Advertisement

ವಿಶ್ವ ಗೆಲ್ಲಲಿ ನಮ್ಮ ವನಿತೆಯರು…

10:14 AM Mar 09, 2020 | Sriram |

ಮೆಲ್ಬರ್ನ್: ಇದು ಚರಿತ್ರೆ ನಿರ್ಮಿಸುವ ಸಮಯ. ಭಾರತ ಹಾಗೂ ಮಿರುಗುವ ಟಿ20 ವಿಶ್ವಕಪ್‌ ಟ್ರೋಫಿ ನಡುವೆ ಅಡ್ಡಿಯಾಗಿ ನಿಂತಿರುವ ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ ಉರುಳಿಸುವ ಹೊತ್ತು. ಅಜೇಯ ದಂಡಯಾತ್ರೆ ನಡೆಸಿರುವ ಹರ್ಮನ್‌ಪ್ರೀತ್‌ ಕೌರ್‌ ಬಳಗ ರವಿವಾರದ ಮೆಲ್ಬರ್ನ್ ಫೈನಲ್‌ನಲ್ಲೂ ಮೇಲುಗೈ ಸಾಧಿಸಿ ಚಾಂಪಿಯನ್‌ ಆಗಿ ಮೂಡಿಬರುವುದನ್ನು ಕಾಣಲು ಕೋಟಿ ಕಂಗಳು ಕಾತರದಿಂದ ಕಾಯುತ್ತಿವೆ. ಈ ಅಭಿಯಾನದಲ್ಲಿ ನಮ್ಮವರು ಯಶಸ್ವಿಯಾಗಲಿ, ಕಪ್‌ ನಮ್ಮದಾಗಲಿ ಎಂಬ ಹಾರೈಕೆ ಹರಿದು ಬರುತ್ತಿದೆ…

Advertisement

ಇತಿಹಾಸ ಆಸೀಸ್‌ ಪರ
ಈವರೆಗಿನ ಇತಿಹಾಸ, ಸಾಧನೆಯನ್ನೆಲ್ಲ ಅವಲೋಕಿ ಸುವಾಗ ಭಾರತಕ್ಕಿಂತ ಆಸ್ಟ್ರೇಲಿಯ ಎಷ್ಟೋ ಮುಂದಿದೆ ಎಂಬುದನ್ನು ಒಪ್ಪಲೇಬೇಕು. ಹಾಲಿ ಚಾಂಪಿಯನ್‌ ಕಾಂಗರೂಗಳಿಗೆ ಇದು ಸತತ 6ನೇ ಫೈನಲ್‌. ಈವರೆಗೆ 4 ಸಲ ಕಿರೀಟ ಏರಿಸಿಕೊಂಡಿದೆ. ಪ್ರಶಸ್ತಿಗಳ ಹ್ಯಾಟ್ರಿಕ್‌ ಕೂಡ ಸಾಧಿಸಿದೆ. ಫೈನಲ್‌ನಲ್ಲಿ ಸೋತದ್ದು ಒಮ್ಮೆ ಮಾತ್ರ. ಅಲ್ಲದೇ ತವರಿನಲ್ಲೇ ಫೈನಲ್‌ ಆಡುವ ಅವಕಾಶ ಮೊದಲ ಸಲ ಎದುರಾಗಿದೆ. ಇದನ್ನು ಮೆಗ್‌ ಲ್ಯಾನಿಂಗ್‌ ಪಡೆ ಅಷ್ಟು ಸುಲಭದಲ್ಲಿ ಬಿಟ್ಟುಕೊಡುವ ಸಾಧ್ಯತೆ ಇಲ್ಲವೇ ಇಲ್ಲ. ಅಂದಮಾತ್ರಕ್ಕೆ ಆಸ್ಟ್ರೇಲಿಯ ಫೇವರಿಟ್‌ ಎಂದೇನೂ ಅಲ್ಲ.

