ಅಡಿಲೇಡ್: ಆ್ಯಶಸ್ ಸರಣಿಯ ಎರಡನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಅಡಿಲೇಡ್ ಓವಲ್ ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದ ಸ್ಟೀವ್ ಸ್ಮಿತ್ ಪಡೆ ಪಿಂಕ್ ಬಾಲ್ ಟೆಸ್ಟ್ ನಲ್ಲಿ ತನ್ನ ಅಜೇಯ ಗೆಲುವಿನ ದಾಖಲೆಯನ್ನು ಮುಂದುವರಿಸಿತು.
ಗೆಲುವಿಗೆ 468 ರನ್ ಗಳ ದೊಡ್ಡ ಮೊತ್ತವನ್ನು ಬೆನ್ನತ್ತಿದ್ದರ ರೂಟ್ ಪಡೆ 192 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 275 ರನ್ ಅಂತರದ ಸೋಲನುಭವಿಸಿತು.
82 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಲ್ಲಿಂದ ಅಂತಿಮ ದಿನದ ಬ್ಯಾಟಿಂಗ್ ಮುಂದುವರಿಸಿದ ಆಂಗ್ಲರು ಇಂದೂ ಸತತ ವಿಕೆಟ್ ಕಳೆದುಕೊಂಡರು. ಕ್ರಿಸ್ ವೋಕ್ಸ್ 44 ರನ್ ಗಳಿಸಿದ್ದೇ ಇಂಗ್ಲೆಂಡ್ ಇನ್ನಿಂಗ್ಸ್ ನ ಹೆಚ್ಚಿನ ಗಳಿಕೆ. ವಿಕೆಟ್ ಕೀಪರ್ ಬ್ಯಾಟ್ಸಮನ್ ಜೋಸ್ ಬಟ್ಲರ್ ಪಂದ್ಯವನ್ನು ಡ್ರಾ ಮಾಡಲು ಭಾರೀ ಪ್ರಯತ್ನ ಮಾಡಿದರು. 207 ಎಸೆತದಲ್ಲಿ 26 ರನ್ ಗಳಿಸಿದ್ದ ವೇಳೆ ಬಟ್ಲರ್ ಹಿಟ್ ವಿಕೆಟ್ ಗೆ ಬಲಿಯಾದರು.
ಇದನ್ನೂ ಓದಿ:ದೇಶೀಯ ಕೂಟ ಮುಂದೂಡಿದ ದ.ಆಫ್ರಿಕಾ: ಭಾರತ ವಿರುದ್ಧದ ಸರಣಿ ನಡೆಯುವುದೂ ಅನುಮಾನ!
ಆಸೀಸ್ ಪರ ಜೇ ರಿಚರ್ಡ್ಸನ್ ಐದು ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಲಿಯಾನ್ ತಲಾ ಎರಡು ವಿಕೆಟ್ ಕಿತ್ತರು. ಮತ್ತೊಂದು ವಿಕೆಟ್ ಮೈಕರ್ ನೆಸರ್ ಪಾಲಾಯಿತು. ಆಸೀಸ್ ಪರ ಎಂಟು ಮಂದಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ಇಂದಿನ ಗೆಲುವಿನೊಂದಿಗೆ ಆಸೀಸ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಆಸೀಸ್ ಈವರೆಗೆ ಆಡಿದ ಎಲ್ಲಾ 9 ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದ ಸಾಧನೆ ಮಾಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ, ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ ಮಾರ್ನಸ್ ಲಬುಶೇನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮುಂದಿನ ಪಂದ್ಯ ಡಿ.26ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ.