ಮೆಲ್ಬರ್ನ್: ಭಾರತದ ಪ್ರತಿಭಾನ್ವಿತ ಟೆನಿಸಿಗ ಸುಮಿತ್ ನಾಗಲ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯ ಪ್ರಧಾನ ಸುತ್ತು ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಕೊನೆಯ ಅರ್ಹತಾ ಪಂದ್ಯದಲ್ಲಿ ಸುಮಿತ್ ನಾಗಲ್ ಸ್ಲೊವಾಕಿಯಾದ ಅಲೆಕ್ಸ್ ಮೊಲ್ಕಾನ್ ವಿರುದ್ಧ 6-4, 6-4 ಅಂತರದ ಗೆಲುವು ಸಾಧಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 139ನೇ ಸ್ಥಾನದಲ್ಲಿರುವ ಸುಮಿತ್ ನಾಗಲ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಮುಖ್ಯ ಸುತ್ತಿನಲ್ಲಿ ಕಾಣಿಸಿಕೊಂಡ 2ನೇ ನಿದರ್ಶನ ಇದಾಗಿದೆ. ಮೊದಲ ಸಲ 2021ರಲ್ಲಿ ಈ ಅವಕಾಶ ಲಭಿಸಿತ್ತು. ಅಂದು ಲಿಥುವೇನಿಯಾದ ರಿಕಾರ್ಡ್ಸ್ ಬೆರಂಕಿಸ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು. ಅಲ್ಲಿಂದೀಚೆ ಭಾರತೀಯರ್ಯಾರೂ ಮೆಲ್ಬರ್ನ್ ಪಾರ್ಕ್ ಕೂಟದ ಸಿಂಗಲ್ಸ್ ವಿಭಾಗದಲ್ಲಿ ಮುಖ್ಯ ಸುತ್ತು ಪ್ರವೇಶಿಸಿರಲಿಲ್ಲ.
ಸುಮಿತ್ ನಾಗಲ್ 2019 ಮತ್ತು 2020ರ ಯುಎಸ್ ಓಪನ್ ಪ್ರಧಾನ ಸುತ್ತು ತಲುಪಿದ್ದರು. 2019ರ ಮೊದಲ ಸುತ್ತಿನಲ್ಲಿ ರೋಜರ್ ಫೆಡರರ್ ಅವರನ್ನು 4 ಸೆಟ್‌ಗಳಿಗೆ ಎಳೆದು ತಂದಿದ್ದರು.
2020ರಲ್ಲಿ ಆತಿಥೇಯ ನಾಡಿನ ಬ್ರಾಡ್ಲಿ ಕ್ಲಾನ್ ಅವರನ್ನು ಮಣಿಸಿ ದ್ವಿತೀಯ ಸುತ್ತು ತಲುಪಿದ್ದರು. ಅಲ್ಲಿ ಡೊಮಿನಿಕ್ ಥೀಮ್‌ಗೆ ಶರಣಾಗಿದ್ದರು.