ಮೆಲ್ಬರ್ನ್: ಭಾರತದ ಸಾನಿಯಾ ಮಿರ್ಜಾ-ಕ್ರೊವೇಶಿಯಾದ ಇವಾನ್ ಡೋಡಿಗ್ ಜೋಡಿ ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್ ಫೈನಲ್‌ನಲ್ಲಿ ಎಡವಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಅಮೆರಿಕದ ಅಬಿಗೇಲ್ ಸ್ಪಿಯರ್-ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಕಬಾಲ್ ಸೇರಿಕೊಂಡು ಇಂಡೋ-ಕ್ರೊವೇಶಿಯನ್ ಜೋಡಿಯನ್ನು 6-2, 6-4 ಅಂತರದ ನೇರ ಸೆಟ್‌ಗಳಲ್ಲಿ ಮಣಿಸಿತು. ಇದು ಸ್ಪಿಯರ್-ಕಬಾಲ್ ಜೋಡಿಗೆ ಒಲಿದ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.
ದ್ವಿತೀಯ ಶ್ರೇಯಾಂಕದ ಸಾನಿಯಾ-ಡೋಡಿಗ್ ಫೈನಲ್‌ಗೆ ತಕ್ಕ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ಅದರಲ್ಲೂ ಡೋಡಿಗ್ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಆವರು ಸರ್ವ್ ಮತ್ತು ಗ್ರೌಂಡ್ ಸ್ಟ್ರೋಕ್‌ಗಳೆರಡರಲ್ಲೂ ಎಡವಿದರು. ಇದು ಕೊಲಂಬಿಯನ್ ಜೋಡಿಗೆ ವರವಾಗಿ ಪರಿಣಮಿಸಿತು.
ಮೊದಲ ಸೆಟ್‌ನಲ್ಲೇ ಡೋಡಿಗ್ ಎಡವಿದಾಗ ಈ ಪಂದ್ಯ ಎತ್ತ ಸಾಗುತ್ತಿದೆ ಎಂಬುದು ಸ್ಪಷ್ಟಗೊಳ್ಳತೊಡಗಿತು. ಇಲ್ಲಿ ಸತತ 4 ಗೇಮ್ ಕಳೆದುಕೊಂಡ ಇಂಡೋ-ಕ್ರೊವೇಶಿಯನ್ ಜೋಡಿ ಮತ್ತೆ ಮೇಲೇಳಲಿಲ್ಲ. ಸಾನಿಯಾ ಭರವಸೆಯ ಆಟವಾಡುತ್ತಿದ್ದರೂ ಇದರಿಂದ ಪ್ರಯೋಜನವಾಗಲಿಲ್ಲ. ಇನ್ನೊಂದೆಡೆ ಎದುರಾಳಿ ಆಟಗಾರರು ಅಮೋಘ ಲಯದಲ್ಲಿದ್ದರು. ಸ್ಪಿಯರ್ ಅವರಂತೂ ಅದ್ಭುತ ಹಿಡಿತ ಸಾಧಿಸಿ ಮುನ್ನುಗ್ಗುತ್ತಿದ್ದರು. ದ್ವಿತೀಯ ಸೆಟ್‌ನಲ್ಲಿ 4-0 ಮುನ್ನಡೆ ಸಾಧಿಸಿದ್ದೇ ಇವರ ಪರಾಕ್ರಮಕ್ಕೆ ಸಾಕ್ಷಿ.
2ನೇ ಫೈನಲ್ ಸೋಲು
ಸಾನಿಯಾ ಮಿರ್ಜಾ-ಇವಾನ್ ಡೋಡಿಗ್ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಎಡವಿದ 2ನೇ ಸಂದರ್ಭ ಇದಾಗಿದೆ. ಕಳೆದ ವರ್ಷದ ಫ್ರೆಂಚ್ ಓಪನ್ ಫೈನಲ್‌ನಲ್ಲೂ ಇವರು ಸೋಲುಂಡಿದ್ದರು. ಅಂದು ಇವರನ್ನು ಕೆಡವಿದವರು ಮಾರ್ಟಿನಾ ಹಿಂಗಿಸ್-ಲಿಯಾಂಡರ್ ಪೇಸ್.
ಈ ಸೋಲಿನೊಂದಿಗೆ ಸಾನಿಯಾ ಮಿರ್ಜಾ 7ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಾಗಿ ಇನ್ನೂ ಕಾಯಬೇಕಾಯಿತು. 2009ರಲ್ಲಿ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲೇ ತಮ್ಮ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಅಭಿಯಾನ ಆರಂಭಿಸಿದ್ದರು. ಅಂದು ಮಹೇಶ್ ಭೂಪತಿ ಜತೆಗೂಡಿ ಮಿಕ್ಸೆಡ್ ಡಬಲ್ಸ್ ಚಾಂಪಿಯನ್ ಆಗಿದ್ದರು.