ಮೆಲ್ಬರ್ನ್: ವಿಶ್ವದ ನಂಬರ್ ವನ್ ಟೆನಿಸಿಗ ಬ್ರಿಟನ್ನಿನ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ತೃತೀಯ ಸುತ್ತನ್ನು ಸುಲಭದಲ್ಲಿ ದಾಟಿದ್ದಾರೆ. ಮಾಜಿ ಚಾಂಪಿಯನ್ಸ್ ಸ್ಟಾನಿಸ್ಲಾಸ್ ವಾವ್ರಿಂಕ, ರೋಜರ್ ಫೆಡರರ್, ಜೋ ವಿಲ್‌ಫ್ರೆಡ್ ಸೋಂಗ, ಕೀ ನಿಶಿಕೊರಿ ಕೂಡ ಗೆಲುವಿನ ಸವಾರಿ ಮಾಡಿದ್ದಾರೆ.
ಶುಕ್ರವಾರದ ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನ ಕಾಳಗದಲ್ಲಿ ಆ್ಯಂಡಿ ಮರ್ರೆ 6-4, 6-2, 6-4 ನೇರ ಸೆಟ್‌ಗಳಿಂದ ಅಮೆರಿಕದ ಸ್ಯಾಮ್ ಕ್ವೆರ್ರಿ ಅವರನ್ನು ಪರಾಭವಗೊಳಿಸಿದರು. ಮರ್ರೆ ಈವರೆಗೆ 5 ಸಲ “ಮೆಲ್ಬರ್ನ್ ಪಾರ್ಕ್’ನಲ್ಲಿ ಫೈನಲ್‌ಗೆ ನೆಗೆದರೂ ಒಮ್ಮೆಯೂ ಟ್ರೋಫಿಗೆ ಮುತ್ತಿಟ್ಟಿಲ್ಲ. ಮರ್ರೆ ಅವರ ಪ್ರೀ-ಕ್ವಾರ್ಟರ್ ಫೈನಲ್ ಎದುರಾಳಿ ಜರ್ಮನಿಯ ಮಿಶಾ ಜ್ವೆರೇವ್. ಅವರು ಟ್ಯುನೀಶಿಯಾದ ಮಾಲೆಕ್ ಜಝಿರಿ ವಿರುದ್ಧ 6-1, 4-6, 6-3, 6-0 ಅಂತರದ ಜಯ ಸಾಧಿಸಿದರು.
2014ರ ಚಾಂಪಿಯನ್, ಸ್ವಿಸ್ ತಾರೆ ಸ್ಟಾನಿಸ್ಲಾಸ್ ವಾವ್ರಿಂಕ ಭಾರೀ ಸವಾಲಿನ ಸ್ಪರ್ಧೆಯೊಂದರಲ್ಲಿ ಸರ್ಬಿಯಾದ 29ನೇ ಶ್ರೇಯಾಂಕದ ವಿಕ್ಟರ್ ಟ್ರೊಯಿಕಿ ವಿರುದ್ಧ 3-6, 6-2, 6-2, 7-6 (9-7) ಅಂತರದ ವಿಕ್ಟರಿ ಸಾಧಿಸಿದರು. ವಾವ್ರಿಂಕ ಅವರಿನ್ನು ಇಟಲಿಯ ಆ್ಯಂಡ್ರಿಯಾಸ್ ಸೆಪ್ಪಿ ವಿರುದ್ಧ ಸೆಣಸಲಿದ್ದಾರೆ. ಸೆಪ್ಪಿ ಬೆಲ್ಜಿಯಂನ ಸ್ಟೀವ್ ಡಾರ್ಸಿಸ್ ವಿರುದ್ಧ ಸಾಕಷ್ಟು ಬೆವರಿಳಿಸಿಕೊಂಡು 4-6, 6-4, 7-6 (1), 7-6 (2) ಅಂತರದಿಂದ ಗೆದ್ದು ಬಂದರು.
ಫೆಡರರ್‌ಗೆ ಸುಲಭ ಜಯ
4 ಬಾರಿಯ ಮಾಜಿ ಚಾಂಪಿಯನ್ ರೋಜರ್ ಫೆಡರರ್ ಜೆಕ್ ಆಟಗಾರ ಥಾಮಸ್ ಬೆರ್ಡಿಶ್ ಅವರನ್ನು ಸುಲಭದಲ್ಲಿ ಹಿಮ್ಮೆಟ್ಟಿಸಿದರು. ಅಂತರ 6-2, 6-4, 6-4. ಇವರ ಎದುರಾಳಿಯಾಗಿ ಕಾಣಿಸಿಕೊಳ್ಳುವ ಕೀ ನಿಶಿಕೊರಿ 6-4, 6-4, 6-4 ಅಂತರದಿಂದ ಸ್ಲೊವಾಕಿಯಾದ ಲುಕಾಸ್ ಲ್ಯಾಕೊ ಅವರನ್ನು ಮಣಿಸಿದರು.
ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ಸೋಂಗ ಅಮೆರಿಕದ ಜಾಕ್ ಸಾಕ್ ಅವರಿಗೆ ಶಾಕ್ ನೀಡಲು ಭಾರೀ ಒದ್ದಾಟ ನಡೆಸಿದರು. ಕೊನೆಗೂ 7-6 (7-4), 7-5, 6-7 (8-10), 6-3 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. ಬ್ರಿಟನ್ನಿನ ಡೇನಿಯಲ್ ಇವಾನ್ಸ್ ತವರಿನ 27ನೇ ಶ್ರೇಯಾಂಕಿತ ಆಟಗಾರ ಬರ್ನಾರ್ಡ್ ಟಾಮಿಕ್ ಅವರನ್ನು 7-5, 7-6 (7-2), 7-6 (7-3)ರಿಂದ ಉರುಳಿಸಿದರು.