಂಝಿ ಮೆಕ್‌ಡೊನಾಲ್ಡ್ ದೊಡ್ಡ ಹೀರೋ ಎನಿಸಿದ್ದರು. ಇದೀಗ ಜೆನ್ಸನ್ ಬ್ರೂಕ್ಸ್‌ಬೈ ಸರದಿ.
ಗುರುವಾರದ 2ನೇ ಸುತ್ತಿನ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ನಾರ್ವೆ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು ಅಮೆರಿಕದ ಜೆನ್ಸನ್ ಬ್ರೂಕ್ಸ್‌ಬೈ ಮನೆಗೆ ಅಟ್ಟಿದರು. ಇದರೊಂದಿಗೆ ಇಬ್ಬರು ನೆಚ್ಚಿನ ಆಟಗಾರರು ಒಂದೇ ದಿನದ ಅಂತರದಲ್ಲಿ ಮೆಲ್ಬರ್ನ್ಗೆ ಗುಡ್‌ಬೈ ಹೇಳಬೇಕಾಯಿತು.
ಕ್ಯಾಲಿಫೋರ್ನಿಯಾದ 22 ವರ್ಷದ ಶ್ರೇಯಾಂಕ ರಹಿತ ಆಟಗಾರ ಜೆನ್ಸನ್ ಬ್ರೂಕ್ಸ್ 6-3, 7-5, 6-7 (4-7), 6-2 ಅಂತರದಿಂದ ಕ್ಯಾಸ್ಪರ್ ರೂಡ್ ಆಟಕ್ಕೆ ತೆರೆ ಎಳೆದರು. ರೂಡ್ ಕಳೆದ ವರ್ಷದ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಫೈನಲಿಸ್ಟ್ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.
“ಕ್ಯಾಸ್ಪರ್ ಓರ್ವ ವಾರಿಯರ್. ಇದೊಂದು ದೊಡ್ಡ ಕದನವಾಗಲಿದೆ ಎಂಬ ಅಂದಾಜಿತ್ತು. ಹಾಗೆಯೇ ನನಗೆ ನನ್ನ ಆಟದ ಮಟ್ಟದ ಮೇಲೆ ವಿಶ್ವಾಸವಿತ್ತು. ಪಂದ್ಯವನ್ನು ತೀರಾ ಗಂಭೀರವಾಗೇನೂ ತೆಗೆದುಕೊಳ್ಳಲಿಲ್ಲ. ಕಳೆದ ವರ್ಷ ನನಗೆ ಕೋವಿಡ್ ಇತ್ತು. ಹೀಗಾಗಿ ಆಸ್ಟ್ರೇಲಿ ಯನ್ ಓಪನ್ ಪದಾರ್ಪಣೆ ಸಾಧ್ಯವಾಗಲಿಲ್ಲ. ಈ ಸಲ ತುಂಬು ವಿಶ್ವಾಸದೊಂದಿಗೆ ಬಂದಿದ್ದೇನೆ’ ಎಂಬುದಾಗಿ ಜೆನ್ಸನ್ ಬ್ರೂಕ್ಸ್‌ಬೈ ಹೇಳಿದರು.
ಮುಂದಿನ ಸುತ್ತು “ಆಲ್ ಅಮೆರಿಕನ್’ ಹೋರಾಟವಾಗಲಿದೆ. ಜೆನ್ಸನ್ ಬ್ರೂಕ್ಸ್‌ಬೈ ತಮ್ಮದೇ ದೇಶದ ಟಾಮಿ ಪೌಲ್ ವಿರುದ್ಧ ಆಡಲಿದ್ದಾರೆ. ಪೌಲ್ ಸ್ಪೇನ್‌ನ ಅಲೆಕ್ಸಾಂಡ್ರೊ ಡೆವಿ ಡೋವಿಕ್ ಫೋಕಿನ ಅವರನ್ನು 5 ಸೆಟ್‌ಗಳ ಹೋರಾಟದಲ್ಲಿ ಮಣಿಸಿದರು.