Advertisement

ಕೆರ್ಬರ್‌-ಕೆಯ್ಸ ಕ್ವಾರ್ಟರ್‌ ಫೈನಲ್‌ ಕದನ

06:50 AM Jan 23, 2018 | |

ಮೆಲ್ಬರ್ನ್: ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಮತ್ತು ಅಮೆರಿಕದ ಭರವಸೆಯಾಗಿರುವ ಮ್ಯಾಡಿಸನ್‌ ಕೆಯ್ಸ ಆಸ್ಟ್ರೇಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. 

Advertisement

ವಿಶ್ವದ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್‌ ಕೂಡ ಎಂಟರ ಸುತ್ತಿಗೆ ಹಾರಿದ್ದಾರೆ.ಈ ಕೂಟದಲ್ಲಿ ಉಳಿದಿರುವ ಏಕೈಕ ಮಾಜಿ ಚಾಂಪಿಯನ್‌ ಕೆರ್ಬರ್‌, ಭಾರೀ ಪ್ರತಿರೋಧ ಒಡ್ಡಿದ ಥೈವಾನಿನ ಹಿರಿಯ ಆಟಗಾರ್ತಿ ಹೀ ಸು ವೀ ವಿರುದ್ಧ 4-6, 7-5, 6-2 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. ದ್ವಿತೀಯ ಸೆಟ್‌ನಲ್ಲಿ ಸ್ವಲ್ಪವೇ ಯಾಮಾರಿದರೂ ಕೆರ್ಬರ್‌ ಕತೆ ಕೊನೆಗೊಳ್ಳುತ್ತಿತ್ತು. ಆದರೆ ಜರ್ಮನ್‌ ಆಟಗಾರ್ತಿಯ ಅದೃಷ್ಟ ಚೆನ್ನಾಗಿತ್ತು.

2016ರ ಚಾಂಪಿಯನ್‌ ಆಗಿರುವ ಕೆರ್ಬರ್‌, ಹಿಂದಿನ ಸುತ್ತಿನಲ್ಲಿ ಮತ್ತೋರ್ವ ಮಾಜಿ ಚಾಂಪಿಯನ್‌ ಮರಿಯಾ ಶರಪೋವಾ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಸಿದ್ದರು. ಆದರೆ 88ನೇ ರ್‍ಯಾಂಕಿಂಗ್‌ನ ಸು ವೀ ಎದುರು ಇದೇ ಜೋಶ್‌ ತೋರುವಲ್ಲಿ ವಿಫ‌ಲರಾದರು.

“ನಾನು ಗೆದ್ದರೂ ಈ ಪಂದ್ಯದ ಶ್ರೇಯವೆಲ್ಲ ಸು ವೀಗೇ ಸಲ್ಲಬೇಕು. ಆಕೆಯ ಆಟ ನಂಬಲಾಗದ ಮಟ್ಟದಲ್ಲಿತ್ತು. ನಾನು ಅಂಕಣದ ಮೂಲೆ ಮೂಲೆಗೂ ಓಡಾಡುತ್ತಲೇ ಉಳಿಯಬೇಕಾಯಿತು’ ಎಂದು ಕೆರ್ಬರ್‌ ಪ್ರತಿಕ್ರಿಯಿಸಿದ್ದಾರೆ.
ನಂ.3 ಗಾರ್ಬಿನ್‌ ಮುಗುರುಜಾ ಮತ್ತು ಅಪಾಯಕಾರಿ ಆಗ್ನಿàಸ್ಕಾ ರಾದ್ವಂಸ್ಕಾ ಅವರನ್ನು ಕೆಡವಿ ಬಂದ ಹೀ ಸು ವೀ, ಜರ್ಮನ್‌ ಆಟಗಾರ್ತಿಯ ವಿರುದ್ಧವೂ ಜಬರ್ದಸ್ತ್ ಪ್ರದರ್ಶನ ಮುಂದುವರಿಸಿದರು. ಆದರೆ ನಸೀಬು ಕೈಕೊಟ್ಟಿತು.