ಅಜೇಯ ಓಟ,ಮೊದಲ ಫೈನಲ್‌
ಇನ್ನೊಂದೆಡೆ ಭಾರತಕ್ಕೆ ಇದು ಮೊದಲ ಫೈನಲ್‌. ಜತೆಗೆ ಅಜೇಯ ಓಟ. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯವನ್ನೇ ಉರುಳಿಸಿದ ಪರಾಕ್ರಮ. ಇದೇ ಸ್ಫೂರ್ತಿಯಲ್ಲಿ ಫೈನಲ್‌ನಲ್ಲೂ ಆಸ್ಟ್ರೇಲಿಯವನ್ನು ಸೋಲಿಸಬಲ್ಲೆ ಎಂಬ ವಿಶ್ವಾಸ ಮನೆಮಾಡಿಕೊಂಡಿದ್ದರೆ ಅದು ಸಹಜ. ಆದರೆ ಫೈನಲ್‌ ಎನ್ನುವುದು “ಡಿಫ‌ರೆಂಟ್‌ ಬಾಲ್‌’ ಗೇಮ್‌. ಹೀಗಾಗಿ ಒತ್ತಡ ಭಾರತದ ಮೇಲಷ್ಟೇ ಅಲ್ಲ, ಆಸೀಸ್‌ ಮೇಲೂ ಇದೆ.

1983ರ ಪ್ರುಡೆನ್ಶಿಯಲ್‌ ವಿಶ್ವಕಪ್‌ನಲ್ಲಿ ಕಪಿಲ್‌ ಪಡೆ ತನ್ನ ಆರಂಭಿಕ ಪಂದ್ಯದಲ್ಲೇ ಹಿಂದಿನೆರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸನ್ನು ಮಣಿಸಿ, ಬಳಿಕ ಫೈನಲ್‌ನಲ್ಲೂ ಕೆರಿಬಿಯನ್ನರನ್ನು ಕೆಡವಿ ಇತಿಹಾಸ ನಿರ್ಮಿಸಿದ್ದನ್ನು ಈ ಸಂದರ್ಭದಲ್ಲೊಮ್ಮೆ ನೆನಪಿಸಿಕೊಂಡರೆ ವಿಶ್ವಕಪ್‌ ಮಹಿಮೆ ಏನೆಂಬುದು ಅರಿವಾಗುತ್ತದೆ.

ಅದೃಷ್ಟದ ಜತೆ ಸಾಧನೆ ಮುಖ್ಯ
ವಿಶ್ವಕಪ್‌ ಎನ್ನುವುದು ಅದೃಷ್ಟದ ಆಟ. ಆದರೆ ಸಾಧನೆಯೂ ಅಷ್ಟೇ ಮುಖ್ಯ. ಅದೃಷ್ಟದ ವಿಚಾರದಲ್ಲಿ ಆಸ್ಟ್ರೇಲಿಯ ಮುಂದಿದ್ದರೆ, ಸಾಧನೆಯ ಹಾದಿಯಲ್ಲಿ ಭಾರತವೇ ಮೇಲುಗೈ ಹೊಂದಿದೆ. ಆಸ್ಟ್ರೇಲಿಯ ಸಹಿತ ಲೀಗ್‌ ಹಂತದ ನಾಲ್ಕೂ ಎದುರಾಳಿಗಳನ್ನು ಮಣಿಸಿದ್ದು ಕೌರ್‌ ಪಡೆಯ ಸಾಧನೆ.

Advertisement

ಸೆಮಿಫೈನಲ್‌ ಗೆದ್ದು ಫೈನಲ್‌ಗೆ
ಹೋಗಬೇಕಿತ್ತಾದರೂ ಇದಕ್ಕೆ ಪ್ರಕೃತಿ ಸಹಕರಿಸಲಿಲ್ಲ. ಪಂದ್ಯ ನಡೆದದ್ದೇ ಆದರೆ ಏನಾಗುತ್ತಿತ್ತೋ ಗೊತ್ತಿಲ್ಲ!ಸೆಮಿಫೈನಲ್‌ ಗೆಲುವು ಆಸ್ಟ್ರೇಲಿಯದ ಅದೃಷ್ಟವನ್ನು ಸಾರುತ್ತದೆ. ಭಾರತ-ಇಂಗ್ಲೆಂಡ್‌ ಪಂದ್ಯ ಭಾರೀ ಮಳೆಯಿಂದ ರದ್ದಾದರೂ ಸಂಜೆ ಅದೇ ಸಿಡ್ನಿ ಅಂಗಳದಲ್ಲಿ ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ ಮತ್ತೂಂದು ಸೆಮಿಫೈನಲ್‌ಗೆ ಮಳೆ ಸಹಕರಿಸಿತು. ಅಕಸ್ಮಾತ್‌ ಈ ಪಂದ್ಯವೂ ರದ್ದಾಗಿದ್ದರೆ “ಬಿ’ ವಿಭಾಗದ ಅಗ್ರಸ್ಥಾನಿಯಾಗಿದ್ದ ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶಿಸುತ್ತಿತ್ತು, ಆಸ್ಟ್ರೇಲಿಯ ಹೊರಬೀಳುತ್ತಿತ್ತು. ಆದರೆ ಫೈನಲ್‌ನಲ್ಲಿ ಲಕ್‌ ಯಾರಿಗಿದೆ ಎಂಬುದಕ್ಕೆ ರವಿವಾರ ಸಂಜೆಯ ತನಕ ಕಾಯಬೇಕಾದುದು ಅನಿವಾರ್ಯ.

