Advertisement

ಆಸ್ಟ್ರೇಲಿಯನ್‌ ಓಪನ್‌: ಜೊಕೋ, ಸಬಲೆಂಕಾ ಕ್ವಾ . ಫೈನಲ್‌

10:55 PM Jan 23, 2023 | Team Udayavani |

ಮೆಲ್ಬರ್ನ್: ಬೆಲರೂಸ್‌ನ ಅರಿನಾ ಸಬಲೆಂಕಾ ಮೊದಲ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದು, ಫೇವರಿಟ್‌ ಯಾದಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ 4ನೇ ಶ್ರೇಯಾಂಕದ ಕ್ಯಾರೋಲಿನ್‌ ಗಾರ್ಸಿಯಾ ಪೋಲೆಂಡ್‌ನ‌ 17ರ ಹರೆಯದ ಎದುರಾಳಿಗೆ ಶರಣಾಗಿ ಕೂಟದಿಂದ ಹೊರಬಿದ್ದರು.

Advertisement

ಪುರುಷರ ವಿಭಾಗದಿಂದ ನೆಚ್ಚಿನ ಆಟಗಾರ ನೊವಾಕ್‌ ಜೊಕೋವಿಕ್‌, ರಷ್ಯಾದ ಆ್ಯಂಡ್ರೆ ರುಬ್ಲೇವ್‌ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದಿದ್ದಾರೆ.

ಅರಿನಾ ಸಬಲೆಂಕಾ ಸ್ವಿಜರ್ಲೆಂಡ್‌ನ‌ ಬೆಲಿಂಡಾ ಬೆನ್ಸಿಕ್‌ಗೆ 7-5, 6-2 ಅಂತರದ ಸೋಲುಣಿಸಿದರು. ಇವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಕ್ರೊವೇಶಿಯಾದ ಡೋನಾ ವೆಕಿಕ್‌.

ಕ್ಯಾರೋಲಿನ್‌ ಗಾರ್ಸಿಯಾ ಅವರನ್ನು ಮಣಿಸಿ ದವರು ಪೋಲೆಂಡ್‌ನ‌ ಮಾಗಾ ಲಿನೆಟ್‌. ವಿಶ್ವದ 45ನೇ ರ್‍ಯಾಂಕಿಂಗ್‌ ಆಟಗಾರ್ತಿಯಾಗಿರುವ ಲಿನೆಟ್‌ 7-6 (7-3), 6-4ರಿಂದ ಗೆದ್ದು ಬಂದರು.

ರುಬ್ಲೇವ್‌ ಬಚಾವ್‌!
ಪುರುಷರ ಸಿಂಗಲ್ಸ್‌ನಲ್ಲಿ ಆ್ಯಂಡ್ರೆ ರುಬ್ಲೇವ್‌ 5 ಸೆಟ್‌ಗಳ ದಿಟ್ಟ ಕಾದಾಟವೊಂದರಲ್ಲಿ ಮೇಲುಗೈ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಇವರಿಗೆ ಬೆವರಿಳಿಸಿದವರು ಡೆನ್ಮಾರ್ಕ್‌ನ ಹೋಲ್ಗರ್‌ ರುನ್‌. ರುಬ್ಲೇವ್‌ ಗೆಲುವಿನ ಅಂತರ 6-3, 3-6, 6-3, 4-6, 7-6 (11-9). ರುಬ್ಲೇವ್‌ ಅವರಿನ್ನು ನೊವಾಕ್‌ ಜೊಕೋವಿಕ್‌ ವಿರುದ್ಧ ಅದೃಷ್ಟಪರೀಕ್ಷೆಗೆ ಇಳಿಯುವರು. ನೊವಾಕ್‌ ಜೊಕೋವಿಕ್‌ 6-2, 6-1, 6-2ರಿಂದ ಆತಿಥೇಯ ದೇಶದ ಅಲೆಕ್ಸ್‌ ಡಿ ಮಿನೌರ್‌ ಅವರನ್ನು ಮಣಿಸಿದರು.

Advertisement

ಸಾನಿಯಾ-ಬೋಪಣ್ಣ ಮುನ್ನಡೆ
ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ-ರೋಹನ್‌ ಬೋಪಣ್ಣ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇವರಿಬ್ಬರು ಸೇರಿಕೊಂಡು ಉರುಗ್ವೆಯ ಏರಿಯಲ್‌ ಬೆಹಾರ್‌ ಹಾಗೂ ಜಪಾನ್‌ನ ಮಕೊಟೊ ನಿನೋಮಿಯಾ ಜೋಡಿಯನ್ನು 6-4, 7-6 (9)ರಿಂದ ಹಿಮ್ಮೆಟ್ಟಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತೀಯ ಜೋಡಿ ಜೆಲೆನಾ ಒಸ್ಟಾಪೆಂಕೊ (ಲಾತ್ವಿಯಾ)-ಡೇವಿಡ್‌ ವೇಗ ಹೆರ್ನಾಂಡೆಝ್ (ಸ್ಪೇನ್‌) ವಿರುದ್ಧ ಸೆಣಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next