ಗಾರ್ಸಿಯಾ ಪರಾಜಯ
ಆ್ಯಂಜೆಲಿಕ್‌ ಕೆರ್ಬರ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಮ್ಯಾಡಿಸನ್‌ ಕೆಯ್ಸ ಫ್ರಾನ್ಸ್‌ನ 8ನೇ ಶ್ರೇಯಾಂಕಿತೆ ಕ್ಯಾರೋಲಿನ್‌ ಗಾರ್ಸಿಯಾ ಅವರನ್ನು 6-3, 6-2ರಿಂದ ಸುಲಭದಲ್ಲಿ ಸೋಲಿಸಿದರು. ಕೇವಲ 68 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

Advertisement

ಕಳೆದ ವರ್ಷದ ಯುಎಸ್‌ ಓಪನ್‌ ಫೈನಲಿಸ್ಟ್‌ ಆಗಿರುವ ಮ್ಯಾಡಿಸನ್‌ ಕೆಯ್ಸ, ಮಾಜಿ ಆಟಗಾರ್ತಿ ಲಿಂಡ್ಸೆ ಡೆವನ್‌ಪೋರ್ಟ್‌ ಮಾರ್ಗದರ್ಶನದಲ್ಲಿ ಪಳಗುತ್ತಿದ್ದಾರೆ. “ನಾನು ಬಲಿಷ್ಠ ಹಾಗೂ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದೇನೆ. ನನ್ನ ಸರ್ವ್‌, ರಿಟರ್ನ್ಸ್ ಎಲ್ಲವೂ ಉತ್ತಮ ಮಟ್ಟದಲ್ಲಿದೆ. ಇದಕ್ಕೆ ಈ ಪಂದ್ಯ ಉತ್ತಮ ಉದಾಹರಣೆ’ ಎಂಬುದು 22ರ ಹರೆಯದ ಮ್ಯಾಡಿಸನ್‌ ಕೆಯ್ಸ ಪ್ರತಿಕ್ರಿಯೆ.

ಹಾಲೆಪ್‌ ಹಾರಾಟ
ಮೊದಲ ಆಸ್ಟ್ರೇಲಿಯನ್‌ ಓಪನ್‌ ಮೇಲೆ ಕಣ್ಣಿಟ್ಟಿರುವ ರೊಮೇನಿಯಾದ ಸಿಮೋನಾ ಹಾಲೆಪ್‌ ಜಪಾನಿನ ನವೋಮಿ ಒಸಾಕಾ ಅವರನ್ನು 6-3, 6-2 ಅಂತರದಿಂದ ಸುಲಭದಲ್ಲಿ ಮಣಿಸಿದರು. ಈ ಶ್ರೇಯಾಂಕ ರಹಿತ ಆಟಗಾರ್ತಿಯನ್ನು ಸೋಲಿಸಲು ಹಾಲೆಪ್‌ 81 ನಿಮಿಷ ತೆಗೆದುಕೊಂಡರು.

“ಮತ್ತೆ ಇಲ್ಲಿ ಕ್ವಾರ್ಟರ್‌ ಫೈನಲ್‌ ಕಾಣುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಹಾಲೆಪ್‌ ಗೆಲುವಿನ ಬಳಿಕ ಮಾಧ್ಯಮದವರಲ್ಲಿ ಹೇಳಿದರು. ಹಾಲೆಪ್‌ ಮೆಲ್ಬರ್ನ್ ಅಂಗಳದಲ್ಲಿ ಕೊನೆಯ ಸಲ ಎಂಟರ ಸುತ್ತು ತಲಪಿದ್ದು 2015ರಲ್ಲಿ.

ಹಿಂದಿನ ಪಂದ್ಯದಲ್ಲಿ ಲಾರೆನ್‌ ಡೇವಿಸ್‌ ಅವರನ್ನು ಮಣಿಸಲು ಹಾಲೆಪ್‌ 3 ಗಂಟೆ, 44 ನಿಮಿಷ ತೆಗೆದುಕೊಂಡಿದ್ದರು. ಆದರೆ ಒಸಾಕಾ ವಿರುದ್ಧ ಇದಕ್ಕಿಂತ 143 ನಿಮಿಷಗಳಷ್ಟು ಕಡಿಮೆ ಅವಧಿಯಲ್ಲಿ ಗೆದ್ದು ಬಂದರು. “ನನ್ನ ಪಾಲಿಗೆ ಇದೊಂದು ಮ್ಯಾರಥಾನ್‌ ಟೂರ್ನಿಯಾಗಿತ್ತು. ಆದರೆ ಇನ್ನು ಪಂದ್ಯದ ಅವಧಿಯನ್ನು ಕಡಿಮೆ ಮಾಡಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದೇನೆ’ ಎಂದೂ ಹಾಲೆಪ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next