ಮೆಲ್ಬೋರ್ನ್: ಆಸ್ಟ್ರೇಲಿಯಾ ನೆಲದಲ್ಲಿ ಇಂಗ್ಲೆಂಡ್ ತಂಡದ ನೀರಸ ಪ್ರದರ್ಶನ ಮುಂದುವರಿದಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 14 ರನ್ ಅಂತರದಿಂದ ಗೆದ್ದ ಪ್ಯಾಟ್ ಕಮಿನ್ಸ್ ಪಡೆಯು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆ ಆ್ಯಶಸ್ ಸರಣಿ ಗೆದ್ದುಕೊಂಡಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದ್ದಲ್ಲಿಂದ ಇಂದಿನ ಆಟ ಆರಂಭಿಸಿದ ಇಂಗ್ಲೆಂಡ್ 68 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮೊದಲ ಪಂದ್ಯವಾಡುತ್ತಿರುವ ಸ್ಕಾಟ್ ಬೊಲ್ಯಾಂಡ್ ಕೇವಲ ಏಳು ರನ್ ನೀಡಿ ಆರು ವಿಕೆಟ್ ಪಡೆದರು. ಇದಕ್ಕಾಗಿ ಬೊಲ್ಯಾಂಡ್ ಎಸೆದಿದ್ದು ಕೇವಲ ನಾಲ್ಕು ಓವರ್ ಮಾತ್ರ.
ಇದನ್ನೂ ಓದಿ:ಕೊಹ್ಲಿಯ ಉದ್ವೇಗವೇ ರೋಹಿತ್ ಪಟ್ಟದ ಹಿಂದಿನ ರಹಸ್ಯ
ನಾಯಕ ರೂಟ್ 28 ರನ್ ಗಳಿಸಿದರೆ, ಬೆನ್ ಸ್ಟೋಕ್ಸ್ 11 ರನ್ ಗಳಿಸಿದರು. ಇವರಿಬ್ಬರನ್ನು ಹೊರತು ಪಡಿಸಿ ಉಳಿದ ಯಾವ ಆಟಗಾರನೂ ಎರಡಂಕಿ ಮೊತ್ತ ಗಳಿಸಲಿಲ್ಲ. ಇಂಗ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ನಾಲ್ಕು ಮಂದಿ ಶೂನ್ಯ ಸುತ್ತಿದರು.
ಸ್ಟಾರ್ಕ್ ಮೂರು ವಿಕೆಟ್ ಪಡೆದರೆ, ಒಂದು ವಿಕೆಟ್ ಗ್ರೀನ್ ಪಾಲಾಯಿತು. ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲೇ ಪ್ಯಾಟ್ ಕಮಿನ್ಸ್ ವಿಜಯ ಸಾಧಿಸಿದರು. ಸ್ಕಾಟ್ ಬೊಲ್ಯಾಂಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಂದಿನ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 267
ಇಂಗ್ಲೆಂಡ್ 185 ಮತ್ತು 68