ಸಿಡ್ನಿ : ಭಾರತ – ಆಸೀಸ್ ನಡುವಿನ ಎರಡನೇ ಟಿ-20 ಸಮರದಲ್ಲಿ ಭಾರತ ತಂಡ 6 ವಿಕೆಟ್ ಗಳಿಂದ ಭರ್ಜರಿ ಜಯ ದಾಖಲಿಸಿ ಸರಣಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ ಪಡೆಯ ಬೌಲರ್ ಗಳನ್ನು ಬೆನ್ನಟ್ಟಿದ ಆಸೀಸ್ ಆಟಗಾರರು ಆರಂಭದಿಂದಲೇ ಬಿರುಸಿನಿಂದ ಬ್ಯಾಟ್ ಬೀಸಿದರು. ನಾಯಕನ ಸ್ಥಾನ ತುಂಬಿದ ಮ್ಯಾಥ್ಯೂ ಅಮೋಘ 58 ರನ್ ಗಳಿಸಿ, ತಂಡದ ಸ್ಕೋರ್ ಬೋರ್ಡ್ ಹೆಚ್ಚುವರಿಕೆಗೆ ಪ್ರಮುಖ ಕಾರಣರಾದರು. ಸ್ಟೀವನ್ ಸ್ಮಿತ್ 46 ರನ್ ಗಳ ಕೊಡುಗೆ ನೀಡಿದರು. ಅಂತಿಮ ಕ್ಷಣದವರೆಗೂ ಆಸೀಸ್ ಆಟಗಾರರ ಅಬ್ಬರದ ಬ್ಯಾಟಿಂಗ್ ನಿಂದ 20 ಓವರ್ ನಲ್ಲಿ 5 ವಿಕಟ್ ನಷ್ಟಕ್ಕೆ 194 ರನ್ ಪೇರಿಸಿ 195 ರ ಬೃಹತ್ ಗುರಿಯನ್ನು ಭಾರತಕ್ಕೆ ನೀಡಿತು.
ಸವಾಲಿಗಿಳಿದ ಭಾರತ ತಂಡಕ್ಕೆ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಆಶದಾಯಕ ಆರಂಭವನ್ನು ನೀಡಿದರು.ರಾಹುಲ್ 30 ರನ್ ಗಳಿಸಿ ಔಟ್ ಆದರು. ಧವನ್ ಅಮೋಘವಾದ ಬ್ಯಾಟಿಂಗ್ ನಿಂದ 52 ರನ್ ಗಳ ಕೊಡುಗೆ ನೀಡಿ ಝಂಪ ಎಸೆತದಲ್ಲಿ ಔಟ್ ಆದರು. ಬಳಿಕ ಬಂದ ನಾಯಕ ಕೊಹ್ಲಿ ಬಿರುಸಿನ ಆಟದದ ಮೂಲಕ ತಂಡವನ್ನು ಒತ್ತಡದಿಂದ ಪಾರು ಮಾಡುವ ಪ್ರಯತ್ನ ಮಾಡಿದರು. 42 ರನ್ ಗಳಿಸಿ ವಿರಾಟ್ ಕೊಹ್ಲಿ ಔಟ್ ಸ್ಯಾಮ್ಸ್ ಎಸೆತಕ್ಕೆ ಕೀಪರ್ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಸಂಜು ಸ್ಯಾಮ್ಸನ್ 15 ರನ್ ಗಳಿಸಿ ಬೇಗನೆ ಪೆವಿಲಿಯನ್ ಕಡೆ ದಾಪುಗಾಲಿಟ್ಟರು. ಹಾರ್ದಿಕ್ ಪಾಂಡ್ಯ ಅಂತಿಮ ಓವರ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ನಿಂದ ತಂಡವನ್ನು ಗೆಲುವಿನೆಡೆ ಸಾಗಿಸಿದರು. ಅಂತಿಮ ಓವರ್ ನಲ್ಲಿ ಜಯಗಳಿಸಲು 14 ರನ್ ಗಳ ಅವಶ್ಯಕತೆಯಿತ್ತು. ಸ್ಟ್ರೈಕ್ ನಲ್ಲಿದ್ದ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲಿ 2 ರನ್ ಪೊರೈಸಿದರು. ಎರಡನೇ ಎಸೆತದಲ್ಲಿ ಸಿಕ್ಸರ್ ದಾಖಲಿಸಿದರು. ಮೂರನೇ ಎಸೆತದಲ್ಲಿ ಕಂಬ್ಯಾಕ್ ಮಾಡಿದ ಸ್ಯಾಮ್ಸ್ ಯಾವುದೇ ರನ್ ಬಿಟ್ಟು ಕೊಡಲಿಲ್ಲ. ನಾಲ್ಕನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಬಾರಿಸಿದ ಪಾಂಡ್ಯ ಆಸೀಸ್ ನಿಂದ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರರಾದರು.
22 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ 42 ರನ್ ಗಳಿಸಿ ಅಜೇಯರಾಗಿ ಉಳಿದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಮೂರು ಪಂದ್ಯದ ಟಿ20 ಸರಣಿಯಲ್ಲಿ ಭಾರತ 2-0 ರಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಡಿಸೆಂಬರ್ 8 ರ ಮಂಗಳವಾರದಂದು ನಡೆಯಲಿದೆ.