ಮಣಿಪಾಲ: ಭಾರತ ಮತ್ತು ಚೀನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದ ಆತಂಕಕ್ಕೆ ಒಳಗಾಗಿರುವ ಆಸ್ಟ್ರೇಲಿಯಾವು ಚೀನ ವ್ಯಾಪಾರದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಮುಂದಾಗಿದೆ. ಇದೀಗ ಚೀನಕ್ಕೆ ಪರ್ಯಾಯವಾಗಿ ಏಷ್ಯಾದ ಇತರ ದೈತ್ಯ ಆರ್ಥಿಕತೆಯಾದ ಭಾರತದೊಂದಿಗಿನ ಸಂಪರ್ಕವನ್ನು ವೃದ್ಧಿಸಿಕೊಳ್ಳಲು ಪ್ರಾರಂಭಿಸಿದೆ.
ಬ್ಲೂಮ್‌ಬರ್ಗ್‌ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. 2019ರಲ್ಲಿ ಶೇ. 32ರಷ್ಟು ವಿಸ್ತರಿಸಿದ್ದು ಇದು ಒಂದು ವರ್ಷದ ಹಿಂದಿನ ಅವಧಿಯ ಅಂಕಿ ಅಂಶವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಸ್ಟ್ರೇಲಿಯಾ ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ.
ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವರ್ಚುವಲ್ ಸಭೆ ನಡೆಸಿದರು. ಇಬ್ಬರು ನಾಯಕರು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿ, ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಸಂಬಂಧಗಳಿಗೆ ಮರುಜೀವ ನೀಡಿದ್ದರು. ಇನ್ನು ಕೆಲಸದ ವೀಸಾದ ಮೇಲೆ ಸಾಕಷ್ಟು ಜನರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲು ಸರಕಾರ ಉತ್ಸುಕವಾಗಿದೆ.
ಈ ಮೂಲಕ ಚೀನ ಮತ್ತು ಭಾರತ ನಡುವಿನ ಯುದ್ಧೋನ್ಮಾದದ ನಡುವೆ ಆಸ್ಟ್ರೇಲಿಯಾ ಭಾರತದ ಜತೆ ಅರ್ಥಿಕ ಪಾಳುದಾರಿಕೆ ಏರ್ಪಟ್ಟಂತಾಗಿದೆ. ಆಸ್ಟ್ರೇಲಿಯಾ ಪ್ರಮುಖವಾಗಿ ಕಬ್ಬಿಣದ ಅದಿರನ್ನು ರಫ್ತು ಮಾಡುತ್ತದೆ. ಜತೆ ಆಸ್ಟ್ರೇಲಿಯಾ ಮತ್ತು ಭಾರತ ಕೆಲವು ಪ್ರಮುಖ ವಸ್ತುಗಳನ್ನು ರಫ್ತು ಹಾಗೂ ಆಮದು ಮಾಡುತ್ತದೆ. ಅವುಗಳ ಪೈಕಿ ಕೆಲವು ವಸ್ತುಗಳು ಚೀನದ ಮೂಲಕ ಸಿದ್ಧ ವಸ್ತುವಾಗಿ ಬರುತ್ತದೆ. ಇಲ್ಲಿ ಚೀನ ಭಾರತ ಮತ್ತು ಕೆಲವು ರಾಷ್ಟ್ರಗಳ ವ್ಯವಹಾರದಲ್ಲಿ ಕೊಂಡಿಯಾಗಿ ಕೆಲಸ ಮಾಡುತ್ತಿತ್ತು.
ಇದೀಗ ಆಸ್ಟ್ರೇಲಿಯಾ ಚೀನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಇರಾದೆ ವ್ಯಕ್ತಡಿಸಿದ್ದು, ಏಷ್ಯಾದ ಪರ್ಯಾಯ ಶಕ್ತಿಯಾಗಿರುವ ಭಾರತದತ್ತ ಮುಖ ಮಾಡಿದೆ. ಈ ಮೂಲಕ ಈ ಉಭಯ ರಾಷ್ಟ್ರಗಳ ವ್ಯಾಪಾರ ಮೈತ್ರಿಗೆ ಭಾರತ-ಚೀನ ಉದ್ವಗ್ನತೆ ಹೊಸ ಭಾಷ್ಯ ಬರೆದಂತಾಗಿದೆ. ಈ ಹಿಂದೆ ಚೀನ ಬಿಟ್ಟು ಭಾರತ ಅಥವ ಬಾಂಗ್ಲಾಕ್ಕೆ ಹೊರಡುವ ತನ್ನ ಸಂಸ್ಥೆಗಳಿಗೆ ಜಪಾನ್ ನೆರವು ನೀಡುವುದಾಗಿ ಹೇಳಿತ್ತು.
ಚೀನದಲ್ಲಿರುವ ಜಪಾನ್ ಮೂಲದ ಕಂಪನಿಗಳು ಭಾರತಕ್ಕೆ ಸ್ಥಳಾಂತರಿಸುವ ಯೋಜನೆ ಇದ್ದರೆ, ಸರಕಾರವೂ ಅದಕ್ಕೆ ಪ್ರೋತ್ಸಾಹ ನೀಡಲಿದೆ ಎಂದು ಜಪಾನ್ ಹೇಳಿತ್ತು. ಭಾರತದತ್ತ ಮುಖ ಮಾಡುವ ಸಂಸ್ಥೆಗಳಿಗೆ ಹಣಕಾಸಿನ ನೆರವು ಮತ್ತು ಸಬ್ಸಿಡಿ ನೀಡಲಿದೆ. ಚೀನದಲ್ಲಿನ ತಮ್ಮ ಸಂಸ್ಥೆಯನ್ನು ಸ್ಥಳಾಂತರ ಮಾಡಲು ಸಂಸ್ಥೆ ಇಚ್ಚಿಸಿದರೆ ನೆರವನ್ನು ಒದಗಿಸಲು ಜಪಾನ್ ಸಿದ್ಧವಾಗಿದೆ ಎಂದು ಪರೋಕ್ಷವಾಗಿ ಭಾರತದ ಪರ ಸ್ನೇಹ ಹಸ್ತವನ್ನು ಚಾಚಿತ್ತು.
ಸಬ್ಸಿಡಿ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ, ಜಪಾನ್ ಒಂದು ನಿರ್ದಿಷ್ಟ ಪ್ರದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ತುರ್ತು ಪರಿಸ್ಥಿತಿಯಲ್ಲಿಯೂ ವೈದ್ಯಕೀಯ ಸಾಮಗ್ರಿಗಳು ಮತ್ತು ಎಲೆಕ್ಟ್ರಾನಿಕ್ ಘಟಕಗಳ ಸ್ಥಿರ ಪೂರೈಕೆಯನ್ನು ಒದಗಿಸಲು ಸಾಧ್ಯವಾಗುವಂತಹ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.