150 ರನ್‌ ಗುರಿ ಆಗಬೇಕಿದೆ…
ಭಾರತದ ಬ್ಯಾಟಿಂಗ್‌ ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಅವರನ್ನು ಹೆಚ್ಚು ಅವಲಂಬಿಸಿದೆ. ಅವರ ಪವರ್‌ ಪ್ಲೇ ಆಟ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದೆ. ಫೈನಲ್‌ನಲ್ಲೂ ಶಫಾಲಿ ಅಮೋಘ ಆರಂಭ ಒದಗಿಸಬೇಕಾದುದು ಅನಿವಾರ್ಯ. ಏಕೆಂದರೆ ಉಳಿದ ಆಟಗಾರ್ತಿಯರಿಂದ ಇನ್ನೂ ದೊಡ್ಡ ಮೊತ್ತವಾಗಲಿ, ಸ್ಥಿರ ಪ್ರದರ್ಶನವಾಗಲೀ ಕಂಡುಬಂದಿಲ್ಲ. ತಂಡದ ಮೊತ್ತವಿನ್ನೂ ನೂರೈವತ್ತರ ಗಡಿ ದಾಟಿಲ್ಲ. ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದರೆ 150 ರನ್‌ ಭಾರತದ ಮೊದಲ ಗುರಿ ಆಗಿರಬೇಕು. ಚೇಸಿಂಗ್‌ ಲಭಿಸಿದರೆ ಸವಾಲು ಹೆಚ್ಚು ಕಠಿನವಾಗಬಹುದು.

ಭಾರತ ಸಾಮಾನ್ಯ ಮೊತ್ತವನ್ನೂ ಯಶಸ್ವಿಯಾಗಿ ಉಳಿಸಿಕೊಳ್ಳಲು ಶಿಸ್ತಿನ ಬೌಲಿಂಗ್‌ ಕಾರಣ. ಅದರಲ್ಲೂ ಸ್ಪಿನ್‌ ಅಸ್ತ್ರ ಭಾರೀ ಅಪಾಯಕಾರಿಯಾಗಿ ಗೋಚರಿಸಿದೆ. ಲೆಗ್ಗಿ ಪೂನಂ ಯಾದವ್‌, ಎಡಗೈ ಸ್ಪಿನ್ನರ್‌ಗಳಾದ ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌, ಆಫ್ಸ್ಪಿನ್ನರ್‌ ದೀಪ್ತಿ ಶರ್ಮ ಫೈನಲ್‌ನಲ್ಲೂ ಮ್ಯಾಜಿಕ್‌ ಮಾಡಬಲ್ಲರೆಂಬ ವಿಶ್ವಾಸ ಇದೆ. ಪೇಸ್‌ ಬೌಲರ್‌ ಶಿಖಾ ಪಾಂಡೆ ಕೂಡ ವಿಕೆಟ್‌ ಶಿಕಾರಿಯಲ್ಲಿ ಹಿಂದೆ ಬಿದ್ದಿಲ್ಲ.

