Advertisement

ಚುಂಗ್‌ ಗಾಯಾಳು; ಫೈನಲ್‌ನಲ್ಲಿ ಫೆಡರರ್‌

12:04 PM Jan 27, 2018 | |

ಮೆಲ್ಬರ್ನ್: ಅನೇಕ ದೊಡ್ಡ ಬೇಟೆಗಳನ್ನಾಡಿ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಪ್ರವೇಶಿಸಿದ ದಕ್ಷಿಣ ಕೊರಿಯಾದ 21ರ ಹರೆಯದ ಹೈಯಾನ್‌ ಚುಂಗ್‌ ಅವರ ಆಸ್ಟ್ರೇಲಿಯನ್‌ ಓಪನ್‌ ಅಭಿಯಾನ ದುರಂತವಾಗಿ ಕೊನೆಗೊಂಡಿದೆ. ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ ಎದುರಿನ ಶುಕ್ರವಾರದ ಬಹು ನಿರೀಕ್ಷಿತ ಸೆಮಿಫೈನಲ್‌ ಮೇಲಾಟದ ವೇಳೆ ಪಾದದ ನೋವಿಗೆ ಸಿಲುಕಿದ ಚುಂಗ್‌ ಅರ್ಧದಲ್ಲೇ ಪಂದ್ಯದಿಂದ ಹಿಂದೆ ಸರಿಯುವ ಸಂಕಟಕ್ಕೆ ಸಿಲುಕಿದರು. ರವಿವಾರದ ಫೈನಲ್‌ ರೋಜರ್‌ ಫೆಡರರ್‌ ಮತ್ತು ಮರಿನ್‌ ಸಿಲಿಕ್‌ ನಡುವೆ ಸಾಗಲಿದೆ.

Advertisement

ಎಡಗಾಲಿನ ನೋವು ತೀವ್ರಗೊಳ್ಳುವ ವೇಳೆ ಹೈಯಾನ್‌ ಚುಂಗ್‌ ಮೊದಲ ಸೆಟ್‌ ಕಳೆದುಕೊಂಡಿದ್ದರು ಹಾಗೂ 2ನೇ ಸೆಟ್‌ನಲ್ಲಿ ಹಿನ್ನಡೆಯಲ್ಲಿದ್ದರು. ಹೀಗಾಗಿ ಫೆಡರರ್‌ ಅವರನ್ನು ಹಿಮ್ಮೆಟ್ಟಿಸುವ ಯಾವುದೇ ಸಾಧ್ಯತೆಯನ್ನು ಚುಂಗ್‌ ಹೊಂದಿರಲಿಲ್ಲ. 6-1, 5-2ರ ಮುನ್ನಡೆಯಲ್ಲಿದ್ದ ಫೆಡರರ್‌ ಸ್ಪಷ್ಟ ಗೆಲುವಿನತ್ತ ದಾಪುಗಾಲಿಕ್ಕುತ್ತಿದ್ದರು. ಇವರಿಬ್ಬರ ನಡುವಿನ ರ್ಯಾಕೆಟ್‌ ಸಮರ ಒಂದು ಗಂಟೆ, 2 ನಿಮಿಷಗಳ ತನಕ ಸಾಗಿತ್ತು. ಇದರೊಂದಿಗೆ ಫೆಡರರ್‌ ಅವರ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಗೆಲುವು-ಸೋಲಿನ ದಾಖಲೆ 30-13ಕ್ಕೆ ವಿಸ್ತರಿಸಲ್ಪಟ್ಟಿತು.

ರೋಜರ್‌ ಫೆಡರರ್‌ ಪಾಲಿಗೆ ಇದು 7ನೇ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌. ಈವರೆಗೆ 5 ಸಲ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. 2ನೇ ಸಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅವಕಾಶವೊಂದು ಸ್ವಿಸ್‌ ಸ್ಟಾರ್‌ಗೆ ಎದುರಾಗಿದೆ. ಫೆಡರರ್‌ ಮೊದಲ ಸಲ 2006 ಮತ್ತು 2007ರಲ್ಲಿ ಈ ಸಾಧನೆ ಮಾಡಿದ್ದರು. ರವಿವಾರವೂ ಗೆದ್ದರೆ ಫೆಡರರ್‌ 20ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಒಡೆಯನೆನಿಸಿಕೊಳ್ಳುತ್ತಾರೆ. 

ಫೆಡರರ್‌ ಫೇವರಿಟ್‌
ರವಿವಾರದ ಫೈನಲ್‌ನಲ್ಲಿ ರೋಜರ್‌ ಫೆಡರರ್‌ ಅವರೇ ಫೇವರಿಟ್‌ ಎಂದು ಟೆನಿಸ್‌ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಫೆಡರರ್‌ ಅವರ ಅನುಭವ ಹಾಗೂ ಪ್ರಚಂಡ ಫಾರ್ಮ್, ಅವರು ಸಿಲಿಕ್‌ ವಿರುದ್ಧ ಸಾಧಿಸಿರುವ ಮೇಲುಗೈ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಸಿಲಿಕ್‌ ವಿರುದ್ಧ ಈವರೆಗೆ 9 ಪಂದ್ಯಗಳನ್ನಾಡಿರುವ ಫೆಡರರ್‌ಎಂಟನ್ನು ಗೆದ್ದು, ಒಮ್ಮೆಯಷ್ಟೇ ಸೋತಿದ್ದಾರೆ.

ಫೆಡರರ್‌ ಈವರೆಗೆ 19 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ
ಗಳನ್ನು ಬಾಚಿಕೊಂಡರೆ, ಸಿಲಿಕ್‌ ಗೆದ್ದದ್ದು ಒಂದು ಗ್ರ್ಯಾನ್‌ಸ್ಲಾಮ್‌ ಮಾತ್ರ. ಅದು 2014ರ ಯುಎಸ್‌ ಓಪನ್‌ ಪಂದ್ಯಾವಳಿಯಲ್ಲಿ ಒಲಿದಿತ್ತು.

Advertisement

ಫೈನಲ್‌ ಪ್ರವೇಶಿಸಿದ ಬೋಪಣ್ಣ ಜೋಡಿ
ಆಸ್ಟ್ರೇಲಿಯನ್‌ ಓಪನ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ ಹಾಗೂ ಹಂಗೇರಿಯದ ಟೈಮಿಯಾ ಬಬೋಸ್‌ ಜೋಡಿ ಫೈನಲ್‌ಗೇರಿದೆ. ಇಬ್ಬರೂ ಸೇರಿಕೊಂಡು ಡೆಮಾಲಿನರ್‌-ಮಾರ್ಟಿನೆಜ್‌ ಸ್ಯಾಂಚೆಸ್‌ ಅವರನ್ನು 7-5, 5-7, 10-6ರಿಂದ ಸೋಲಿಸಿದರು. ಇಬ್ಬರೂ ಬಿರುಸಿನ ಆಟದ ಮೂಲಕ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next