ಮೆಲ್ಬರ್ನ್: ಹಾಲಿ ಚಾಂಪಿಯನ್‌ಗಳಾದ ನೊವಾಕ್ ಜೊಕೋವಿಕ್ ಮತ್ತು ಅರಿನಾ ಸಬಲೆಂಕಾ ಮತ್ತೂಂದು ಅಧಿಕಾರಯುತ ಜಯದೊಂದಿಗೆ ಆಸ್ಟ್ರೇಲಿಯನ್ ಓಪನ್ ತೃತೀಯ ಸುತ್ತು ತಲುಪಿದ್ದಾರೆ. ಆದರೆ ಕ್ಯಾರೊಲಿನ್ ವೋಜ್ನಿಯಾಕಿ, ಓನ್ಸ್ ಜೆಬ್ಯೂರ್ ಅವರ ಆಟ ದ್ವಿತೀಯ ಸುತ್ತಿನಲ್ಲಿ ಕೊನೆಗೊಂಡಿದೆ.
ನೊವಾಕ್ ಜೊಕೋವಿಕ್ ಆತಿ ಥೇಯ ಆಸ್ಟ್ರೇಲಿಯದ ಅಲೆಕ್ಸಿ ಪಾಪಿರ್ನ್ ವಿರುದ್ಧ 6-4, 4-6, 7-6 (7-4), 6-3 ಅಂತರದ ಗೆಲುವು ಸಾಧಿಸಿದರು.ಬೆಲರೂಸ್‌ನ ಅರಿನಾ ಸಬಲೆಂಕಾ 16 ವರ್ಷದ ಜೆಕ್ ಆಟಗಾರ್ತಿ ಬ್ರೆಂಡಾ ಫ್ರುವಿಟೋìವಾ ಅವರನ್ನು 6-3, 6-2ರಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಲೆಸಿಯಾ ಸುರೆಂಕೊ ವಿರುದ್ಧ ಸೆಣಸಲಿದ್ದಾರೆ.
ಅಮೆರಿಕದ ಕೊಕೊ ಗಾಫ್ ತಮ್ಮದೇ ದೇಶದ ಕ್ಯಾರೋಲಿನ್ ಡೋಲ್‌ಹೈಡ್ ವಿರುದ್ಧ 7-6 (2), 6-2 ಅಂತರ ದಿಂದ ಗೆದ್ದು ಬಂದರು. ಗಾಫ್ ಮುಂದಿನ ಸುತ್ತಿನಲ್ಲೂ ಅಮೆರಿಕದ ಆಟಗಾರ್ತಿಯನ್ನೇ ಎದುರಿಸಲಿದ್ದಾರೆ. ಈ ಎದುರಾಳಿ ಅಲಿಸಿಯಾ ಪಾರ್ಕ್. ಇವರು ಲೇಲಾ ಫೆರ್ನಾಂಡಿಸ್ ವಿರುದ್ಧ 7-5, 6-4 ಅಂತರದ ಜಯ ಸಾಧಿಸಿದರು.
2018ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನ್ ವೋಜ್ನಿಯಾಕಿ ರಷ್ಯಾದ ಮರಿಯಾ ಟಿಮೊಫೀವಾ ವಿರುದ್ಧ ಆಘಾತಕಾರಿ ಸೋಲನುಭವಿಸಿದರು. ಅರ್ಹತಾ ಸುತ್ತಿನಿಂದ ಬಂದ ಟಿಮೊಫೀವಾ 1-6, 6-4, 6-1 ಅಂತರದಿಂದ ಗೆದ್ದು ಬಂದರು. ರಷ್ಯಾದ ಮತ್ತೋರ್ವ ಯುವ ಆಟಗಾರ್ತಿ ಮಿರ್ರಾ ಆ್ಯಂಡ್ರೀವಾ 6-0, 6-2ರಿಂದ ಓನ್ಸ್ ಜೆಬ್ಯೂರ್ ಆಟಕ್ಕೆ ತೆರೆ ಎಳೆದರು.
ಜಾನಿಕ್ ಸಿನ್ನರ್ ಜಯ
ಇಟಲಿಯ ಜಾನಿಕ್ ಸಿನ್ನರ್ ಸತತ 3ನೇ ವರ್ಷ 3ನೇ ಸುತ್ತು ಪ್ರವೇಶಿಸಿದರು. ಅವರು ಡಚ್ ಟೆನಿಸಿಗ ಜೆಸ್ಪರ್ ಡಿ ಜಾಂಗ್ ವಿರುದ್ಧ 6-2, 6-2, 6-2 ಗೆಲುವು ಸಾಧಿಸಿದರು.