Advertisement
ಕೋವಿಡ್-19 ಕಾರಣದಿಂದ ಆಸ್ಟ್ರೇಲಿಯ ಆತಿಥ್ಯದ ಟಿ20 ವಿಶ್ವಕಪ್ ನಡೆಯದೇ ಹೋದರೆ ಇದನ್ನು 2022ಕ್ಕೆ ಮುಂದೂಡಲಾಗುತ್ತದೆ ಎಂಬುದು ಭಾರೀ ಪ್ರಚಾರ ಪಡೆದ ಸುದ್ದಿ. ಆದರೆ ಗುರುವಾರ ನಡೆದ ಐಸಿಸಿ ಕಾನ್ಫರೆನ್ಸ್ ನಲ್ಲಿ ಎಲ್ಲ ಸಾಧ್ಯತೆಯನ್ನು ಜೂ. 10ರ ತನಕ ಕಾದಿರಿಸಲು ನಿರ್ಧರಿಸಲಾಗಿದೆ. ಈ ನಡುವೆ ಈ ವರ್ಷ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯದೇ ಹೋದರೆ 2022ರ ಬದಲು 2021ರ ಟಿ20 ವಿಶ್ವಕಪ್ ಆತಿಥ್ಯ ತನಗಿರಲಿ ಎಂಬುದಾಗಿ “ಕ್ರಿಕೆಟ್ ಆಸ್ಟ್ರೇಲಿಯ’ ಐಸಿಸಿಗೆ ಪತ್ರ ಬರೆದಿದ್ದಾಗಿ ವರದಿಯಾಗಿದೆ. 2021ರ ಅಂತ್ಯದಲ್ಲಿ ಈ ವಿಶ್ವಕಪ್ ನಡೆಸುವ ಹಕ್ಕು ಭಾರತದ್ದಾಗಿದೆ.
ಇದು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಬಿಸಿಸಿಐ ತಂತ್ರವೆಂಬುದು ರಹಸ್ಯವೇನಲ್ಲ. ಒಂದು ವೇಳೆ ಈ ವರ್ಷದ ಟಿ20 ವಿಶ್ವಕಪ್ ಪಂದ್ಯಾವಳಿ ಮುಂದೂಡಲ್ಪಟ್ಟರೆ ಆ ಅವಕಾಶದಲ್ಲಿ ಐಪಿಎಲ್ ನಡೆಸುವುದು ಬಿಸಿಸಿಐ ಯೋಜನೆ! ಆದ್ದರಿಂದ ಭಾರತ 2021ರ ಟಿ20 ಆತಿಥ್ಯವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಡುವಂತೆ ಐಸಿಸಿಗೆ ಸೂಚಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
Related Articles
ಕೋವಿಡ್-19 ಕಾರಣದಿಂದ ಈ ವರ್ಷದ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ನಡೆಸುವುದು ಭಾರೀ ಸವಾಲು, ಅಷ್ಟೇ ರಿಸ್ಕ್ ಕೂಡ ಹೌದು. ಅಕಸ್ಮಾತ್ ಇದನ್ನು ನಡೆಸದೇ ಹೋದರೆ ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂಥದೊಂದು ಅಡಕತ್ತರಿಯಲ್ಲಿ ಸಿಲುಕಿದೆ “ಕ್ರಿಕೆಟ್ ಆಸ್ಟ್ರೇಲಿಯ’.
Advertisement
“ವೇಳಾಪಟ್ಟಿಯಂತೆ ಟಿ20 ವಿಶ್ವಕಪ್ ನಡೆದೀತೆಂಬುದು ನಮ್ಮ ನಂಬಿಕೆ. ಆದರೆ ಕೋವಿಡ್-19 ಕಾರಣದಿಂದ ಇದನ್ನು ನಡೆಸುವುದೂ ಭಾರೀ ಸವಾಲಾಗಿದೆ. ವೀಕ್ಷಕರ ನಿರ್ಬಂಧ ಮುಂದುವರಿದರೆ ಪಂದ್ಯಗಳು ಖಾಲಿ ಸ್ಟೇಡಿಯಂಗಳಲ್ಲಿ ಆಡಿಸಬೇಕಾಗುತ್ತದೆ. ಇದರಿಂದ ನಮ್ಮ ಕ್ರಿಕೆಟ್ ಮಂಡಳಿಗೆ ಸುಮಾರು 80 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಳಷ್ಟು ನಷ್ಟ ಸಂಭವಿಸಲಿದೆ’ ಎಂದು ಸಿಎಒ ಕೆವಿನ್ ರಾಬರ್ಟ್ಸ್ ಹೇಳಿದ್ದಾರೆ.