ಮ್ಯಾಂಚೆಸ್ಟರ್: ಸ್ಯಾಮ್ ಬಿಲ್ಲಿಂಗ್ ಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡ ಆಸೀಸ್ ವಿರುದ್ಧ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ 19 ರನ್ ಗಳ ಸೋಲನುಭವಿಸಿದೆ.
ಆಸೀಸ್ ಒಂಬತ್ತು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದರೆ, ಮಾರ್ಗನ್ ಪಡೆ ಒಂಬತ್ತು ವಿಕೆಟ್ ಕಳೆದುಕೊಂಡು 275 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ ಗೆ ಉತ್ತಮ ಆರಂಭವೇನು ಸಿಗಲಿಲ್ಲ. ವಾರ್ನರ್ ಮತ್ತು ಫಿಂಚ್ ಬೇಗನೇ ಔಟಾದರು. ಸ್ಟೋಯಿನಸ್ 43 ರನ್ ಗಳಿಸಿದರು. ಒಂದು ಹಂತದಲ್ಲಿ 123 ರನ್ ಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್ ಗೆ ನೆರವಾಗಿದ್ದು ಮ್ಯಾಕ್ಸವೆಲ್ ಮತ್ತು ಮಿಚ್ ಮಾರ್ಶ್.
ಮಾರ್ಶ್ 73 ರನ್ ಗಳಿಸಿದರೆ, ಭರ್ಜರಿಯಾಗಿ ಬ್ಯಾಟ್ ಬೀಸಿದ ಮ್ಯಾಕ್ಸ್ ವೆಲ್ ನಾಲ್ಕು ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು. ಅಂತಿಮವಾಗಿ ಕಾಂಗರೂ ಪಡೆ 294 ರನ್ ಗಳಿಸಿತು. ಇಂಗ್ಲೆಂಡ್ ಪರ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ ಮೂರು ವಿಕೆಟ್ ಪಡೆದರು. ರಶೀದ್ ಎರಡು ಮತ್ತು ವೋಕ್ಸ್ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಥಾಮಸ್ ಮತ್ತು ಉಬೆರ್ ಕಪ್: ಬ್ಯಾಡ್ಮಿಂಟನ್ ತಂಡ ಪ್ರಕಟ
ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಉತ್ತಮ ಆರಂಭ ಸಿಗಲಿಲ್ಲ. ರಾಯ್, ರೂಟ್, ಬಟ್ಲರ್, ಅಲಿ ಒಂದಂಕಿಗೆ ಔಟಾದರು. ಜಾನಿ ಬೆರಿಸ್ಟೋ 84 ರನ್ ಗಳಿಸಿದರು. ಸೋಲಿನ ಸುಳಿಯತ್ತ ಹೊರಟಿದ್ದ ತಂಡವನ್ನು ಕಾಪಾಡಲು ಧಾವಿಸಿದ ಸ್ಯಾಮ್ ಬಿಲ್ಲಿಂಗ್ ಭರ್ಜರಿ ಶತಕ ಬಾರಿಸಿದರು. ಬಿಲ್ಲಿಂಗ್ 118 ರನ್ ಗಳಿಸಿದರೂ ತಂಡವನ್ನು ಜಯದ ಹಾದಿಗೆ ತರಲಾಗಲಿಲ್ಲ.
ಇಂಗ್ಲೆಂಡ್ 275 ರನ್ ಅಷ್ಟೇ ಗಳಿಸಿತು. 19 ರನ್ ಸೋಲನುಭವಿಸಿತು. ಆ್ಯಡಂ ಜಾಂಪಾ ನಾಲ್ಕು ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್ ವುಡ್ ಪ್ರಮುಖ ಮೂರು ವಿಕೆಟ್ ಪಡೆದರು. ಈ ಕಾರಣಕ್ಕೆ ಹ್ಯಾಜಲ್ ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇಂಗ್ಲೆಂಡ್ ಮತ್ತು ಆಸೀಸ್ ನಡುವಿನ 150ನೇ ಏಕದಿನ ಪಂದ್ಯ ಇದಾಗಿದ್ದು, ಆಸೀಸ್ ಇದನ್ನು ಸ್ಮರಣೀಯವನ್ನಾಗಿಸಿತು.