ಲಂಡನ್: ಕೊನೆಯ ದಿನದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷೆ ಮಾಡಿದ್ದ ಮ್ಯಾಜಿಕ್ ನಡೆಯಲಿಲ್ಲ. ಭಾರತದ ಐಸಿಸಿ ಟ್ರೋಫಿ ಬರ ನೀಗಲಿಲ್ಲ. ಈ ಬಾರಿಯಾದರೂ ಟೆಸ್ಟ್ ಗದೆ ಎತ್ತಬೇಕು ಎಂಬ ಟೀಂ ಇಂಡಿಯಾದ ಕನಸು ನನಸಾಗಲಿಲ್ಲ.
ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಭರ್ಜರಿಯಾಗಿ ಗೆದ್ದು ಬೀಗಿದೆ.
444 ರನ್ ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಲಿಳಿದ ಭಾರತ ತಂಡವು 234 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ 209 ರನ್ ಅಂತರದ ಸೋಲನುಭವಿಸಿತು.
ಮೂರು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದ್ದಲ್ಲಿಂದ ಅಂತಿಮ ದಿನದಾಟ ಆರಂಭಿಸಿದ ಟೀಂ ಇಂಡಿಯಾದ ಭರವಸೆ ಹೆಚ್ಚು ಹೊತ್ತು ಉಳಿಯಲಿಲ್ಲ. 49 ರನ್ ಗಳಿಸಿ ಉತ್ತಮವಾಗಿ ಕಾಣುತ್ತಿದ್ದ ವಿರಾಟ್ ಕೊಹ್ಲಿ ಸ್ಮಿತ್ ಗೆ ಕ್ಯಾಚಿತ್ತು ಔಟಾದರು. ಬೊಲ್ಯಾಂಡ್ ಗೆ ಈ ವಿಕೆಟ್ ಲಭಿಸಿತು. ಇದೇ ಓವರ್ ನಲ್ಲಿ ಬೊಲ್ಯಾಂಡ್ ಮತ್ತೊಂದು ಆಘಾತ ನೀಡಿದರು. ಕೇವಲ ಎರಡು ಎಸೆತ ಎದುರಿಸಿದ ಜಡೇಜಾ ಕೂಡಾ ಕೊಹ್ಲಿ ಬೆನ್ನ ಹಿಂದೆಯೇ ಪೆವಿಲಿಯನ್ ಗೆ ನಡೆದರು.
ಭಾರತದ ಆಶಾಕಿರಣವಾಗಿದ್ದ ಅಜಿಂಕ್ಯ ರಹಾನೆ ಕೂಡಾ ಮತ್ತೆ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 46 ರನ್ ಗಳಿಸಿದ ಅಜಿಂಕ್ಯ ಸ್ಟಾರ್ಕ್ ಎಸೆತದಲ್ಲಿ ಕೀಪರ್ ಗೆ ಕ್ಯಾಚ್ ನೀಡಿ ಔಟಾದರು. ಭರತ್ ಆಟವು 23 ರನ್ ಗೆ ಅಂತ್ಯವಾಯಿತು.
ಆಸ್ಟ್ರೇಲಿಯಾ ಪರ ನಥನ್ ಲಿಯಾನ್ ನಾಲ್ಕು ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಮತ್ತು ಸ್ಕಾಟ್ ಬೊಲ್ಯಾಂಡ್ ತಲಾ ಮೂರು ವಿಕೆಟ್ ಕಿತ್ತರು. ಒಂದು ವಿಕೆಟ್ ಕಮಿನ್ಸ್ ಪಾಲಾಯಿತು.
ಕಳೆದ ಸೀಸನ್ ನಲ್ಲಿ ಫೈನಲ್ ನಲ್ಲಿ ಎಡವಿದ್ದ ಭಾರತ ತಂಡ ಈ ಬಾರಿಯೂ ಫೈನಲ್ ಗೆ ತಲುಪಿದರೂ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಯಿತು. ಮೊದಲ ಬಾರಿಗೆ ಫೈನಲ್ ತಲುಪಿದ ಆಸ್ಟ್ರೇಲಿಯಾ ಟೆಸ್ಟ್ ಗದೆ ಗೆದ್ದು ಬೀಗಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 469 & 270/8 ಡಿಕ್ಲೇರ್
ಭಾರತ: 296 & 234