ಸ್ಪಿನ್‌ ಆಕ್ರಮಣ ತಡೆದೀತೇ?
ಆಸ್ಟ್ರೇಲಿಯ ಮೇಲುಗೈ ಸಾಧಿಸಬೇಕಾದರೆ ಭಾರತದ ಸ್ಪಿನ್‌ ಆಕ್ರಮಣವನ್ನು ಮೆಟ್ಟಿ ನಿಲ್ಲಬೇಕಾದುದು ಅನಿವಾರ್ಯ. ಆರಂಭಿಕ ಪಂದ್ಯದಲ್ಲಿ ಪೂನಂ ಯಾದವ್‌ ಸ್ಪಿನ್ನಿಗೆ ಆಸೀಸ್‌ ಪೂರ್ತಿ ಶರಣಾಗಿತ್ತು. ಫೈನಲ್‌ನಲ್ಲಿ ಮತ್ತೆ ಸ್ಪಿನ್‌ ಭೂತ ಕಾಡದಿರಲೆಂದು ಆತಿಥೇಯ ಆಟಗಾರ್ತಿಯರೆಲ್ಲ ಸ್ಪಿನ್‌ ಬೌಲಿಂಗ್‌ನಲ್ಲೇ ಕಠಿನ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದಾರೆ. ಭಾರತೀಯ ಸ್ಪಿನ್ನರ್‌ಗಳ ವೀಡಿಯೋ ದೃಶ್ಯಾವಳಿಯನ್ನೂ ಅವಲೋಕಿಸಿದ್ದಾರೆ.

ಫೈನಲ್‌ನಲ್ಲೂ ಭಾರತ ನಾಲ್ವರು ಸ್ಪಿನ್ನರ್‌ಗಳನ್ನು ದಾಳಿಗಿಳಿಸುವ ಯೋಜನೆಯಲ್ಲಿದೆ. ಇದು ಕ್ಲಿಕ್‌ ಆದರೆ ಖಂಡಿತ ಲಾಭ ಇದೆ. ಅಕಸ್ಮಾತ್‌ ಆತಿಥೇಯರು ಸ್ಪಿನ್ನರ್‌ಗಳ ಮೇಲೆ ಆಕ್ರಮಣ ಮಾಡಿದರೆ ಪರಿಸ್ಥಿತಿ ಬಿಗಡಾಯಿಸಬಹುದು. ಆದರೆ ಸ್ಟಾರ್‌ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ಗಾಯಾಳಾಗಿ ಹೊರಗುಳಿದಿರುವುದು ಆಸೀಸ್‌ಗೆ ಬಿದ್ದ ದೊಡ್ಡ ಹೊಡೆತ.

ಸಂಭಾವ್ಯ ತಂಡಗಳು
ಭಾರತ
ಶಫಾಲಿ ವರ್ಮ, ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ತನಿಯಾ ಭಾಟಿಯ, ಶಿಖಾ ಪಾಂಡೆ, ರಾಧಾ ಯಾದವ್‌, ಪೂನಂ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌.

ಆಸ್ಟ್ರೇಲಿಯ
ಬೆತ್‌ ಮೂನಿ, ಅಲಿಸ್ಸಾ ಹೀಲಿ, ಮೆಗ್‌ ಲ್ಯಾನಿಂಗ್‌ (ನಾಯಕಿ), ಆ್ಯಶ್ಲಿ ಗಾರ್ಡನರ್‌, ರಶೆಲ್‌ ಹೇನ್ಸ್‌, ಜೆಸ್‌ ಜೊನಾಸೆನ್‌, ನಿಕೋಲಾ ಕ್ಯಾರಿ, ಡೆಲಿಸ್ಸಾ ಕಿಮ್ಮಿನ್ಸ್‌, ಜಾರ್ಜಿಯಾ ವೇರ್‌ಹ್ಯಾಮ್‌/ಮೋಲಿ ಸ್ಟ್ರಾನೊ, ಸೋಫಿ ಮೊಲಿನಾಕ್ಸ್‌, ಮೆಗಾನ್‌ ಶಟ್‌.

ಪಂದ್ಯ ಟೈಗೊಂಡರೆ ಸತತ ಸೂಪರ್‌ ಓವರ್‌!
ಪಂದ್ಯ ಟೈಗೊಂಡರೆ ವಿಜೇತರನ್ನು ನಿರ್ಧರಿಸಲು ಸೂಪರ್‌ ಓವರ್‌ ಇರಲಿದೆ. ಅಲ್ಲೂ ಟೈ ಆದರೆ ಸ್ಪಷ್ಟ ಫ‌ಲಿತಾಂಶ ಲಭಿಸುವ ವರೆಗೆ ಸೂಪರ್‌ ಓವರ್‌ ಆಡಿಸಲಾಗುತ್ತದೆ!

