Advertisement

ಆಸ್ಟ್ರೇಲಿಯ 118 ರನ್‌ ವಿಜಯ

06:00 AM Mar 06, 2018 | |

ಡರ್ಬನ್‌: ಡರ್ಬನ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯದ ಗೆಲುವಿನ ಔಪಚಾರಿಕತೆ ಅಂತಿಮ ದಿನದ 22 ಎಸೆತಗಳಲ್ಲಿ ಪೂರ್ತಿಗೊಂಡಿದೆ. 4ನೇ ದಿನ 9ಕ್ಕೆ 293 ರನ್‌ ಮಾಡಿದ್ದ ಆತಿಥೇಯ ದಕ್ಷಿಣ ಆಫ್ರಿಕಾ 298ಕ್ಕೆ ಸರ್ವಪತನ ಕಂಡಿತು. ಇದರೊಂದಿಗೆ ಕಿಂಗ್ಸ್‌ಮೀಡ್‌ನ‌ಲ್ಲಿ ಪ್ರವಾಸಿ ಆಸೀಸ್‌ 118 ರನ್ನುಗಳ ಅಮೋಘ ಗೆಲುವು ಸಾಧಿಸಿ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು.

Advertisement

ಗೆಲುವಿಗೆ 417 ರನ್ನುಗಳ ಕಠಿನ ಸವಾಲು ಪಡೆದಿದ್ದ ದಕ್ಷಿಣ ಆಫ್ರಿಕಾ, ಐಡನ್‌ ಮಾರ್ಕ್‌ರಮ್‌ ಅವರ ಶತಕದ ನೆರವಿನಿಂದ 4ನೇ ದಿನದಾಟದಲ್ಲಿ ಹೋರಾಟವೊಂದನ್ನು ಜಾರಿಯಲ್ಲಿರಿಸಿತ್ತು. ಆದರೆ ವೇಗಿ ಮಿಚೆಲ್‌ ಸ್ಟಾರ್ಕ್‌ ದಾಳಿಗೆ ತತ್ತರಿಸಿ ಕೊನೆಯ 5 ವಿಕೆಟ್‌ಗಳನ್ನು ಬರೀ 15 ರನ್‌ ಅಂತರದಲ್ಲಿ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಹ್ಯಾಟ್ರಿಕ್‌ ವಂಚಿತ ಸ್ಟಾರ್ಕ್‌ 75 ರನ್ನಿತ್ತು 4 ವಿಕೆಟ್‌ ಕಿತ್ತರು. ಮೊದಲ ಸರದಿಯಲ್ಲಿ ಸ್ಟಾರ್ಕ್‌ ಸಾಧನೆ 34ಕ್ಕೆ 5 ವಿಕೆಟ್‌. ಈ ಸಾಹಸಕ್ಕಾಗಿ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

4ನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಒಂದು ವಿಕೆಟ್‌ ಉಳಿಸಿಕೊಂಡು ಸೋಲಿನ ಅಂಚಿಗೆ ಬಂದು ನಿಂತಿತ್ತು. ಅಂತಿಮ ದಿನವಾದ ಸೋಮವಾರ 83 ರನ್‌ ಮಾಡಿದ ಡಿ ಕಾಕ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದ ಹ್ಯಾಝಲ್‌ವುಡ್‌ ಆಸ್ಟ್ರೇಲಿಯದ ಗೆಲುವನ್ನು ಸಾರಿದರು. 

ಮಾರ್ಕ್‌ರಮ್‌ ಹೋರಾಟ
ಒಂದೆಡೆ ವಿಕೆಟ್‌ಗಳು ಉರುಳುತ್ತ ಹೋದರೂ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಐಡನ್‌ ಮಾರ್ಕ್‌ರಮ್‌ 143 ರನ್‌ ಬಾರಿಸಿದ್ದು ಹರಿಣಗಳ ಸರದಿಯ ಅಮೋಘ ಸಾಧನೆಯಾಗಿ ದಾಖಲಾಯಿತು. ಇದು ಮಾರ್ಕ್‌ರಮ್‌ ಅವರ 3ನೇ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. 340 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡ ಮಾರ್ಕ್‌ರಮ್‌ 218 ಎಸೆತಗಳನ್ನು ನಿಭಾಯಿಸಿದರು. ಇದರಲ್ಲಿ 19 ಬೌಂಡರಿ ಒಳಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-351 ಮತ್ತು 227. ದಕ್ಷಿಣ ಆಫ್ರಿಕಾ-162 ಮತ್ತು 298 (ಮಾರ್ಕ್‌ರಮ್‌ 143, ಡಿ ಕಾಕ್‌ 83, ಡಿ ಬ್ರುಯಿನ್‌ 36, ಸ್ಟಾರ್ಕ್‌ 75ಕ್ಕೆ 4, ಹ್ಯಾಝಲ್‌ವುಡ್‌ 61ಕ್ಕೆ 3). ಪಂದ್ಯಶ್ರೇಷ್ಠ: ಮಿಚೆಲ್‌ ಸ್ಟಾರ್ಕ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next