ಕ್ವೀನ್ಸ್ ಲ್ಯಾಂಡ್: ಭಾರತ ವನಿತೆಯರ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ ರೋಚಕ ರಣತಂತ್ರ ರೂಪಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ರನ್ ಹಿನ್ನಡೆಯಿದ್ದರೂ ಇನ್ನಿಂಗ್ಸ್ ಡಿಕ್ಲೇರ್ ಕೊಟ್ಟಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 241 ರನ್ ಗೆ ಒಂಬತ್ತು ವಿಕೆಟ್ ಕಳೆದುಕೊಂಡ ಆಸೀಸ್ ವನಿತೆಯರ ತಂಡ ಡಿಕ್ಲೇರ್ ಘೋಷಣೆ ಮಾಡಿತು. ಭಾರತ ತಂಡಕ್ಕಿಂತ 136 ರನ್ ಹಿನ್ನಡೆಯಿದ್ದರೂ ಆಸೀಸ್ ತಂಡದ ರಣತಂತ್ರ ರೋಚಕವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಸ್ಮೃತಿ ಮಂಧನಾ ಶತಕ, ದೀಪ್ತಿ ಶರ್ಮಾ ಅರ್ಧಶತಕದ ನೆರವಿನಿಂದ 377 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಉತ್ತರವಾಗಿ ಆಸೀಸ್ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದಾಗ ಡಿಕ್ಲೇರ್ ಮಾಡಿದೆ.
ಇದನ್ನೂ ಓದಿ:ಆರ್‌ಸಿಬಿ ಕೈಯಲ್ಲಿ ಪಂಜಾಬ್ ಭವಿಷ್ಯ
ಆಸೀಸ್ ಪರ ಎಲಿಸ್ ಪೆರ್ರಿ 68 ರನ್ ಗಳಿಸಿದರೆ, ಗಾರ್ಡ್ನರ್ 51 ರನ್ ಗಳಿಸಿದರು. ಉತ್ತಮ ದಾಳಿ ನಡೆಸಿದ ಭಾರತದ ಬೌಲರ್ ಗಳು ಆಸೀಸ್ ತಂಡದ ರನ್ ಓಟಕ್ಕೆ ಕಡಿವಾಣ ಹಾಕಿದರು. ಪೂಜಾ ವಸ್ತ್ರಾಕರ್ ಮೂರು ವಿಕೆಟ್, ಗೋಸ್ವಾಮಿ, ಮೇಘಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.
ಇಂದು ಪಂದ್ಯದ ಅಂತಿಮ ದಿನವಾಗಿದ್ದು, ಭಾರತವನ್ನು ಬೇಗನೆ ಕಟ್ಟಿಹಾಕಿ ನಂತರ ರನ್ ಚೇಸ್ ಮಾಡುವ ಗುರಿಯನ್ನು ಆಸೀಸ್ ಹೊಂದಿದೆ. ಎರಡನೇ ಇನ್ನಿಂಗ್ಸ್ ಆಟ ಆರಂಭಿಸಿದ ಭಾರತ ತಂಡ 10 ಓವರ್ ಬಳಿಕ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿದೆ. ಶಫಾಲಿ ವರ್ಮಾ 17 ರನ್ ಮತ್ತು ಸ್ಮೃತಿ ಮಂಧನಾ 15 ರನ್ ಗಳಿಸಿ ಆಡುತ್ತಿದ್ದಾರೆ. ಸದ್ಯ ಭಾರತ ತಂಡ 168 ರನ್ ಮುನ್ನಡೆಯಲ್ಲಿದೆ.