ಮಹಿಳಾ ಕ್ರಿಕೆಟಿಗೆ ದಾಖಲೆ ಪ್ರೇಕ್ಷಕರು
ಲೀಗ್‌ ಪಂದ್ಯಗಳಿಗೆ ಮೆಲ್ಬರ್ನ್ನ “ಜಂಕ್ಷನ್‌ ಓವಲ್‌’ ಸಾಕ್ಷಿಯಾಗಿತ್ತು. ಆದರೆ ಫೈನಲ್‌ ಪಂದ್ಯ ಐತಿಹಾಸಿಕ “ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌’ನಲ್ಲಿ (ಎಂಸಿಜಿ) ನಡೆಯಲಿದೆ. ಇದು ವಿಶ್ವದ 2ನೇ ಅತೀ ದೊಡ್ಡ ಕ್ರೀಡಾಂಗಣ. 90 ಸಾವಿರ ವೀಕ್ಷಕರ ಸಾಮರ್ಥ್ಯವನ್ನು ಇದು ಹೊಂದಿದೆ. ಹೀಗಾಗಿ ವನಿತಾ ಕ್ರಿಕೆಟ್‌ ಇತಿಹಾಸದಲ್ಲಿ ಇದೊಂದು “ಬಿಗ್‌ ಫೈನಲ್‌’ ಆಗಲಿದೆ.

ಈಗಾಗಲೇ ಫೈನಲ್‌ ಪಂದ್ಯದ 75 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಆಸ್ಟ್ರೇಲಿಯ ತಂಡ ಫೈನಲ್‌ ತಲುಪಿದ ಬಳಿಕ ಟಿಕೆಟ್‌ ಮಾರಾಟದಲ್ಲಿ ಭಾರೀ ಪ್ರಗತಿಯಾಗಿತ್ತು. ರವಿವಾರ ಅಪರಾಹ್ನದ ಹೊತ್ತಿಗೆ ಪೂರ್ತಿ 90 ಸಾವಿರ ಆಸನ ಭರ್ತಿಯಾದರೂ ಅಚ್ಚರಿ ಇಲ್ಲ.

ಆಗ ಹರ್ಮನ್‌ಪ್ರೀತ್‌ ಪಡೆಯ ಕೆಲವು ಸದಸ್ಯರು ಎರಡನೇ ಬೃಹತ್‌ ಸಂಖ್ಯೆಯ ವೀಕ್ಷಕರ ಸಮ್ಮುಖದಲ್ಲಿ ಐಸಿಸಿ ವಿಶ್ವಕಪ್‌ ಫೈನಲ್‌ ಆಡಿದಂತಾಗುತ್ತದೆ. 2017ರ ಭಾರತ-ಇಂಗ್ಲೆಂಡ್‌ ನಡುವಿನ ಲಾರ್ಡ್ಸ್‌ ವಿಶ್ವಕಪ್‌ ಏಕದಿನ ಫೈನಲ್‌ನಲ್ಲೂ ಸ್ಟೇಡಿಯಂ ಕಿಕ್ಕಿರಿದು ತುಂಬಿತ್ತು.

ಭಾರತದ ಪರ ಬ್ಯಾಟ್‌ ಬೀಸಿದ ಬ್ರೆಟ್‌ ಲೀ!
ಆಸ್ಟ್ರೇಲಿಯದ ಮಾಜಿ ವೇಗಿ ಬ್ರೆಟ್‌ ಲೀ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಪರ ಬ್ಯಾಟ್‌ ಬೀಸಿ ಅಚ್ಚರಿ ಹುಟ್ಟಿಸಿದ್ದಾರೆ. ಭಾರತ ಮೊದ ಸಲ ಫೈನಲ್‌ ಪ್ರವೇಶಿಸಿದ್ದು, ಗೆದ್ದರೆ ಕ್ರಿಕೆಟ್‌ ಆರಾಧಕರ ದೇಶದಲ್ಲಿ ವನಿತಾ ಕ್ರಿಕೆಟಿಗೆ ದೊಡ್ಡದೊಂದು ಯಶಸ್ಸು ಸಿಕ್ಕಿದಂತಾಗುತ್ತದೆ ಎಂದಿದ್ದಾರೆ.

