ನವದೆಹಲಿ: 37 ವರ್ಷಗಳ ಹಿಂದೆ, ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕಲ್ಲಿದೈಕುರುಚಿ ಎಂಬ ಹಳ್ಳಿಯ ‘ಕುಲಸೇಕರ ಮುದಯಾರ್ ಅರಾಮ್‌ವಲಾತ ನಾಯಕಿ ಅಮ್ಮನ್’ ಎಂಬ ದೇವಸ್ಥಾನದಿಂದ ಕಳವಾಗಿದ್ದ ನಟರಾಜ ದೇವರ ಪುರಾತನ ಕಂಚಿನ ವಿಗ್ರಹವನ್ನು ಪತ್ತೆ ಹಚ್ಚಿ ಪುನಃ ಭಾರತಕ್ಕೆ ತರಲಾಗಿದೆ.
ಸುಮಾರು 600 ವರ್ಷಗಳಷ್ಟು ಹಳೆಯದಾದ, 100 ಕೆಜಿ ತೂಕವಿರುವ ವಿಗ್ರಹವನ್ನು 1982ರ ಜು. 5ರಂದು ಡಕಾಯಿತರು ದೇಗುಲದ ಬಾಗಿಲು ಒಡೆದು ಗರ್ಭಗುಡಿಯ ಒಳಬಂದು ಅಪಹರಿಸಿದ್ದರು. ಅದರ ಜತೆಗೆ, ಪಂಚಲೋಹದ ಶಿವಕಾಮಿ, ಮಣಿಕವಾಸಾಗರ್ ಹಾಗೂ ಶ್ರೀಬಲಿ ನಾಯಗರ್ ದೇವರುಗಳ ವಿಗ್ರಹಗಳೂ ಕಳುವಾಗಿದ್ದವು.
ಮರೆಯಾದ ದಾರಿ ಮತ್ತೆ ಗೋಚರ: ದೇವಸ್ಥಾನದ ಟ್ರಸ್ಟಿಯವರ ದೂರಿನ ಮೇರೆಗೆ, ಕಳ್ಳಿದೈಕುರಿಚಿ ಪೊಲೀಸ್ ಠಾಣೆಯಲ್ಲಿ 1982ರ ಜು. 6ರಂದು ಎಫ್ಐಆರ್ ದಾಖಲಾಗಿತ್ತು. ಅದಾಗಿ, ಎರಡು ವರ್ಷಗಳಾದರೂ ಕಾಣೆಯಾದ ವಿಗ್ರಹದ ಬಗ್ಗೆ ಕಿಂಚಿತ್ತೂ ಮಾಹಿತಿಗಳು ಲಭ್ಯವಾಗದ ಕಾರಣ, ಪೊಲೀಸರು ಪ್ರಕರಣವನ್ನು ಅಂತ್ಯಗೊಳಿಸಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ, ಸ್ಥಳೀಯ ನ್ಯಾಯಾಲಯವು ವಿಗ್ರಹದ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತು. ಅದಕ್ಕೆ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಮಣಿಕವೇಲು ಅವರನ್ನು ಮುಖ್ಯಸ್ಥರನ್ನಾಗಿಸಿತು. ತಿರುನೆಲ್ವೇಲಿ ಜಿಲ್ಲೆಯ ಹೆಚ್ಚುವರಿ ಎಸ್‌ಪಿ ರಾಜಾರಾಂ ಅವರೂ ತಂಡದಲ್ಲಿದ್ದರು. ಆಗ, ಮತ್ತೆ ಆರಂಭವಾದ ತನಿಖೆಯಲ್ಲಿ ಕಳುವಾದ ವಿಗ್ರಹ ದಕ್ಷಿಣ ಆಸ್ಟ್ರೇಲಿಯಾದ ‘ಆರ್ಟ್ ಗ್ಯಾಲರಿ ಆಫ್ ಸೌತ್ ಆಸ್ಟ್ರೇಲಿಯಾ’ (ಎಜಿಎಸ್‌ಎ) ಎಂಬ ವಸ್ತು ಸಂಗ್ರಹಾಲಯವೊಂದರಲ್ಲಿ ಇರುವುದು ಪತ್ತೆಯಾಗಿತ್ತು.
ಭಾರತಕ್ಕೆ ಬಂದ ನಟರಾಜ: ವಿಗ್ರಹ ಹಸ್ತಾಂತರಕ್ಕೆ ಸಂಬಂಧಿಸಿದಂತೆ, ಭಾರತ ಮತ್ತು ಆಸ್ಟ್ರೇಲಿಯಾ ಸರ್ಕಾರಗಳ ನಡುವೆ ಸಾಕಷ್ಟು ಪತ್ರ ವ್ಯವಹಾರಗಳು ನಡೆದ ನಂತರ, ಇತ್ತೀಚೆಗೆ, ಎಜಿಎಸ್‌ಎ ರಿಜಿಸ್ಟ್ರಾರ್ ಜೇನ್ ರಾಬಿನ್ಸನ್ ಅವರು, ತನಿಖಾ ತಂಡಕ್ಕೆ ವಿಗ್ರಹವನ್ನು ಹಸ್ತಾಂತರಿಸಿದ್ದಾರೆ. ಕಾನೂನು ಕ್ರಮ ನಂತರ ದೇಗುಲಕ್ಕೆ ನಟರಾಜನನ್ನು ಮರಳಿಸಲಾಗುತ್ತದೆ.
ವಿಗ್ರಹ ವಿಶೇಷ
•16ನೇ ಶತಮಾನದಲ್ಲಿ ತಯಾರು
•600 ವರ್ಷಗಳಷ್ಟು ಹಿಂದಿನದ್ದು
•ಬಳಕೆಯಾದ ಪ್ರಧಾನ ಲೋಹ ಕಂಚು
•ವಿಗ್ರಹದ ತೂಕ ಸುಮಾರು 100 ಕೆಜಿ
•ವಿಗ್ರಹದ ಎತ್ತರ ಎರಡೂವರೆ ಅಡಿ