Advertisement
ಮೆಲ್ಬರ್ನ್: ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರನ್ನು ಕಾಣಲು, ಕ್ರಿಕೆಟ್ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಏನೇನೋ ಸಾಹಸ ಮಾಡುವುದುಂಟು. ಈ ಸಾಲಿಗೆ ಹೊಸ ಸೇರ್ಪಡೆ ಆಸ್ಟ್ರೇಲಿಯದ ಮ್ಯಾಕ್ಸ್ ವೈಟ್ ಎಂಬ 12ರ ಹರೆಯದ ಬಾಲಕ. ಈತ ಆ್ಯಶಸ್ ಟೆಸ್ಟ್ ಪಂದ್ಯವನ್ನು ಸ್ಟೇಡಿಯಂನಲ್ಲಿ ಕುಳಿತು ನೋಡುವ ಸಲುವಾಗಿ 4 ವರ್ಷಗಳಿಂದ ಮನೆಮನೆಯ ತ್ಯಾಜ್ಯ ವಿಲೇವಾರಿ ಮಾಡಿ ಹಣ ಸಂಗ್ರಹಿಸುತ್ತಿದ್ದ!
2015ರ ವಿಶ್ವಕಪ್ ಫೈನಲ್‌ನಲ್ಲಿ ಮೆಲ್ಬರ್ನ್ ಮೈದಾನದಲ್ಲಿ ನ್ಯೂಜಿಲ್ಯಾಂಡನ್ನು ಸೋಲಿಸಿ ಆಸ್ಟ್ರೇಲಿಯ ಕಪ್ ಎತ್ತಿದ ಪಂದ್ಯವನ್ನು ಮ್ಯಾಕ್ಸ್ ನೋಡಿದ್ದ. ಆದರೆ ಆ್ಯಶಸ್ ಸರಣಿಯಲ್ಲಿ ತನ್ನ ದೇಶ ಆಡುವುದನ್ನು ನೋಡಬೇಕೆನ್ನುವುದು ಮ್ಯಾಕ್ಸ್ ಮತ್ತು ಅವನ ತಾಯಿಯ ಆಸೆಯಾಗಿತ್ತು. ಈ ಆಸೆ ಈಡೇರಬೇಕಾದರೆ 1,500 ಆಸ್ಟ್ರೇಲಿಯ ಡಾಲರ್ ಬೇಕೆಂದು ಮ್ಯಾಕ್ಸ್‌ಗೆ ಅವನ ತಂದೆ ಡ್ಯಾಮಿನ್ ವೈಟ್ ಹೇಳಿದ್ದರು. ಇಷ್ಟು ಹಣ ಒಟ್ಟು ಮಾಡುವ ಸಲುವಾಗಿ ಮ್ಯಾಕ್ಸ್ ಮತ್ತು ತಾಯಿ ಮನೆಯಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಕಾಯಕ ಶುರು ಮಾಡಿದರು. ಈ ಮೂಲಕ 4 ವರ್ಷದಲ್ಲಿ ಮ್ಯಾಕ್ಸ್ ಮಾತ್ರವಲ್ಲದೆ ಅವನ ಇಡೀ ಕುಟುಂಬ ಇಂಗ್ಲೆಂಡಿಗೆ ಪ್ರಯಾಣಿಸಲು ಸಾಕಾಗುವಷ್ಟು ಹಣ ಸಂಗ್ರಹವಾಗಿತ್ತು.
Related Articles
ಮ್ಯಾಂಚೆಸ್ಟರ್‌ನಲ್ಲಿ ಆ್ಯಶಸ್ ಸರಣಿಯ 4ನೇ ಪಂದ್ಯವನ್ನು ವೀಕ್ಷಿಸಿದ ತೃಪ್ತಿ ವೈಟ್‌ನದ್ದಾಗಿದೆ. ಅಷ್ಟೇ ಅಲ್ಲ, ಸ್ಟೀವ್ ಸ್ಮಿತ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಭೇಟಿ ಮಾಡುವ ಅದೃಷ್ಟವೂ ಮ್ಯಾಕ್ಸ್‌ಗೆ ಸಿಕ್ಕಿತು. ಮ್ಯಾಕ್ಸ್ ಕ್ರಿಕೆಟ್ ಅಭಿಮಾನಕ್ಕೆ ಬೌಲ್ಡ್ ಆದ ಜೇಮ್ಸ್ ಪ್ಯಾಟಿನ್ಸನ್ ತಂಡದ ಎಲ್ಲ ಆಟಗಾರರ ಹಸ್ತಾಕ್ಷರ ಇರುವ ಆಸ್ಟ್ರೇಲಿಯದ ಜೆರ್ಸಿಯನ್ನೂ ಉಡುಗೊರೆಯಾಗಿ ನೀಡಿದ್ದಾರೆ!
Advertisement