“ಆಸ್ಟ್ರೇಲಿಯದವನಾಗಿ ನಾನು ಮೆಗ್‌ ಲ್ಯಾನಿಂಗ್‌ ಪಡೆಯನ್ನು ಬಿಟ್ಟುಕೊಡುವುದಿಲ್ಲ. ಆಸ್ಟ್ರೇಲಿಯ ವಿಶ್ವಕಪ್‌ ಗೆಲ್ಲುವುದಕ್ಕಿಂತ ಮಿಗಿಲಾದ ಸಂತಸ ಬೇರೊಂದಿಲ್ಲ. ಆದರೆ ಭಾರತ ಮೊದಲ ಸಲ ಕಪ್‌ ಎತ್ತಿದರೆ ಕ್ರಿಕೆಟನ್ನು ಅತಿಯಾಗಿ ಪ್ರೀತಿಸುವ ದೇಶದಲ್ಲಿ ವನಿತಾ ಕ್ರಿಕೆಟಿಗೆ ದೊಡ್ಡ ಯಶಸ್ಸು ಸಿಗಲಿದೆ, ಅದು ಭಾರೀ ಸಂಚಲನ ಮೂಡಿಸಲಿದೆ’ ಎಂದು ಬ್ರೆಟ್‌ ಲೀ ತಮ್ಮ ಅಂಕಣವೊಂದರಲ್ಲಿ ಬರೆದಿದ್ದಾರೆ.

ಮಳೆ ಇಲ್ಲ, ಪಿಚ್‌ ಹೇಗೆ?
ಸಿಡ್ನಿಯ ಸೆಮಿಫೈನಲ್‌ನಂತೆ ಮೆಲ್ಬರ್ನ್ ಫೈನಲ್‌ ಪಂದ್ಯಕ್ಕೆ ಮಳೆಯಿಂದ ಯಾವುದೇ ಅಡಚಣೆಯಾಗುವ ಸಾಧ್ಯತೆ ಇಲ್ಲ. ಅಕಸ್ಮಾತ್‌ ಮಳೆ ಬಂದರೂ ಮೀಸಲು ದಿನವಿದೆ. ಹೀಗಾಗಿ ಆ ಚಿಂತೆ ಇಲ್ಲ.

ಆದರೆ ಫೈನಲ್‌ ಪಂದ್ಯದ ಪಿಚ್‌ ಹೇಗಿದ್ದೀತು ಎಂಬ ಬಗ್ಗೆ ತೀವ್ರ ಕುತೂಹಲವಿದೆ. ಕಾರಣ, ಇದು ಎಂಸಿಜಿಯಲ್ಲಿ ನಡೆಯುವ ಈ ಕೂಟದ ಮೊದಲ ಪಂದ್ಯ. ಇಲ್ಲಿನ “ಜಂಕ್ಷನ್‌ ಓವಲ್‌’ ಲೀಗ್‌ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದರು. ಎಂಸಿಜಿ ಟ್ರ್ಯಾಕ್‌ “ಹಾರ್ಡ್‌ ಮತ್ತು ಫ್ಲ್ಯಾಟ್‌’ ಆಗಿ ಗೋಚರಿಸುತ್ತಿದೆ. ಭಾರತದ ಸ್ಪಿನ್‌ ದಾಳಿ ಗಂಡಾಂತರ ತಂದೀತೆಂಬ ಕಾರಣಕ್ಕಾಗಿ ಎಂಸಿಜಿ ಪಿಚ್‌ ಅನ್ನು ವೇಗಿಗಳಿಗೆ ಅಥವಾ ಬ್ಯಾಟಿಂಗಿಗೆ ಹೆಚ್ಚಿನ ನೆರವು ನೀಡುವ ರೀತಿಯಲ್ಲಿ ನಿರ್ಮಿಸಿದ್ದರೆ ಆಗ ಕೌರ್‌ ಬಳಗದ ಲೆಕ್ಕಾಚಾರ ತಲೆಕೆಳಗಾಗಲೂಬಹುದು.

ಕಪ್‌ ಗೆದ್ದು ಬನ್ನಿ: ಮಿಥಾಲಿ ಹಾರೈಕೆ
ಭಾರತ ವನಿತಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ರವಿವಾರದ ಫೈನಲ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗಕ್ಕೆ ಶುಭ ಹಾರೈಸಿದ್ದಾರೆ. ಸೀರೆಯುಟ್ಟು ಬ್ಯಾಟಿಂಗ್‌ ಮಾಡುತ್ತಿರುವ ವೀಡಿಯೋ ಒಂದನ್ನು ಅಂತರ್ಜಾಲದಲ್ಲಿ ಪ್ರಕಟಿಸಿರುವ ಮಿಥಾಲಿ, “ನಾವೂ ಇದನ್ನೂ ಸಾಧಿಸಬಲ್ಲೆವು ಎನ್ನುವುದನ್ನು ವಿಶ್ವಕ್ಕೆ ತೋರಿಸಿ. ಭಾರತೀಯರೆ, ಕಿರೀಟವನ್ನು ಗೆದ್ದು ಬನ್ನಿ…’ ಎಂದು ಹೇಳಿದ್ದಾರೆ.

2018ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ ಆಘಾತಕಾರಿಯಾಗಿ ಸೋತಿತ್ತು. ಆಗ ಮಿಥಾಲಿ ರಾಜ್‌ ಅವರನ್ನು ತಂಡದಿಂದ ಕೈಬಿಟ್ಟ ಪರಿಣಾಮ, ನಾಯಕಿ ಹರ್ಮನ್‌ಪ್ರೀತ್‌ ವಿವಾದಕ್ಕೆ ತುತ್ತಾಗಿದ್ದರು.

ವನಿತಾ ಕ್ರಿಕೆಟಿಗರಿಗೆ ಪ್ರಧಾನಿಗಳ ಶುಭಾಶಯ
ರವಿವಾರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸೆಣಸಲಿರುವ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳಿಗೆ ಎರಡೂ ದೇಶಗಳ ಪ್ರಧಾನಿಗಳು ಶುಭ ಹಾರೈಸಿದ್ದಾರೆ.

“ಭಾರತ-ಆಸ್ಟ್ರೇಲಿಯ ತಂಡಗಳು ಫೈನಲ್‌ನಲ್ಲಿ ಎದುರಾಗುವುದಕ್ಕಿಂತ ಮಿಗಿಲಾದುದು ಮತ್ತೂಂದಿಲ್ಲ. ಎರಡೂ ತಂಡಗಳಿಗೆ ಶುಭ ಹಾರೈಕೆಗಳು. ಜತೆಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು. ಅತ್ಯುತ್ತಮ ತಂಡ ಗೆಲ್ಲಲಿ. ನೀಲಿ ಪರ್ವತದಂತೆ ಎಂಸಿಜಿ ಕ್ರೀಡಾಂಗಣ ಕೂಡ ಕಂಗೊಳಿಸಲಿ’ ಎಂದು ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

“ಭಾರೀ ಸಂಖ್ಯೆಯ ವೀಕ್ಷಕರ ಸಮ್ಮುಖದಲ್ಲಿ ಎರಡು ಶ್ರೇಷ್ಠ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ. ಇದೊಂದು ಬಿಗ್‌ ನೈಟ್‌, ಸೂಪರ್‌ ಮ್ಯಾಚ್‌ಗೆ ಸಾಕ್ಷಿ ಯಾಗಲಿದೆ. ಗೆಲ್ಲುವುದು ಆಸ್ಟ್ರೇಲಿಯವೇ…’ ಎಂಬುದು ಆಸೀಸ್‌ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರ ಟ್ವೀಟ್‌.

ನಮ್ಮೆಲ್ಲರಿಗೂ ಇದೊಂದು ವಿಶೇಷ ಹಾಗೂ ಸ್ಮರಣೀಯ ಕ್ಷಣ. 90 ಸಾವಿರ ವೀಕ್ಷಕರ ಸಮ್ಮುಖದಲ್ಲಿ ನಾವು ಫೈನಲ್‌ ಆಡುತ್ತಿದ್ದೇವೆ. ಇದನ್ನು ಸಂಪೂರ್ಣವಾಗಿ ಆಸ್ವಾದಿಸುತ್ತ ಗೆಲುವನ್ನು ಒಲಿಸಿಕೊಳ್ಳುವುದು ನಮ್ಮ ಗುರಿ.
– ಹರ್ಮನ್‌ಪ್ರೀತ್‌ ಕೌರ್‌

ನನ್ನ ಸಹಿತ ನಮ್ಮಲ್ಲನೇಕರಿಗೆ ಇದೊಂದು ಹೊಸ ಅನುಭವ. ಇಂಥದೊಂದು ಫೈನಲ್‌ನಲ್ಲಿ ಭಾಗಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಎಂಸಿಜಿಯಲ್ಲಿ ಕಪ್‌ ಉಳಿಸಿಕೊಳ್ಳುವತ್ತ ನಮ್ಮ ಪ್ರಯತ್ನ ಸಾಗಲಿದೆ.
– ಮೆಗ್‌ ಲ್ಯಾನಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next